ಮೊಳಕಾಲ್ಮುರು: ಕರ್ನಾಟಕ ಗಣಿ ಬಾಧಿತ ಪ್ರದೇಶ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ಅನುದಾನ ಪಡೆದು ಪಟ್ಟಣದಲ್ಲಿ 200 ಹಾಸಿಗೆ ಸಾಮರ್ಥ್ಯದ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ನಿರ್ಮಾಣ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ.
ಈ ಬಾರಿಯ ಬಜೆಟ್‌ನಲ್ಲಿ ತಾಲ್ಲೂಕು ಆಸ್ಪತ್ರೆಯನ್ನು 200 ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಸದ್ಯ ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿದ್ದು, ಅಲ್ಲಿಯ ಜಿಲ್ಲಾ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ಪ್ರತ್ಯೇಕವಾಗಿ ಜಿಲ್ಲಾ ಆಸ್ಪತ್ರೆ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈಗಿರುವ 2 ಅಂತಸ್ತಿನ ಕಟ್ಟಡದ ಆಸ್ಪತ್ರೆಯಲ್ಲಿ 100 ಹಾಸಿಗೆ ಸೌಲಭ್ಯವಿದೆ. ಇದನ್ನು ಮೇಲ್ದರ್ಜೆಗೇರಿಸುವ ಜತೆಗೆ ಬಳ್ಳಾರಿ, ಮೈಸೂರು, ರಾಯಚೂರು ಜಿಲ್ಲೆಗಳ ಮಾದರಿಯಲ್ಲಿ ಪ್ರತ್ಯೇಕ ಜಿಲ್ಲಾಸ್ಪತ್ರೆ ರೂಪ ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯಕೀಯ ಕಾಲೇಜಿನೊಂದಿಗೆ ವಿಲೀನವಾದ ನಂತರ ಮತ್ತೊಂದು ಜಿಲ್ಲಾ ಆಸ್ಪತ್ರೆ ಸ್ಥಾಪನೆ ಅನಿವಾರ್ಯವಾಗುತ್ತದೆ. ಅದನ್ನೇ ಕೆಎಂಇಆರ್‌ಸಿ ಅನುದಾನದೊಂದಿಗೆ ಪಟ್ಟಣದಲ್ಲಿ ಮೇಲ್ದರ್ಜೆಗೆ ಏರಿಸುವುದು ಆರೋಗ್ಯ ಇಲಾಖೆಯ ಉದ್ದೇಶವಾಗಿದೆ. ನೂತನ ಆಸ್ಪತ್ರೆಯನ್ನು ಈಗಿರುವ ಸಾರ್ವಜನಿಕ ಆಸ್ಪತ್ರೆ ಸ್ಥಳದ ಜತೆಗೆ, ಹಿಂಭಾಗದಲ್ಲಿರುವ ಸಿಬ್ಬಂದಿ ವಸತಿಗೃಹ, ಕ್ಯಾಂಟೀನ್ ಕಟ್ಟಡವನ್ನು ನೆಲಸಮ ಮಾಡಿ ನಿರ್ಮಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1.28 ಎಕರೆ ಪ್ರದೇಶ ಲಭ್ಯವಿದ್ದು ಈಗಿನ 100 ಹಾಸಿಗೆ ಆಸ್ಪತ್ರೆ ಕಟ್ಟಡಕ್ಕೆ ಸೇತುವೆಯಾಗಿ ಉಳಿಕೆ 100 ಹಾಸಿಗೆ ಕಟ್ಟಡ ನಿರ್ಮಾಣ ಉದ್ದೇಶವಿದೆ. ಸಿಬ್ಬಂದಿ ವಸತಿಗೃಹಗಳನ್ನು ತಾಲ್ಲೂಕು ಆಡಳಿತವು ಹಾನಗಲ್ ರಸ್ತೆಯಲ್ಲಿ ಸೂಚಿಸಿರುವ ಸ್ಥಳದಲ್ಲಿ ನಿರ್ಮಿಸಬಹುದಾಗಿದೆ ಎಂದು ಮಂಜೂರಾತಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲಾ ಗಣಿ ಪರಿಸರ ಪುನಚ್ಛೇತನ ನಿಗಮದಿಂದ ಜಿಲ್ಲಾ ಆಸ್ಪತ್ರೆ ಕಟ್ಟಡಕ್ಕೆ ₹ 91.25 ಕೋಟಿ ಅನುದಾನ ಮಂಜೂರಾತಿಗೆ ಸೂಚಿಸಲಾಗಿದೆ. ಈಗಿರುವ 85 ಹುದ್ದೆ ಸೇರಿ ಒಟ್ಟು 197 ಹುದ್ದೆಗಳಿಗೆ ಮಂಜೂರಾತಿ ಸಿಕ್ಕಿದೆ. ಸಿಬ್ಬಂದಿ, ವೈದ್ಯಕೀಯ ಉಪಕರಣಗಳ ವೆಚ್ಚ ಸೇರಿ ₹ 12.49 ಕೋಟಿ ವೆಚ್ಚಕ್ಕೆ ಅನುಮತಿ ನೀಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಸೂಚನೆಯಂತೆ ಹಾನಗಲ್ ರಸ್ತೆಯ ‘ನಮ್ಮ ಆಶ್ರಮʼ ಮುಂಭಾಗದಲ್ಲಿ ಸ್ಥಳ ಗುರುತಿಸಲಾಗಿದೆ. ಇಲ್ಲಿ ನಿರ್ಮಿಸಿದರೆ ದೇವಸಮುದ್ರ ಹೋಬಳಿ ಜನರಿಗೆ, ಕೂಡ್ಲಿಗಿ, ಚಳ್ಳಕೆರೆ ಕಡೆಯಿಂದ ಬರುವ ರೋಗಿಗಳಿಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯವೂ ಇದೆ. ಆದರೆ, ಕೆಲವರು ಇದನ್ನು ವಿರೋಧಿಸಿದ್ದು ದೂರವಾಗುತ್ತದೆ ಎಂದೂ ತಿಳಿಸಿದ್ದಾರೆ.
‘ಅದೃಷ್ಟ ಎನ್ನುವಂತೆ ತಾಲ್ಲೂಕಿಗೆ ದೊಡ್ಡ ಆಸ್ಪತ್ರೆ ಮಂಜೂರಾಗಿದ್ದು ಇದನ್ನು ವ್ಯವಸ್ಥಿತವಾಗಿ ನಿರ್ಮಿಸುವ ಜತೆಗೆ ತಾಲ್ಲೂಕು ಹಾಗೂ ನೆರೆಯ ತಾಲ್ಲೂಕುಗಳ ಜನರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
‘ಆಸ್ಪತ್ರೆಯನ್ನು ಎಲ್ಲಿ ನಿರ್ಮಾಣ ಮಾಡಿದರೆ ಸೂಕ್ತ ಎಂಬ ಬಗ್ಗೆ ಜನರ ಸಲಹೆ ಪಡೆಯುವ ಜತೆಗೆ ವೈಜ್ಞಾನಿಕವಾಗಿ ಸ್ಥಳ ಆಯ್ಕೆ ಮಾಡಬೇಕು. ಕೋವಿಡ್ ನಂತರ ಸಾಂಕ್ರಾಮಿಕ ರೋಗ ಹಾವಳಿ ಹೆಚ್ಚುತ್ತಿದ್ದು, ತಜ್ಞರ ಅಭಿಪ್ರಾಯ ಪಡೆದು ಸ್ಥಳ ಆಯ್ಕೆ ಮಾಡಬೇಕಿದೆ. ವೈಯಕ್ತಿಕ ಹಿತಾಸಕ್ತಿಗಳನ್ನು ಇದರಲ್ಲಿ ಅಡ್ಡ ತರುವುದು ಸರಿಯಲ್ಲ. ಈ ಬಗ್ಗೆ ನಿಯೋಗದ ಮೂಲಕ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗುವುದು. ಈ ಆಸ್ಪತ್ರೆ ತಾಲ್ಲೂಕಿನ ಆಸ್ತಿಯಾಗಲಿದೆ’ ಎಂದು ಸಿಪಿಐ ಕಾರ್ಯದರ್ಶಿ ಡಿ. ಪೆನ್ನಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.