ADVERTISEMENT

ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡಲಿ

ದೀಪಾವಳಿ ಹಬ್ಬದ ಆಚರಣೆಯಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂದೇಶ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:26 IST
Last Updated 28 ಅಕ್ಟೋಬರ್ 2022, 7:26 IST
ಸಿರಿಗೆರೆ ಐಕ್ಯಮಂಟಪದಲ್ಲಿ ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗ್ರಾಮಸ್ಥರಿಗೆ ಹಣತೆ ನೀಡಿದರು
ಸಿರಿಗೆರೆ ಐಕ್ಯಮಂಟಪದಲ್ಲಿ ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗ್ರಾಮಸ್ಥರಿಗೆ ಹಣತೆ ನೀಡಿದರು   

ಸಿರಿಗೆರೆ: ‘ತಾತ್ವಿಕ ಮೌಲ್ಯಗಳನ್ನು ಬಿಂಬಿಸುವ ಹಬ್ಬದ ಆಚರಣೆ ಅದರದೇ ಆದ ವೈಶಿಷ್ಟಗಳನ್ನು ಹೊಂದಿದ್ದು, ದೀಪಾವಳಿ ಹಬ್ಬದಲ್ಲಿ ಬೆಳಕು ಜ್ಞಾನದ ಸಂಕೇತ, ಕತ್ತಲು ಅಜ್ಞಾನದ ಸಂಕೇತವಾಗಿದೆ. ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡಬೇಕಿದೆ’ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತರಳಬಾಳು ಬೃಹನ್ಮಠದ ಐಕ್ಯಪಂಟಪದಲ್ಲಿ ಅಣ್ಣನ ಬಳಗದವರು ಬುಧವಾರ ಆಯೋಜಿಸಿದ್ದ ದೀಪಾವಳಿ ಹಬ್ಬದ ಆಚರಣೆಯಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಪುತ್ಥಳಿಗೆ ಹಾಗೂ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಪ್ರತಿಮೆಗೆ ಪುಷ್ಪ ಅರ್ಪಿಸಿ ಹಣತೆ ಹಚ್ಚಿ ಮಕ್ಕಳೊಂದಿಗೆ ಸಂಭ್ರಮಿಸಿ ಮಾತನಾಡಿದರು.

ಕೊಂಬು, ಕಹಳೆ ಮೊಳಗಿಸಿ, ನಗಾರಿ ಬಾರಿಸಿ ದೀಪ ಬೆಳಗಿಸುವ ದೀಪಾವಳಿಯು ಇಂದು ಪಟಾಕಿ ಹಾವಳಿಯ ಹಬ್ಬವಾಗಿದೆ. ಪರಿಸರವನ್ನು, ಆರೋಗ್ಯವನ್ನು ಮಲೀನ ಮಾಡುವ ಪಟಾಕಿ ಈ ಹಬ್ಬದಲ್ಲಿ ನುಸುಳಿಕೊಂಡಿರುವುದು ವಿಷಾದನೀಯ ಎಂದು ಹೇಳಿದರು.

ADVERTISEMENT

ದೀಪ ಹಚ್ಚುವವರಿಗಿಂತ ಬೆಂಕಿ ಹಚ್ಚುವವರ ಸಂಖ್ಯೆಯೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾವೇ ರಚಿಸಿದ ‘ಮತ್ಸರದ ಬತ್ತಿ’ ಎಂಬ ಕವಿತೆಯನ್ನು ಈ ಸಂದರ್ಭದಲ್ಲಿ ವಾಚಿಸಿದ್ದು ಮಾರ್ಮಿಕವಾಗಿತ್ತು.

ದಾವಣಗೆರೆಯ ಯು.ಜಿ.ಶಿವಕುಮಾರ್ ಕುರುಡಿ ಅವರು ‘ವಿಶ್ವಬಂಧು ಮರುಳಸಿದ್ಧನ’ ಪ್ರತಿಮೆಯನ್ನು ಶ್ರೀಮಠಕ್ಕೆ ನೀಡಿದ್ದನ್ನು ಸ್ವಾಮೀಜಿ ಶ್ಲಾಘಿಸಿದರು. ಮಠದ ಮುಂಭಾಗದಲ್ಲಿ ವಿದ್ಯಾರ್ಥಿಗಳು ರಂಗೋಲಿ ಹಾಕಿ, ದೀಪ ಹಚ್ಚಿ ಸಿಂಗರಿಸಿದ್ದರು. ಐಕ್ಯಮಂಟಪದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೇರಿ ಹಣತೆ ಹಚ್ಚಿ ಸಂಭ್ರಮಿಸಿದರು.

ಲತಾ ಮಂಪಟದಲ್ಲಿ ‘ವಿಶ್ವಬಂಧು ಮರುಳಸಿದ್ಧನ’ ಪ್ರತಿಮೆಗೆ ಸ್ವಾಮೀಜಿ ಪುಷ್ಪ ಸಲ್ಲಿಸಿದರು. ಐಕ್ಯಮಂಟಪ, ಶ್ರೀಮಠದ ಆವರಣದಲ್ಲಿ ವಿದ್ಯುತ್ ದೀಪ ಕಂಗೊಳಿಸುತ್ತಿತ್ತು.

ಮಹಿಳೆಯರು, ಮಕ್ಕಳಾದಿಯಾಗಿ ಹಣತೆಯನ್ನು ತೆಗೆದುಕೊಂಡು ಮನೆಗಳಿಗೆ ತೆರಳಿ ಹಬ್ಬವನ್ನು ಸಂಭ್ರಮಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಾಜಿ ಅಧ್ಯಕ್ಷರು, ಸದಸ್ಯರು, ಸಹಕಾರ ಸೇವಾ ಸಂಘದ ಅಧ್ಯಕ್ಷರು, ಸದಸ್ಯರು,
ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.