ADVERTISEMENT

ಚಿತ್ರದುರ್ಗ ಜಿಲ್ಲೆಯಲ್ಲಿ ಬರದ ಛಾಯೆ

ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು, ಹೊಸದುರ್ಗದಲ್ಲಿ ಮಳೆ ಕೊರತೆ, ರೈತರಲ್ಲಿ ಆತಂಕ

ಎಂ.ಎನ್.ಯೋಗೇಶ್‌
Published 17 ಜುಲೈ 2025, 6:35 IST
Last Updated 17 ಜುಲೈ 2025, 6:35 IST
ಚಳ್ಳಕೆರೆ ತಾಲ್ಲೂಕಿನಲ್ಲಿ ಶೇಂಗಾ ಬಿತ್ತನೆಗೆ ಸಿದ್ಧಗೊಂಡಿರುವ ಹೊಲ
ಚಳ್ಳಕೆರೆ ತಾಲ್ಲೂಕಿನಲ್ಲಿ ಶೇಂಗಾ ಬಿತ್ತನೆಗೆ ಸಿದ್ಧಗೊಂಡಿರುವ ಹೊಲ   

ಚಿತ್ರದುರ್ಗ: ರಾಜ್ಯದ ವಿವಿಧೆಡೆ ಮಳೆ ಅಬ್ಬರಿಸುತ್ತಿದ್ದು, ಜಲಾಶಯ, ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಆದರೆ, ಕೋಟೆನಾಡಿನಲ್ಲಿ ಮಳೆರಾಯ ಕೈಕೊಟ್ಟಿದ್ದು, ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು, ಹೊಸದುರ್ಗ ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ.

ಮುಂಗಾರು ಹಂಗಾಮಿನಲ್ಲಿ ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ತಾಲ್ಲೂಕಿನ ರೈತರಿಗೆ ಶೇಂಗಾ ಬೆಳೆಯೇ ಆಧಾರ. ಮುಂಗಾರು ಪೂರ್ವ ಹಂತದಲ್ಲಿ ಬಿತ್ತನೆಯನ್ನೂ ಮಾಡದೇ ಶೇಂಗಾ ಬಿತ್ತನೆಗಾಗಿ ಹೊಲ ಹಸನು ಮಾಡಿಕೊಂಡು ಮಳೆಗಾಗಿ ಕಾಯುವ ಕೃಷಿಕರು ಜುಲೈ ಮೊದಲೆರಡು ವಾರಗಳಲ್ಲಿ ಬಿತ್ತನೆ ಮಾಡುವುದು ವಾಡಿಕೆ. ಸದ್ಯ ಬಿತ್ತನೆ ಅವಧಿ ಮುಗಿಯುತ್ತ ಬಂದಿದ್ದು ಮಳೆ ಬಾರದೆ ಆತಂಕ ಹೆಚ್ಚಿಸಿದೆ.

ವಾಣಿಜ್ಯ ಬೆಳೆಯಾದ ಶೇಂಗಾ ರೈತರಿಗೆ ಆರ್ಥಿಕ ಶಕ್ತಿ ನೀಡುತ್ತದೆ. ಶೇಂಗಾ ಬೆಳೆಯೇ ಇಲ್ಲಿಯ ರೈತರ ಬದುಕನ್ನು ನಿರ್ಧರಿಸುತ್ತದೆ. ಬಿತ್ತನೆಗಾಗಿ ಆರಿದ್ರಾ, ಹಿರೇ ಪುಷ್ಯ, ಚಿಕ್ಕ ಪುಷ್ಯ ಮಳೆಯನ್ನೇ ಕಾಯುತ್ತಾರೆ. ಈ ಅವಧಿಯಲ್ಲಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ, ಸೂಕ್ತ ದರ ದೊರೆಯುತ್ತದೆ. ಜುಲೈ ಮೂರನೇ ವಾರ ಬಂದರೂ ಮಳೆಯ ಲಕ್ಷಣಗಳಿಲ್ಲದಿರುವುದು ಬಿತ್ತನೆಗೆ ಹಿನ್ನಡೆಯಾಗಿದೆ.

ADVERTISEMENT

‘ಇನ್ನೊಂದು ವಾರ ಮಳೆ ಸುರಿಯದಿದ್ದರೆ ನಮ್ಮನ್ನು ದೇವರೇ ಕಾಪಾಡಬೇಕು. ಇಡೀ ವರ್ಷದ ಉಪಜೀವನ ಮುಕ್ತಾಯವಾಗುತ್ತದೆ. ಸಾಲ ತಲೆ ಮೇಲೇರಿ ಬಡತನ ಹೆಚ್ಚುತ್ತದೆ. ಈಗಲೂ ಮಳೆಗಾಗಿ ಕಾಯುತ್ತಿದ್ದೇವೆ. ಆಕಾಶದ ಕಡೆ ನೋಡುತ್ತಲೇ ಕಾಲ ಕಳೆಯುತ್ತಿದ್ದೇವೆ. ಪೂಜೆ, ಪುನಸ್ಕಾರ ಮಾಡುತ್ತಿದ್ದೇವೆ’ ಎಂದು ಚಳ್ಳಕೆರೆ ತಾಲ್ಲೂಕು ದೇವರ ಮರಿಕುಂಟೆ ಗ್ರಾಮದ ರೈತ ಪಾಲಯ್ಯ ಹೇಳಿದರು.

ಜುಲೈ ಮೊದಲ ವಾರ ರಾಜ್ಯದಾದ್ಯಂತ ಉತ್ತಮ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ರೈತರು ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಹದ ಮಳೆ ಬಾರದೇ ಸೋನೆಗಷ್ಟೇ ಸೀಮಿತವಾಯಿತು. ಕಳೆದೊಂದು ತಿಂಗಳಿಂದ ಮೋಡ ಮುಚ್ಚಿದ ವಾತಾವರಣವಿದ್ದು ಸೂರ್ಯ ಮರೆಯಾಗಿದ್ದಾನೆ. ಇಂದಲ್ಲ ನಾಳೆ ಮಳೆ ಸುರಿಯಬಹುದು ಎಂಬ ನಿರೀಕ್ಷೆಯಲ್ಲೇ ಇದ್ದರು. ಆದರೆ, ಜುಲೈ 15 ಮುಗಿದರೂ ಮಳೆ ಬಾರದ ಕಾರಣ ರೈತರಿಗೆ ಬರದ ಛಾಯೆ ಎದುರಾಗಿದೆ.

ಚಳ್ಳಕೆರೆ, ನಾಯಕನಹಟ್ಟಿ, ಶ್ರೀರಾಂಪುರ, ತಳಕು ಭಾಗದಲ್ಲಿ ಜೂನ್‌ ತಿಂಗಳಿಂದಲೂ ಈ ಭಾಗದಲ್ಲಿ ಮಳೆ ಕೊರತೆ ಕಾಡುತ್ತಿದೆ. ಇಡೀ ಚಳ್ಳಕೆರೆ ತಾಲ್ಲೂಕಿನಲ್ಲಿ ವಾಡಿಕೆ ಮಳೆಯಿಂತ ಶೇ 29ರಷ್ಟು ಮಳೆ ಕೊರತೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕಳೆದೊಂದು ವಾರದಿಂದ ಶೇ 48ರಷ್ಟು ಮಳೆ ಕೊರತೆಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ ಶೇ 32ರಷ್ಟು, ಹೊಸದುರ್ಗ ತಾಲ್ಲೂಕಿನಲ್ಲಿ ಶೇ 45ರಷ್ಟು ಮಳೆ ಕೊರತೆಯಾಗಿದೆ.

ಮೊಳಕಾಲ್ಮುರು ತಾಲ್ಲೂಕು ರಾಜ್ಯದಲ್ಲೇ ಅತೀ ಕಡಿಮೆ ಮಳೆ ಸುರಿಯುವ ಪ್ರದೇಶ ಎಂದು ಗುರುತಿಸಿಕೊಂಡಿದೆ. ಆದರೆ ಕಳೆದ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ಆ ಭಾಗದ ರೈತರು ಸಂತಸದಲ್ಲಿದ್ದರು. ಶೇಂಗಾ, ಈರುಳ್ಳಿ ಬೆಳೆದು ಲಾಭ ಕಂಡಿದ್ದರು. ಆದರೆ ಈ ಬಾರಿ ಮಳೆ ಕೊರತೆಯಾಗಿದ್ದು ರೈತರ ಬೇಸರ ಹೆಚ್ಚಿಸಿದೆ.

‘ಚದುರಿದಂತೆ ಮಳೆಯಾಗುತ್ತಿರುವ ಕಾರಣ ಭೂಮಿ ನೆನೆಯುತ್ತಿಲ್ಲ. ಸೋನೆ ಮಳೆಗೆ ಬಿತ್ತನೆ ಮಾಡಲೂ ಸಾಧ್ಯವಿಲ್ಲ. ಇನ್ನೊಂದು ವಾರದಲ್ಲಾದರೂ ಮಳೆ ಸುರಿದರೆ ಬಿತ್ತನೆ ಸಾಧ್ಯವಿದೆ’ ಎಂದು ರೈತರು ಹೇಳುತ್ತಾರೆ.

‘ಸಿರಿಧಾನ್ಯಗಳ ತವರು’ ಎಂದು ಹೊಸದುರ್ಗ ತಾಲ್ಲೂಕು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ ಈ ಬಾರಿ ತಾಲ್ಲೂಕಿನ ಬಹುತೇಕ ಭಾಗದಲ್ಲಿ ಬೆಳೆ ನೆಲ ಕಚ್ಚಿದೆ. ಪೂರ್ವ ಮುಂಗಾರು ಬಿತ್ತನೆ ಕಾಲದಲ್ಲೂ ಮಳೆ ಕೈಕೊಟ್ಟ ಕಾರಣ ರೈತರು ಬೆಳೆ ನೋಡಲು ಸಾಧ್ಯವಾಗಲಿಲ್ಲ. ಈಗ ಮುಂಗಾರು ಬಿತ್ತನೆಯೂ ಸಾಧ್ಯವಾಗದೆ ಆರ್ಥಿಕ ಸಂಕಷ್ಟ ಎದುರಿಸುವ ಭೀತಿಯಲ್ಲಿದ್ದಾರೆ. ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ಕೊಂಚ ಹದ ಮಳೆ ಸುರಿದಿದ್ದು ಮೆಕ್ಕೆಜೋಳ, ರಾಗಿ ಬಿತ್ತನೆ ಮಾಡುತ್ತಿದ್ದಾರೆ.

ಇನ್ನೂ ಕಾಲ ಮಿಂಚಿಲ್ಲ ಜುಲೈ ಕಡೆಯ ವಾರದವರೆಗೂ ಶೇಂಗಾ ಬಿತ್ತೆನೆ ಮಾಡಬಹುದು. ರೈತರಿಗೆ ನಾವು ನಿರಂತರವಾಗಿ ಸಲಹೆ ನೀಡುತ್ತಿದ್ದೇವೆ. ರಸಗೊಬ್ಬರ ಬಿತ್ತನೆ ಬೀಜದ ಕೊರತೆ ಇಲ್ಲ
ಬಿ.ಮಂಜುನಾಥ್‌ ಜಂಟಿ ಕೃಷಿ ನಿರ್ದೇಶಕ ಚಿತ್ರದುರ್ಗ

ಶೇಂಗಾ ಬಿಟ್ಟರೆ ಪರ್ಯಾಯ ಇಲ್ಲ

‘ಚಿತ್ರದುರ್ಗ ಜಿಲ್ಲೆಯ ಬಹುತೇಕ ರೈತರಿಗೆ ಶೇಂಗಾ ಬೆಳೆಯೇ ಆಧಾರ. ಶೇಂಗಾ ಬಿತ್ತನೆ ಅವಧಿ ಮುಗಿದರೆ ಪರ್ಯಾಯ ಬೆಳೆ ಬೆಳೆಯಲು ಸಾಧ್ಯವೇ ಇಲ್ಲ. ಇಡೀ ವರ್ಷ ವ್ಯರ್ಥವಾಗುತ್ತದೆ’ ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಹೇಳಿದರು. ‘ಕಳೆದ ವರ್ಷ ಉತ್ತಮ ಮಳೆ ಸುರಿದಿತ್ತು. ಆದರೆ ಈ ಬಾರಿ ಭರವಸೆ ಇಲ್ಲ. ಅಸಮರ್ಪಕವಾಗಿ ಮಳೆ ಸುರಿಯುವ ನಮ್ಮ ಜಿಲ್ಲೆಯ ರೈತರಿಗೆ ಸರ್ಕಾರ ವಿಶೇಷ ನೆರವಿನ ಪ್ಯಾಕೇಜ್‌ ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.