ADVERTISEMENT

ಕಾಂಗ್ರೆಸ್ ಬಡತನ ನಿರ್ಮೂಲನೆ ಮಾಡಿದೆಯೇ?

ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 13:09 IST
Last Updated 25 ಜುಲೈ 2021, 13:09 IST
ಛಲವಾದಿ ನಾರಾಯಣಸ್ವಾಮಿ 
ಛಲವಾದಿ ನಾರಾಯಣಸ್ವಾಮಿ    

ಚಿತ್ರದುರ್ಗ: ‘ದೇಶವನ್ನು ಆರು ದಶಕ ಆಡಳಿತಮಾಡಿದ ಕಾಂಗ್ರೆಸ್ ಮನಸ್ಸು ಮಾಡಿದ್ದರೆ ದೇಶದಲ್ಲಿ ಬಡತನ ಸಂಪೂರ್ಣ ನಿರ್ಮೂಲನೆ ಮಾಡಬಹುದಿತ್ತು. ಅಧಿಕಾರದಲ್ಲಿ ಇದ್ದಾಗ ಈ ಕೆಲಸ ಏಕೆ ಮಾಡಲಿಲ್ಲ’ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

‘ಅಧಿಕಾರಕ್ಕೆ ಬಂದಾಗಿನಿಂದಲೂ ದಲಿತ ಸಮುದಾಯಕ್ಕೆ ವಂಚನೆ ಮಾಡುತ್ತಲೇ ಬಂದಿರುವ ಕಾಂಗ್ರೆಸ್ ನಾಯಕರ ಮಾತಿಗೆ ಮರುಳಾಗಬೇಡಿ. ಸಮುದಾಯಕ್ಕೆ ದ್ರೋಹ ಬಿಟ್ಟರೆ ಅವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ದಲಿತರು ನಿರ್ಮಿಸಿದ ಮನೆಯೊಳಗೆ ಕಾಂಗ್ರೆಸ್‌ನವರು ಸೇರಿಕೊಂಡು ವಿಷಜಂತುವಾಗಿದ್ದಾರೆ. ಈ ಮೂಲಕ ಇಡೀ ದಲಿತ ಸಮುದಾಯವನ್ನು ಸಂಹಾರ ಮಾಡಲು ಹೊರಟಿದ್ದಾರೆ. ಅಲ್ಪಸಂಖ್ಯಾತರಿಗೂ ಮೂಗಿಗೆ ತುಪ್ಪು ಸವರುವ ಕೆಲಸ ಮಾಡುತ್ತಲೇ ವಂಚಿಸುತ್ತ ಬಂದಿದ್ದಾರೆ. ಇದನ್ನು ಮೊದಲು ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ದಲಿತರು ಸೇರಿದಂತೆ ತುಳಿತಕ್ಕೆ ಒಳಗಾದ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಬಿಜೆಪಿ ಶ್ರಮಿಸುತ್ತಿದೆ. ಅದಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲು ಎ. ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನವನ್ನು ಕೇಂದ್ರ ಸರ್ಕಾರ ನೀಡಿದೆ. ಥಾವರ್‌ಚಂದ್ ಗೆಹ್ಲೋಟ್ ರಾಜ್ಯದ ರಾಜ್ಯಪಾಲರಾಗಿ ನೇಮಕವಾಗಿರುವುದು ದಲಿತ ಸಮುದಾಯದವರಲ್ಲಿ ಸಂತಸ ಉಂಟು ಮಾಡಿದೆ. ದೇಶದಲ್ಲಿ ಬಿಜೆಪಿಯಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ’ ಎಂದು ಹೇಳಿದರು.

ನೈತಿಕತೆ ಇಲ್ಲ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭ್ರಷ್ಟ ಎನ್ನುವ ನೈತಿಕತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರಿಗೆ ಇಲ್ಲ. ಇವರ ಆಡಳಿತದಲ್ಲೇ ನಡೆದ ಉಕ್ಕು ಸೇತುವೆ ಸೇರಿ ಇತರ ಹಗರಣ ಮುಚ್ಚಿ ಹಾಕಿ ಎಸಿಬಿ ಅಧಿಕಾರ ಕಿತ್ತುಕೊಂಡರು. ಡಿವೈಎಸ್‌ಪಿ ಗಣಪತಿ ಪ್ರಕರಣಕ್ಕೂ ನ್ಯಾಯ ಸಿಗಲಿಲ್ಲ. ಇವೆಲ್ಲಾ ಭ್ರಷ್ಟಾಚಾರ ಅಲ್ಲವೇ’ ಎಂದು ಪ್ರಶ್ನಿಸಿದ ಅವರು, ‘ಆರೋಪ ಸಾಬೀತಾದ ನಂತರವಷ್ಟೇ ಯಾರನ್ನೇ ಆಗಲಿ ಭ್ರಷ್ಟ ಎನ್ನಲು ಸಾಧ್ಯ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ್‌ ನಾಯ್ಕ, ಮೋರ್ಚಾ ಜಿಲ್ಲಾ ಅಧ್ಯಕ್ಷ ಹಾಲಪ್ಪ,ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ಮುಖಂಡರಾದ ನಾಗರಾಜ್‌ ಬೇದ್ರೆ, ದಗ್ಗೆ ಶಿವಪ್ರಕಾಶ್, ಪಾಂಡು, ನಾಗರಾಜ್, ಮಲ್ಲೇಶ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.