ADVERTISEMENT

ಬುದ್ದಿಮಾಂದ್ಯರನ್ನು ಪೊರೆಯುವುದೇ ಈ ಕುಟುಂಬದ ಸವಾಲು!

ಅಪ್ಪ ಕೂಲಿ ಕಾರ್ಮಿಕ; ತಾಯಿಗೆ ಮಕ್ಕಳ ಜೋಪಾನದ ಹೊಣೆ.. ಬೇಕಿದೆ ಸಹಾಯಹಸ್ತ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:20 IST
Last Updated 11 ಡಿಸೆಂಬರ್ 2025, 6:20 IST
ಸದಾ ಮಲಗಿಯೇ ಇರುವ ಗೋವಿಂದರಾಜ್
ಸದಾ ಮಲಗಿಯೇ ಇರುವ ಗೋವಿಂದರಾಜ್   

ಹಿರಿಯೂರು: ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿರುವ ತಾಲ್ಲೂಕಿನ ಆದಿವಾಲ ಭೋವಿ ಕಾಲೊನಿಯ ಬಡ ಕುಟುಂಬದ ಕರುಣಾಜನಕ ಕತೆ ಇದು. ಬಡತನದ ಸಂಕಷ್ಟ ಸಾಲದು ಎಂಬಂತೆ ಹುಟ್ಟಿದ ಮೂರೂ ಮಕ್ಕಳು ಬುದ್ದಿಮಾಂದ್ಯರು. ಅಪ್ಪ ಕೂಲಿ ಕೆಲಸಕ್ಕೆ ಹೋದರೆ, ತಾಯಿಗೆ ಇಡೀ ದಿನ ಮಕ್ಕಳ ಜೋಪಾನದ ಹೊಣೆ ಬಿದ್ದಿದೆ.

ಜಯರಾಂ ಹಾಗೂ ರತ್ನಮ್ಮ ದಂಪತಿಗೆ ಜನಿಸಿದ ಚಿನ್ನಮ್ಮ (17), ಗೋವಿಂದರಾಜ್ (16) ಹಾಗೂ ಅಮೃತಾ (13) ಹುಟ್ಟಿನಿಂದಲೇ ಬುದ್ದಿಮಾಂದ್ಯರು. ಐದು ವರ್ಷದ ಹಿಂದೆ ಚಿನ್ನಮ್ಮ ಮೃತಪಟ್ಟಿದ್ದು, ಉಳಿದ ಇಬ್ಬರು ಮಕ್ಕಳು ಎದ್ದು ಓಡಾಡುತ್ತಿಲ್ಲ. ಮಲಗಿದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಕಣ್ಣು ಕಾಣಿಸುತ್ತಿದ್ದರೂ ಯಾರನ್ನೂ ಗುರುತು ಹಿಡಿಯುವುದಿಲ್ಲ.

ಅಮೃತಾ ಚಾಪೆಯ ಮೇಲೆ ಎದ್ದು ಕುಳಿತುಕೊಳ್ಳುವಷ್ಟು ಶಕ್ತಳು. ಆದರೆ, ಗೋವಿಂದರಾಜ್ ಸದಾ ಮಲಗಿಯೇ ಇರುತ್ತಾನೆ. ಮಕ್ಕಳಿಗೆ ಶೇ 75ರಷ್ಟು ವೈಕಲ್ಯ ಇರುವ ಕಾರಣ ಚೇತರಿಸಿಕೊಳ್ಳುವುದಿಲ್ಲ ಎಂದು ತಿಳಿಸಿರುವ ವೈದ್ಯರ ಮಾತುಗಳನ್ನು ಅರಗಿಸಿಕೊಳ್ಳಲು ದಂಪತಿಗೆ ಆಗುತ್ತಿಲ್ಲ. ದಾನಿಗಳ ನೆರವು ಈ ಕುಟುಂಬಕ್ಕೆ ಬೇಕಿದೆ ಎನ್ನುತ್ತಾರೆ ಗ್ರಾಮದ ಸಾಮಾಜಿಕ ಕಾರ್ಯಕರ್ತ ಚಮನ್ ಷರೀಫ್.

ADVERTISEMENT

ಜಯರಾಂ ಜಮೀನು ರಹಿತ. ಇರುವ ಮನೆಯೂ ಮಳೆ ಸುರಿದಾಗ ಸೋರುತ್ತದೆ. ಹೊಟ್ಟೆಪಾಡಿಗೆ ಊರಿನಲ್ಲಿ ಜಮೀನು–ತೋಟದ ಕೆಲಸಗಳಿಗೆ ಅಪ್ಪ ಹೋದರೆ, ಅಮ್ಮ ರತ್ನಮ್ಮನಿಗೆ ದಿನದ 24 ಗಂಟೆಯೂ ಮಕ್ಕಳನ್ನು ನೋಡಿಕೊಳ್ಳುವುದೇ ಕೆಲಸ. ಮಕ್ಕಳು ಬುದ್ದಿಮಾಂದ್ಯರಾಗಿರುವ ಕಾರಣಕ್ಕೆ 15–20 ವರ್ಷದಿಂದ ಸಂಬಂಧಿಕರ ಮನೆಗಳ ಯಾವುದೇ ಸಮಾರಂಭಗಳಿಗೆ ದಂಪತಿ ಹೋಗಿಲ್ಲ.

ಅಂಗವಿಕಲರ ಪಿಂಚಣಿ ಪಡೆಯುತ್ತಿದ್ದ ಕುಟುಂಬಕ್ಕೆ, ಹೆಬ್ಬೆಟ್ಟು ಅಪ್‌ಡೇಟ್ ಆಗಿಲ್ಲ ಎಂಬ ಕಾರಣಕ್ಕೆ ಎರಡು ವರ್ಷದಿಂದ ಅದೂ ಸ್ಥಗಿತವಾಗಿದೆ. ಆರು ತಿಂಗಳಿಂದ ಪಡಿತರ ರೂಪದಲ್ಲಿ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ಸಿಗುತ್ತಿರುವುದೊಂದೇ ಕುಟುಂಬಕ್ಕೆ ಆಸರೆ.

‘15–20 ವರ್ಷದಿಂದ ಮನೆ ಬಿಟ್ಟು ಹೊರಗೆ ಹೋಗಿಲ್ಲ. ಮನೆಯಲ್ಲಿ ಏನು ನಡೆಯುತ್ತಿದೆ. ಯಾರು ಬಂದರು, ಯಾರು ಹೋದರು ಎಂಬುದರ ಅರಿವಿಲ್ಲದೆ ಇದ್ದಲ್ಲಿಯೇ ಬದುಕು ನೂಕುತ್ತಿರುವ ಮಕ್ಕಳನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಹಾಗೆಂದು ಇಂತಹ ಮುಗ್ಧ ಮಕ್ಕಳನ್ನು ಜೋಪಾನ ಮಾಡದೆ ಇರಲು ಸಾಧ್ಯವೇ? ಯಾರಾದರು ತಜ್ಞ ವೈದ್ಯರಿಗೆ ತೋರಿಸಿದ್ದರೆ ಸ್ವಲ್ಪವಾದರೂ ಆರೋಗ್ಯ ಸುಧಾರಿಸುತ್ತಿತ್ತೇನೋ. ಗಂಡನ ಕೂಲಿಯಲ್ಲಿ ಬದುಕು ಸಾಗಿಸುವುದೇ ಕಷ್ಟ ಆಗಿರುವಾಗ ಆಸ್ಪತ್ರೆಗೆ ಹೇಗೆ ಕರೆದೊಯ್ಯಲಿ? ಜಗತ್ತಿನ ಎಲ್ಲ ಕಷ್ಟಗಳನ್ನು ದೇವರು ನಮಗೇ ಕೊಟ್ಟಂತೆ ಕಾಣುತ್ತದೆ’ ಎಂದು ರತ್ನಮ್ಮ ಕಣ್ಣೀರಾಗುತ್ತಾರೆ.

ನಡೆಯಲು ಮಾತನಾಡಲೂ ಆಗದ ಅಮೃತಾ

ಕುಟುಂಬಕ್ಕೆ ಬೇಕಿದೆ ನೆರವು

‘ನಾನು ಬದುಕಿರುವವರೆಗೆ ಮಕ್ಕಳನ್ನು ಜೋಪಾನ ಮಾಡುತ್ತೇನೆ. ನಮ್ಮ ನಂತರ ಮಕ್ಕಳ ಗತಿಯೇನು ಎಂಬುದನ್ನು ನೆನೆದರೆ ಗಾಬರಿಯಾಗುತ್ತದೆ. ಅಧಿಕಾರಿಗಳು ಮನೆಗೆ ಬಂದು ಹೆಬ್ಬೆಟ್ಟು ಅಚ್ಚು ಪಡೆದು ಅಂಗವಿಕಲರ ವೇತನ ಬಿಡುಗಡೆ ಮಾಡಬೇಕು. ಯಾವುದಾದರೂ ವಸತಿ ಯೋಜನೆಯಲ್ಲಿ ಮನೆಯೊಂದನ್ನು ಕೊಡಬೇಕು. ಕೃಷಿ ಅನುಭವ ಇರುವ ಜಯರಾಂ ಅವರಿಗೆ ಭೂಮಿ ಮಂಜೂರು ಮಾಡಬೇಕು’ ಎಂದು ತಾಯಿ ರತ್ನಮ್ಮ ಮನವಿ ಮಾಡಿದ್ದಾರೆ. ಜಯರಾಂ ಅವರ ಮೊಬೈಲ್ ನಂ:–6366166490. ಬ್ಯಾಂಕ್ ಖಾತೆ ವಿವರ: ಜಯರಾಂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪಟ್ರೆಹಳ್ಳಿ ಶಾಖೆ ಹಿರಿಯೂರು ತಾಲ್ಲೂಕು. ಖಾತೆ ಸಂಖ್ಯೆ: 10780101079441. ಐಎಫ್‌ಎಸ್‌ಸಿ: pkgb-0010780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.