ADVERTISEMENT

ವಿದ್ಯಾರ್ಥಿಗಳ ಶೂ ವಿತರಣೆಗೆ ನಿರ್ಲಕ್ಷ್ಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 6:31 IST
Last Updated 17 ಜುಲೈ 2025, 6:31 IST
ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಟೈ, ಬೆಲ್ಟ್‌ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಟೈ, ಬೆಲ್ಟ್‌ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ‘ಬೀದಿನಾಯಿಗಳ ಮೇಲೆ ಕರುಣೆ ತೋರಿಸುತ್ತಿರುವ ರಾಜ್ಯ ಸರ್ಕಾರ ಬಿರಿಯಾನಿ ಕೊಡಲು ಮುಂದಾಗಿದೆ. ಆದರೆ ಸರ್ಕಾರಿ ಶಾಲೆಗಳಿಗೆ ಶೂ, ಟೈ, ಬೆಲ್ಟ್‌ ಕೊಡಲು ವಿಫಲವಾಗಿದೆ’ ಎಂದು ಆರೋಪಿಸಿ ಕರುನಾಡ ವಿಜಯಸೇನೆ ಸದಸ್ಯರು ನಾಯಿಗಳನ್ನು ಕರೆತಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಬರಿಗಾಲಿನಲ್ಲಿ ಪಾದಯಾತ್ರೆಯ ಮೂಲಕ ಬಂದರು. ಶಾಲೆ ಪ್ರಾರಂಭವಾಗಿ 2– 3 ತಿಂಗಳು ಕಳೆದರೂ ಶೂಗಳನ್ನು ವಿತರಿಸಿಲ್ಲ. ಈ ರೀತಿಯ ಅವ್ಯವಸ್ಥೆಗೆ ಶಿಕ್ಷಣ ಸಚಿವರೇ ನೇರ ಹೊಣೆ. ಸರಿಯಾದ ಪ್ರಮಾಣದಲ್ಲಿ ಶಿಕ್ಷಕರು ಇಲ್ಲದ ಕಾರಣ ಸರ್ಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಬಿಬಿಎಂಪಿ ವ್ಯಾಪ್ತಿಯ ಪ್ರತಿ ನಾಯಿಗೆ ₹ 27 ವೆಚ್ಚದಲ್ಲಿ ಬಿರಿಯಾನಿ ನೀಡುತ್ತಾರೆ. ಆದರೆ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ ವಿತರಣೆ ಮಾಡಲು ತಡ ಮಾಡುತ್ತಾರೆ. ಈ ರೀತಿಯ ಅವ್ಯವಸ್ಥೆಗೆ ಶಿಕ್ಷಣ ಸಚಿವರ ನಿರ್ಲಕ್ಷ್ಯವೇ ಕಾರಣ. ನಾಯಿಗಳಿಗೆ ಇರುವ ಬೆಲೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಇಲ್ಲವೇ? ಶಿಕ್ಷಣ ಸಚಿವರು ಸರ್ಕಾರಿ ಕಾರು ಬಳಸಬಾರದು. ತಮ್ಮ ಸೌಲಭ್ಯ ತ್ಯಾಗ ಮಾಡಿ ಶೂ ಭಾಗ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕರುನಾಡ ವಿಜಯಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಗೌರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ರಾಜ್ಯ ಸಮಿತಿ ಸದಸ್ಯರಾದ ನಿಸಾರ್ ಆಹ್ಮದ್, ಜಿಲ್ಲಾ ಉಪಾಧ್ಯಕ್ಷ ರತ್ನಮ್ಮ, ಮುಜಾಹೀದ್, ನಾಗೇಶ್, ಅಖಿಲೇಶ್, ಜಗದೀಶ್, ಶಶಿ, ವಿಜಯ ಬಾಬು, ಹರೀಶ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.