ADVERTISEMENT

ಬಂಜಾರ ಮಹಿಳೆಯರ ನೃತ್ಯದ ಸೊಬಗು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:36 IST
Last Updated 28 ಅಕ್ಟೋಬರ್ 2022, 7:36 IST
ಚಿಕ್ಕಜಾಜೂರು ಸಮೀಪದ ತಣಿಗೆಹಳ್ಳಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಬುಧವಾರ ಹಟ್ಟಿ ಹಾಕಲು ಅಡವಿಯಿಂದ ತಂಗಟೆ ಹೂವನ್ನು ಕೊಯ್ದು ತಂದ ಬಂಜಾರ ಯುವತಿಯರು.
ಚಿಕ್ಕಜಾಜೂರು ಸಮೀಪದ ತಣಿಗೆಹಳ್ಳಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಬುಧವಾರ ಹಟ್ಟಿ ಹಾಕಲು ಅಡವಿಯಿಂದ ತಂಗಟೆ ಹೂವನ್ನು ಕೊಯ್ದು ತಂದ ಬಂಜಾರ ಯುವತಿಯರು.   

ಚಿಕ್ಕಜಾಜೂರು: ಸಮೀಪದ ತಣಿಗೆಹಳ್ಳಿ ಗ್ರಾಮದಲ್ಲಿನ ತಾಂಡಾದ ಜನರು ಬುಧವಾರ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ಯುವತಿಯರು ಹಟ್ಟಿಗೆ ಹಾಕಲು ತಂಗಟೆ ಹೂವನ್ನು ತರಲು ಬುಟ್ಟಿ ಹಿಡಿದು ಅಡವಿಗೆ ಹೊರಟಾಗ ಗ್ರಾಮದ ಯುವಕರು ವಾದ್ಯಗಳೊಂದಿಗೆ ನೃತ್ಯ ಮಾಡುತ್ತಾ ಮೆರವಣಿಗೆ ಮೂಲಕ ಕಳುಹಿಸಿಕೊಟ್ಟರು.

ಮಧ್ಯಾಹ್ನ ತಂಗಟೆ, ಅನ್ನೆ, ಅವರೆ, ತೊಗರಿ ಹೂವು, ರಾಗಿ ತೆನೆ, ಉತ್ತರಾಣಿ ಕಡ್ಡಿ ಮತ್ತಿತರ ಹಟ್ಟಿಗೆ ಹಾಕುವ ಸಾಮಗ್ರಿಗಳೊಂದಿಗೆ ಗ್ರಾಮಕ್ಕೆ ಹಿಂತಿರುಗಿದ ಯುವತಿಯರನ್ನು ಸಾಂಪ್ರದಾಯಕ ಹಾಡುಗಳೊಂದಿಗೆ ಯುವಕರು ನೃತ್ಯದ ಮೂಲಕ ಗ್ರಾಮದ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕರೆ ತಂದರು. ನೃತ್ಯದಲ್ಲಿ ಮಕ್ಕಳು, ಯುವತಿಯರು, ಯುವಕರು ಪಾಲ್ಗೊಂಡು ಮನರಂಜನೆ ನೀಡಿ ದ್ದುದು ಎಲ್ಲರ ಗಮನ ಸೆಳೆಯಿತು. ದೇವಸ್ಥಾನದಲ್ಲಿ ಹೂವಿನ ಪುಟ್ಟಿಗಳಿಗೆ ಪೂಜೆ ಸಲ್ಲಿಸಿದ ನಂತರ, ಪ್ರತಿ ಮನೆಯವರು ತಮ್ಮ ಮನೆಯ ಅಂಗಳಕ್ಕೆ ಹಾಕುವಷ್ಟು ಹೂವುಗಳನ್ನು ಒಯ್ದು ಮನೆಯ ಅಂಗಳದ ರಂಗೋಲಿ ಮೇಲೆ ಚೆಲ್ಲಿ, ಬೆನಕಪ್ಪನನ್ನು ಪ್ರತಿಷ್ಠಾಪಿಸುವುದು ಹಬ್ಬದ ವಿಶೇಷ.

ಹಬ್ಬದ ಪ್ರಯುಕ್ತ ದೇವಸ್ಥಾನದ ಮುಂಭಾಗ ಮಹಿಳೆಯರು ನೃತ್ಯ ನಡೆಸಿಕೊಟ್ಟದ್ದು ಎಲ್ಲರ ಗಮನ ಸೆಳೆಯಿತು. 35ರಿಂದ 65 ವರ್ಷದ ಮಹಿಳೆಯರು ಸಾಂಪ್ರದಾಯಕ ಉಡುಪು ಧರಿಸಿ ನೃತ್ಯದಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರ ನೃತ್ಯದಿಂದ ಪ್ರೇರೇಪಿತರಾದ ಯುವಕ– ಯುವತಿಯರು ಸಹ ನೃತ್ಯ ಮಾಡಿದರು.

ADVERTISEMENT

ಹೋಬಳಿಯ ಗುಲಗಂಜಿಹಟ್ಟಿ, ಐಯ್ಯನಹಳ್ಳಿ, ನಂದಿಹಳ್ಳಿ, ಕಾಳಘಟ್ಟ ಲಂಬಾಣಿ ತಾಂಡಾ, ಕತ್ತಾಳಿಹಟ್ಟಿ, ಗಂಜಿಗಟ್ಟೆ ಲಂಬಾಣಿ ತಾಂಡಾ ಮೊದಲಾದ ಕಡೆಗಳಲ್ಲೂ ಬಂಜಾರ ಜನರು ಹಬ್ಬವನ್ನು ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.