ADVERTISEMENT

ಧರ್ಮಸ್ಥಳ ಪ್ರಕರಣ: ಎನ್‌ಐಎ ತನಿಖೆಗೆ ವಹಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:09 IST
Last Updated 14 ಆಗಸ್ಟ್ 2025, 6:09 IST
ಮೊಳಕಾಲ್ಮುರಿನಲ್ಲಿ ಬುಧವಾರ ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸಲು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಮೊಳಕಾಲ್ಮುರಿನಲ್ಲಿ ಬುಧವಾರ ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸಲು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಮೊಳಕಾಲ್ಮುರು: ದೇಶದ ಗಮನ ಸೆಳೆದಿರುವ ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಆಗ್ರಹಿಸಿ ಬುಧವಾರ ತಾಲ್ಲೂಕು ಕಚೇರಿ ಎದುರು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಲವು ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಶವವನ್ನು ಇಲ್ಲಿ ಹೂಳಲಾಗಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬ ನೀಡಿರುವ ಹೇಳಿಕೆ ಪರಿಗಣಿಸಿ ಆತ ತೋರಿಸಿದ ಕಡೆಗಳಲ್ಲಿ ನೆಲ ಅಗೆಯಲಾಗುತ್ತಿದೆ. ಆದರೆ, ಯಾವುದೇ ಕುರುಹುಗಳು ಸಿಗುತ್ತಿಲ್ಲ, ಆದರೂ ಶೋಧ ಕಾರ್ಯ ಮುಂದುವರಿಸಲಾಗುತ್ತಿದೆ. ಇದು ಅನುಮಾನಕ್ಕೆ ಈಡು ಮಾಡಿಕೊಟ್ಟಿದ್ದು, ಇಲ್ಲಿಯವರರೆಗೂ ಶೋಧ ಕಾರ್ಯದ ವರದಿಯನ್ನು ಎಸ್‌ಐಟಿ ಬಹಿರಂಗ ಮಾಡುತ್ತಿಲ್ಲ ಎಂದು ದೂರಿದರು.

ಬೇರೆ ಪ್ರಕರಣಗಳಲ್ಲಿ ಹಲವು ಪ್ರತಿಭಟನೆ, ಮನವಿ ಮಾಡಿದರೂ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಲಿಲ್ಲ. ಆದರೆ, ಈ ಪ್ರಕರಣದಲ್ಲಿ ಸ್ವ ಇಚ್ಛಾಶಕ್ತಿಯಿಂದ ತನಿಖೆಗೆ ಆದೇಶಿಸಿದೆ. ಇದರ ಹಿಂದೆ ರಾಜಕೀಯ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ. ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅವಹೇಳನ ಮಾಡುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ನ್ಯಾಯಯುತ ತನಿಖೆಗಾಗಿ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಅನಾಮಿಕ ವ್ಯಕ್ತಿಯ ವರ್ತನೆ ನೋಡಿದರೆ ದೇಶದ್ರೋಹಿ ಶಕ್ತಿಗಳು ಆತನನ್ನು ನಿರ್ವಹಣೆ ಮಾಡುವ ಅನುಮಾನವಿದೆ. ಆದ್ದರಿಂದ ಆತನ ಬಗ್ಗೆ ಮೊದಲು ಪೂರ್ಣ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸೂರಮ್ಮನಹಳ್ಳಿ ರಾಜಣ್ಣ, ವೆಂಕಟೇಶ್‌, ಮಂಜುನಾಥ್‌, ಬಸವರಾಜ್‌, ಮೇಸ್ತ್ರಿ ಪಾಪಯ್ಯ, ಬೋರಯ್ಯ, ಮಂಜುನಾಥ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.