ಹಿರಿಯೂರು: ‘ತಾಲ್ಲೂಕಿನ ಐಮಂಗಲ ಹೋಬಳಿಯ ಗೋಕಟ್ಟೆಗಳು ಒಳಗೊಂಡು 61 ಕೆರೆಗಳು ಹಾಗೂ ಧರ್ಮಪುರ ಹೋಬಳಿಯ 4 ಕೆರೆಗಳು ಸೇರಿ ಒಟ್ಟು 65 ಕೆರೆಗಳಿಗೆ ನೀರು ತುಂಬಿಸುವ ಜೊತೆಗೆ 37,644 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸುವ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ ತೋರಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ತಿಳಿಸಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿ ಬಗ್ಗೆ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಭದ್ರಾ ಮೇಲ್ದoಡೆ ಯೋಜನೆಯ ಮೂಲಕ ಕೃಷಿಗೆ ನೀರು ಒದಗಿಸುವ ಯೋಜನೆಯ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದೆ. ಕಾಮಗಾರಿ ಅನುಷ್ಠಾನ ಹಂತದಲ್ಲಿ ಗುರುತ್ವಾಕರ್ಷಣೆ ಮೂಲಕ ನೀರು ಹರಿಸಲು ಸಾಧ್ಯವಿರುವ ಹಾಗೂ ಮೂಲ ವಿಸ್ತೃತ ಯೋಜನೆಯಲ್ಲಿ ಕೈಬಿಟ್ಟ ಐಮಂಗಲ ಹೋಬಳಿಯ 49 ಕೆರೆಗಳು ಮತ್ತು ಗೋಕಟ್ಟೆಗಳನ್ನು ಸೇರ್ಪಡೆ ಮಾಡಿ ನೀರು ತುಂಬಿಸುವ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಚಿವರು ಮಾಹಿತಿ ನೀಡಿದರು.
‘ವಿಶ್ವೇಶ್ವರಯ್ಯ ಜಲ ನಿಗಮದ ಮುಖಾಂತರ ನಾಲ್ಕು ಪ್ಯಾಕೇಜ್‌ಗಳಲ್ಲಿ 1,421 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ. ಗುರುತ್ವಾಕರ್ಷಣೆ ಮೂಲಕ ನೀರು ತುಂಬಿಸಲು ಸಾಧ್ಯವಿಲ್ಲದ ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ಪರ್ಯಾಯ ಮಾರ್ಗದ ಮೂಲಕ ನೀರು ತುಂಬಿಸಲು ಇದೇ ಟೆಂಡರ್‌ನಲ್ಲಿ ಸೇರಿಸುವ ಕುರಿತು ಜಲ ನಿಗಮದ ಅಧಿಕಾರಿಗಳು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಲಾಗಿದ್ದು, ಚಿಕ್ಕಸಿದ್ದವ್ವನಹಳ್ಳಿ ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ನನಗೆ ಬದ್ಧತೆ ಇದೆ’ ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಎಂಜಿನಿಯರ್‌ಗಳಾದ ಹರೀಶ್, ಚಂದ್ರಪ್ಪ, ಎಇಇ ಚಂದ್ರಶೇಖರ್, ಸಂತೋಷ್, ನಗರಸಭೆ ಪೌರಾಯುಕ್ತ ಎ. ವಾಸೀಂ, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಠ್ಠಲ ಪಾಂಡುರಂಗ, ಮಮತಾ, ಎಂ.ಡಿ. ಸಣ್ಣಪ್ಪ, ರತ್ನಮ್ಮ, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ನಗರಸಭೆ ಸದಸ್ಯರಾದ ಈ. ಮಂಜುನಾಥ್, ಬಿ. ಎನ್. ಪ್ರಕಾಶ್, ಶಿವರಂಜನಿ ಯಾದವ್ ಉಪಸ್ಥಿತರಿದ್ದರು.
ತಿಂಗಳಾಂತ್ಯಕ್ಕೆ ಡಿಸಿಎಂ ಭೇಟಿ
ಈ ತಿಂಗಳ ಕೊನೆಯ ಒಳಗೆ ಡಿ.ಕೆ. ಶಿವಕುಮಾರ್ ಅವರು ಚಿತ್ರದುರ್ಗ ನಗರಕ್ಕೆ ಭೇಟಿ ನೀಡಲಿದ್ದು ಅಂದು ಭದ್ರಾ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ. ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕುರಿತು ಜನರ ಆಶೋತ್ತರಗಳನ್ನು ಒಂದೊಂದಾಗಿ ಈಡೇರಿಸುವ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕೆಂಬುದು ನನ್ನ ಆದ್ಯತೆಗಳಲ್ಲಿ ಒಂದು ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.