ADVERTISEMENT

ಜಿಲ್ಲಾ ಅಭಿವೃದ್ಧಿಗೆ ₹ 1,701 ಕೋಟಿ ಪ್ರಸ್ತಾವ

ಜಿಲ್ಲಾ ಯೋಜನಾ ಸಮಿತಿ ಸಭೆ; ಉಸ್ತುವಾರಿ ಸಚಿವ ಡಿ.ಸುಧಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 4:36 IST
Last Updated 13 ನವೆಂಬರ್ 2025, 4:36 IST
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಮಾತನಾಡಿದರು
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಮಾತನಾಡಿದರು    

ಚಿತ್ರದುರ್ಗ: ‘ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 2026–27ನೇ ಸಾಲಿಗೆ ಪಂಚಾಯತ್‌ ರಾಜ್ ಸಂಸ್ಥೆಗಳ ಕರಡು ವಾರ್ಷಿಕ ಆಯವ್ಯಯದ ಅನ್ವಯ ₹ 1,701.87 ಕೋಟಿಯ ಕರಡು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇದು ಕಳೆದ ಸಾಲಿಗಿಂತಲೂ 184.91 ಕೋಟಿ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಪ್ರಸ್ತಾವನೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್‌ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘2025–26ನೇ ಸಾಲಿನಲ್ಲಿ ಒಟ್ಟು ₹ 1,516.96 ಕೋಟಿ ಅನುದಾನ ಜಿಲ್ಲೆಗೆ ಹಂಚಿಕೆಯಾಗಿದೆ. ಜಿಲ್ಲೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ತಮಗೆ ಅಗತ್ಯವಾಗಿರುವ ಕೆಲಸಗಳಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಇನ್ನೆರಡು ವಾರದೊಳಗೆ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ಧಿ ಕರಡು ಯೋಜನೆ ಸಿದ್ದಪಡಿಸಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಶಿಕ್ಷಣ, ಆರೋಗ್ಯ, ವಿದ್ಯಾರ್ಥಿನಿಲಯಗಳಿಗೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಕ್ರಿಯಾ ಯೋಜನೆಯಲ್ಲಿ ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ಸ್ವಚ್ಛತೆ ಹಾಗೂ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಹೇಳಿದರು.

‘ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ಸಿದ್ದಪಡಿಸುವ ವೇಳೆ ಅಭಿವೃದ್ಧಿ ಅನುದಾನಕ್ಕೆ ಆದ್ಯತೆ ನೀಡಬೇಕು. ಗ್ರಾಮೀಣ ರಸ್ತೆಗಳ ನಿರ್ವಹಣೆ, ಕೆರೆಗಳ ನಿರ್ವಹಣೆ, ತಾಲ್ಲೂಕು ಕ್ರೀಡಾಂಣಗಣಗಳ ನಿರ್ವಹಣೆ, ವಿಸ್ತರಣೆ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ, ನಿರ್ವಹಣೆಗೆ ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ ‘ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಭಿವೃದ್ಧಿ ಯೋಜನೆ ರೂಪಿಸಬೇಕು.  ಜಿಲ್ಲೆಯಲ್ಲಿ ಹೈನುಗಾರಿಕೆಗೆ, ಕುರಿ, ಮೇಕೆ ಸಾಕಾಣಿಕೆಗೆ ವ್ಯಾಪಕ ಅವಕಾಶವಿದೆ. ಹೀಗಾಗಿ ಜಿಲ್ಲೆಗೆ ಪಶು ವೈದ್ಯಕೀಯ ಡಿಪ್ಲೊಮಾ ಕಾಲೇಜು ಪ್ರಾರಂಭದ ಅಗತ್ಯವಿದೆ, ಇದರ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘2025-26ನೇ ಸಾಲಿನಲ್ಲಿ ಈವರೆಗೆ ₹ 703 ಕೋಟಿ ಅನುದಾನ ಖರ್ಚಾಗಿದೆ. ಮುಂದಿನ ಮಾರ್ಚ್ ವೇಳೆಗೆ ಪೂರ್ಣ ಅನುದಾನ ವೆಚ್ಚವಾಗುವ ನಿರೀಕ್ಷೆ ಹೊಂದಲಾಗಿದೆ. 2026–27ನೇ ಸಾಲಿಗೆ ಕಳೆದ ಸಾಲಿಗಿಂತ ಹೆಚ್ಚನ ಅನುದಾನದ ಅವಶ್ಯತೆ ಇದೆ. 2026–27 ನೇ ಸಾಲಿನಲ್ಲಿ ಪ್ರಮುಖವಾಗಿ ಶಿಕ್ಷಣ ಕ್ಷೇತ್ರಕ್ಕೆ ₹ 1066.60 ಕೋಟಿ, ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ₹ 176.78 ಕೋಟಿ, ಆರೋಗ್ಯಕ್ಕೆ ₹ 115.29 ಕೋಟಿ ಬೇಡಿಕೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ’ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಆಕಾಶ್ ತಿಳಿಸಿದರು.

‘ಇದು ಕೇವಲ ಕರಡು ಪ್ರಸ್ತಾವನೆಯಾಗಿದ್ದು, ಜಿಲ್ಲೆಗೆ ಹಾಗೂ ವಿವಿಧ ತಾಲ್ಲೂಕುಗಳಿಗೆ ಅನುಗುಣವಾಗಿ ಆಯಾ ಇಲಾಖೆಗಳು ನೀಡುವ ಅಂಕಿ–ಅಂಶಗಳ ಆಧಾರದ ಮೇಲೆ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಸಮರ್ಪಕವಾಗಿ ಯೋಜನೆ ರೂಪಿಸಿಕೊಳ್ಳಬೇಕು. ಆದಷ್ಟು ಬೇಗ ಯೋಜನೆ ರೂಪಿಸಿ, ಸಲ್ಲಿಸಬೇಕು. ನಂತರ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚು ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಇದ್ದರು.

ಗ್ರಾಮ ಪೋನ್‌; ಸಹಾಯವಾಣಿಗೆ ಚಾಲನೆ

ಗ್ರಾಮೀಣ ಪ್ರದೇಶಗಳಲ್ಲಿ ಜನರು ತಮ್ಮ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆರಂಭಿಸಿರುವ ಗ್ರಾಮ–ಫೋನ್ ಉಚಿತ ಸಹಾಯವಾಣಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಚಾಲನೆ ನೀಡಿದರು. ‘ಉಚಿತ ಸಹಾಯವಾಣಿ ಸಂಖ್ಯೆ 1800-425-1978 ನ.20ರಿಂದ ಕಾರ್ಯಾರಂಭ ಮಾಡಲಿದೆ. ಗ್ರಾಮೀಣ ಭಾಗದ ಜನ ‘ಗ್ರಾಮ ಫೋನ್’ ಉಚಿತ ಸಹಾಯವಾಣಿಗೆ ಕರೆ ಮಾಡಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂದಿಸಿದ ಕುಂದು ಕೊರತೆಗಳನ್ನು ದಾಖಲಿಸಬಹುದಾಗಿದೆ. ಈ ದೂರುಗಳನ್ನು ಜಿಲ್ಲಾ ಪಂಚಾಯಿತಿ ಹಂತದ ಪ್ರತಿನಿಧಿ ಸ್ವೀಕರಿಸಿ ದೂರಿನ ವಿಷಯವನ್ನು ಆಧರಿಸಿ ಸಂಬಂಧಿಸಿದ ಅಧಿಕಾರಿ ಅಥವಾ ಪ್ರತಿನಿಧಿಗೆ ಕರೆಯ ವಿವರವನ್ನು ವರ್ಗಾಯಿಸಲಿದ್ದಾರೆ. ದೂರು ಸ್ವೀಕೃತಿಯಾಗಿರುವ ಬಗ್ಗೆ ನಾಗರಿಕರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗಲಿದೆ’ ಎಂದು ಜಿ.ಪಂ ಸಿಇಒ ಆಕಾಶ್‌ ತಿಳಿಸಿದರು. ‘ಮುಂದಿನ ದಿನಗಳಲ್ಲಿ ವಾಟ್ಸ್‌ ಅಪ್‌ ಮೂಲಕ ಸಂದೇಶ ರವಾನಿಸಲು ಯೋಜನೆ ಅಭಿವೃದ್ಧಿಪಡಿಸಲಾಗುವುದು. ದೂರು ಪರಿಹರಿಸುವ ಸೌಲಭ್ಯವನ್ನು ಗ್ರಾಮೀಣ ಜನತೆಗೆ ಕಲ್ಪಿಸುವ ನಿಟ್ಟಿನಲ್ಲಿ ‘ಗ್ರಾಮಫೋನ್‌' ಚಿತ್ರದುರ್ಗ ಜಿ.ಪಂನ ಪ್ರಥಮ ಹೆಜ್ಜೆಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.