ADVERTISEMENT

ಹಿರಿಯೂರು | ಭೂತಪ್ಪನ ಹಬ್ಬ; ಕುಡಿಯುವ ನೀರಿನ ಸಮಸ್ಯೆ

ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 5:15 IST
Last Updated 14 ಜುಲೈ 2025, 5:15 IST
ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮದ ಜನರು ಊರಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಜಮೀನೊಂದರ ಕೊಳವೆ ಬಾವಿಯಿಂದ ನೀರು ತರುತ್ತಿರುವುದು
ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮದ ಜನರು ಊರಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಜಮೀನೊಂದರ ಕೊಳವೆ ಬಾವಿಯಿಂದ ನೀರು ತರುತ್ತಿರುವುದು   

ಹಿರಿಯೂರು: ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಸೋಮವಾರ (ಜುಲೈ 14) ಭೂತಪ್ಪನ ಹಬ್ಬವಿದ್ದು, ಕುಡಿಯುವ ನೀರಿನ ಸಮಸ್ಯೆ ಕಾರಣಕ್ಕೆ ಗ್ರಾಮಸ್ಥರು ನೆಂಟರಿಷ್ಟರನ್ನು ಕರೆಯದೇ ಹಬ್ಬ ಮಾಡುವ ಅನಿವಾರ್ಯ ಸ್ಥಿತಿ ಉಂಟಾಗಿದೆ. 

‘ನಮ್ಮೂರಿನ ಹಬ್ಬಕ್ಕೆ ಬರಲೇಬೆಂಕೆಂದಿದ್ದರೆ ಹಬ್ಬದೂಟ ಬಡಿಸಲು ನಾವು ಸಿದ್ಧ. ಆದರೆ, ಕುಡಿಯುವ ನೀರನ್ನು ನೀವೇ ತರಬೇಕು. ಊಟ ನಮ್ದು, ನೀರು ನಿಮ್ದು’ ಎಂದು ಗ್ರಾಮದ ಯುವಕರು ಹರಿಬಿಟ್ಟಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. 

‘ನಮ್ಮಲ್ಲಿ ಭೂತಪ್ಪನ ಹಬ್ಬ ಅತ್ಯಂತ ವಿಶೇಷವಾದದ್ದು. ಎಲ್ಲ ಜಾತಿಯವರೂ ಅನಾದಿ ಕಾಲದಿಂದಲೂ ಈ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೇವೆ. ಈಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಸಂಪೂರ್ಣ ಕುಸಿದು ಹೋಗಿದೆ. 1,500 ಅಡಿ ವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಮನೆಗೆ ನೀರು ಹೊಂದಿಸುವುದೇ ಸಾಹಸವಾಗಿದೆ. ಇಲ್ಲಿನ ನೀರಿನ ವಿಚಾರ ತಿಳಿದರೆ ಊರಿನ ಯುವಕರಿಗೆ ಯಾರೂ ಹೆಣ್ಣೇ ಕೊಡುವುದಿಲ್ಲವೇನೋ ಎಂಬ ಆತಂಕ ಕಾಡುತ್ತಿದೆ’ ಎನ್ನುತ್ತಾರೆ ಗ್ರಾಮದ ರೈತ ಚಂದ್ರಗಿರಿ. 

ADVERTISEMENT

118 ಕೊಳವೆ ಬಾವಿ: 

‘ದಿಂಡಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿಕ್ಕಚಿಕ್ಕ ಹಟ್ಟಿಗಳು ಒಳಗೊಂಡು 31 ಗ್ರಾಮಗಳಿವೆ. 21 ಸದಸ್ಯರಿದ್ದಾರೆ. ಒಟ್ಟಾರೆ ಜನಸಂಖ್ಯೆ 15 ಸಾವಿರದಷ್ಟಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಇದುವರೆಗೂ 118 ಕೊಳವೆ ಬಾವಿ ಕೊರೆಸಿದ್ದು, ಕೇವಲ 7 ರಲ್ಲಿ ಒಂದರಿಂದ ಒಂದೂವರೆ ಇಂಚು ನೀರು ಬರುತ್ತಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು, ಜನ ರಸ್ತೆ, ಚರಂಡಿ, ಮನೆ ಕೇಳುವುದಿಲ್ಲ. ಕುಡಿಯುವ ನೀರು ಕೊಡಿ ಎನ್ನುತ್ತಾರೆ. ಭೂತಪ್ಪನ ಹಬ್ಬಕ್ಕೆಂದು ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದೇವೆ. ಸಮಸ್ಯೆ ಬಗೆಹರಿಸುವಂತೆ 2 ವರ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರಿಗೆ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲಮ್ಮ ಅವರ ಪತಿ ಹನುಮಂತಪ್ಪ ಪೂಜಾರಿ ಬೇಸರ ವ್ಯಕ್ತಪಡಿಸಿದರು. 

‘ಗ್ರಾಮ ಪಂಚಾಯಿತಿ ಪಿಡಿಒ ಅವರ ತಂದೆ ಮೃತಪಟ್ಟಿರುವ ಕಾರಣ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕಾರ್ಯದರ್ಶಿಯನ್ನು ಕೇಳಿದರೆ ನನ್ನ ಕೈಯಲ್ಲಿ ಏನಿದೆ? ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ. ಅಧ್ಯಕ್ಷರನ್ನು ಕೇಳಿದರೆ ತಾತ್ಕಾಲಿಕವಾಗಿ ಟ್ಯಾಂಕರ್ ವ್ಯವಸ್ಥೆ ಮಾಡಿದ್ದೇವೆ. ಶಾಶ್ವತ ವ್ಯವಸ್ಥೆ ಸರ್ಕಾರದಿಂದ ಆಗಬೇಕು ಎನ್ನುತ್ತಾರೆ. ಒಟ್ಟಾರೆ ಆಡಳಿತ ವ್ಯವಸ್ಥೆಯ ನಡುವೆ ಸಿಲುಕಿ ಜನರು ಹೈರಾಣಾಗಿದ್ದಾರೆ’ ಎನ್ನುತ್ತಾರೆ ಗ್ರಾಮದ ಚಂದ್ರಗಿರಿ. 

‘ಸರ್ಕಾರದ ಗ್ಯಾರಂಟಿ ಯೋಜನೆಗಳು ಬೇಡ. ರಸ್ತೆ, ಚರಂಡಿ, ಮನೆ ನಿರ್ಮಿಸದಿದ್ದರೂ ಒಂದೆರಡು ವರ್ಷ ಸುಧಾರಿಸಿಕೊಳ್ಳುತ್ತೇವೆ. ಆದರೆ, ನೀರಿಲ್ಲದೆ ಕೃಷಿ ಮತ್ತು ಕೃಷಿಕರು ಉಳಿಯಲು ಸಾಧ್ಯವಿಲ್ಲ. ವಾಣಿವಿಲಾಸ ಜಲಾಶಯದಿಂದ ಈ ಭಾಗದ 16 ಕೆರೆಗಳಿಗೆ ನೀರು ತುಂಬಿಸುವ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು’ ಎಂದು ಕೆಕೆಹಟ್ಟಿ ಜಯಪ್ರಕಾಶ್ ಆಗ್ರಹಿಸಿದರು. 

ಭೂತಪ್ಪನ ಹಬ್ಬಕ್ಕೆಂದು ಭಾನುವಾರ ಟ್ಯಾಂಕರ್‌ ನೀರನ್ನು ಗ್ರಾಮಸ್ಥರು ಹಿಡಿಯುತ್ತಿರುವುದು

‘ತಕ್ಷಣಕ್ಕೆ ಆಗದು’ 

ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತಕ್ಷಣಕ್ಕೆ ಆಗದು. ವಾಣಿವಿಲಾಸ ಜಲಾಶಯದ ನೀರಿನ ಹಂಚಿಕೆ ಈಗಾಗಲೇ ಮುಗಿದು ಹೋಗಿದೆ. ಹೆಚ್ಚು ಮಳೆಯಾಗಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಲ್ಲಿ ಅಂತಹ ನೀರನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಸಣ್ಣ ಮತ್ತು ಬೃಹತ್ ನೀರಾವರಿ ಸಚಿವರ ಜೊತೆ ಚರ್ಚಿಸಿದ್ದೇನೆ. ಈ ಬಗ್ಗೆ ಮತ್ತೊಮ್ಮೆ ರೈತರ ನಿಯೋಗವನ್ನು ಸಚಿವರಲ್ಲಿಗೆ ಕರೆದೊಯ್ಯಲು ಸಿದ್ಧ. ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕೆನ್ನುವುದು ನನ್ನ ಆದ್ಯತೆ. ತಕ್ಷಣದ ಪರಿಹಾರವಾಗಿ ದಿಂಡಾವರ ಭಾಗಕ್ಕೆ ಟ್ಯಾಂಕರ್ ಮೂಲಕ ಜನರ ಅಗತ್ಯಕ್ಕೆ ತಕ್ಕಷ್ಟು ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.