ಹಿರಿಯೂರು: ‘ದೇವರ ಹೆಸರಿನಲ್ಲಿ ಹಾಲನ್ನು ವ್ಯರ್ಥ ಮಾಡುವುದು ಬೇಡ. ಮೂಢನಂಬಿಕೆಗಳನ್ನು ಬದಿಗಿಟ್ಟು ಅರ್ಥಪೂರ್ಣವಾಗಿ ಹಬ್ಬಗಳನ್ನು ಆಚರಿಸಿ’ ಎಂದು ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಘಟಕದ ಸಂಚಾಲಕ ಎಚ್.ಎಸ್. ಮಾರುತೇಶ ಕೂನಿಕೆರೆ ಮನವಿ ಮಾಡಿದರು.
ತಾಲ್ಲೂಕಿನ ಕೂನಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ನಾಗರಪಂಚಮಿ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಾಲು ವಿತರಿಸಿ ಅವರು ಮಾತನಾಡಿದರು.
‘ಕಲ್ಲು ನಾಗರ ಕಂಡರೆ ಹಾಲೆರೆ ಎನ್ನುವರು, ದಿಟ ನಾಗರ ಕಂಡರೆ ಕೊಲ್ಲು ಎಂಬರು ಎಂದು ಬಸವಣ್ಣನವರು ಹೇಳಿರುವ ಮಾತನ್ನು ಸದಾ ಕಾಲ ಎಲ್ಲರೂ ಸ್ಮರಣೆಯಲ್ಲಿಡಬೇಕು. ನಮ್ಮಲ್ಲಿ ಆಚರಣೆಯಲ್ಲಿರುವ ಹಲವು ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರೂ ಕೆಲವು ಆಚರಣೆಗಳು ಮೂಡನಂಬಿಕೆಗಳನ್ನು ಪ್ರಚೋದಿಸುತ್ತಿವೆ. ದೈವಾರಾಧನೆ ನಂಬಿಕೆಯ ವಿಚಾರ. ದೈವದ ಆರಾಧನೆಯ ನೆಪದಲ್ಲಿ ಆಡಂಬರ, ಮೂಢನಂಬಿಕೆ ಸಲ್ಲದು. ಮಡೆಸ್ನಾನ, ಹುತ್ತಕ್ಕೆ ಹಾಲು ಎರೆಯುವ ಬದಲು ಹಸಿದವರಿಗೆ ಅನ್ನದಾಸೋಹ, ಮಕ್ಕಳಿಗೆ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು ಕೊಟ್ಟಲ್ಲಿ ಅವರಲ್ಲಿನ ಪೌಷ್ಠಿಕತೆ ಹೆಚ್ಚುತ್ತದೆ’ ಎಂದು ಮಾರುತೇಶ್ ತಿಳಿಸಿದರು.
‘ವಿದ್ಯಾವಂತರು ನಾಗರಪಂಚಮಿಯಂತಹ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುವತ್ತ ಚಿಂತನೆ ಮಾಡಬೇಕಿದೆ. ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡುವ ಕೆಲಸವನ್ನು ವಿಚಾರವಂತರು ಮಾಡುವ ಮೂಲಕ ಮೌಢ್ಯತೆಗೆ ಕಡಿವಾಣ ಹಾಕಬೇಕಿದೆ. ಮೌಢ್ಯತೆಯ ವಿರುದ್ಧ, ಪ್ರಯೋಜನವಿಲ್ಲದ ನಂಬಿಕೆಗಳ ವಿರುದ್ಧ ನಾವೆಲ್ಲರೂ ದನಿ ಎತ್ತಬೇಕು. ಮುಂಬರುವ ವರ್ಷಗಳಲ್ಲಿ ನಾಗರ ಪಂಚಮಿ ಹೆಸರಿನ ಬದಲು ಬಸವ ಪಂಚಮಿ ಎಂದು ಎಲ್ಲರೂ ಹೇಳುವಂತರಾಗಬೇಕು’ ಎಂದರು.
ಮುಖ್ಯಶಿಕ್ಷಕ ಮಂಜುನಾಥ್, ಸಹ ಶಿಕ್ಷಕರಾದ ಸುಧಾಮಣಿ, ಪಾರ್ವತಮ್ಮ, ಉರ್ದು ಶಾಲೆಯ ಮುಖ್ಯಶಿಕ್ಷಕರ ರಮೇಶ್, ಮಲ್ಲಿಕಾ ಬಾನು, ಅಸ್ಮತ್ ಉನ್ನೀಸಾ, ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರವಿಕುಮಾರ್, ಮುಖಂಡರಾದ ಅತಾವುಲ್ಲಾ, ಅಂಗನವಾಡಿ ಹಾಗೂ ಅಕ್ಷರದಾಸೋಹ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.