ADVERTISEMENT

ಚಿತ್ರದುರ್ಗ: ವ್ಯಸನ ಮುಕ್ತ ದುರ್ಗ ನಿರ್ಮಾಣಕ್ಕೆ ಅಭಿಯಾನ

ಯುವಕರಿಂದ ಯುವಕರಿಗಾಗಿ 2 ಹಂತಗಳಲ್ಲಿ ಸ್ಪರ್ಧೆ; ಜಾಗೃತಿ ಮೂಡಿಸಲು 50 ರಾಯಭಾರಿಗಳ ಆಯ್ಕೆ

ಎಂ.ಎನ್.ಯೋಗೇಶ್‌
Published 5 ಅಕ್ಟೋಬರ್ 2025, 2:01 IST
Last Updated 5 ಅಕ್ಟೋಬರ್ 2025, 2:01 IST
‘ನಶೆ ಮುಕ್ತ ಚಿತ್ರದುರ್ಗ; ಸದೃಢ ಚಿತ್ರದುರ್ಗ‘ ಅಭಿಯಾನದ ಪ್ರಚಾರಪತ್ರವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ಬಿಡುಗಡೆಗೊಳಿಸಿದರು
‘ನಶೆ ಮುಕ್ತ ಚಿತ್ರದುರ್ಗ; ಸದೃಢ ಚಿತ್ರದುರ್ಗ‘ ಅಭಿಯಾನದ ಪ್ರಚಾರಪತ್ರವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ಬಿಡುಗಡೆಗೊಳಿಸಿದರು   

ಚಿತ್ರದುರ್ಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಹಾವಳಿ ವಿರುದ್ಧ ಯುವಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್‌ ಇಲಾಖೆ ‘ನಶೆ ಮುಕ್ತ ಚಿತ್ರದುರ್ಗ; ಸದೃಢ ಚಿತ್ರದುರ್ಗ’ ಅಭಿಯಾನ ಆರಂಭಿಸಿದೆ. ಜಿಲ್ಲೆಯಾದ್ಯಂತ 50 ಯುವಕ– ಯುವತಿಯರನ್ನು ಆಯ್ಕೆ ಮಾಡಿ ಅವರನ್ನು ‘ಮಾದಕ ವಸ್ತುಗಳ ವಿರುದ್ಧದ ರಾಯಭಾರಿ’ ಎಂದು ಪರಿಗಣಿಸಿ ವಿವಿಧ ಚಟುವಟಿಕೆಯಲ್ಲಿ ತೊಡಗಿಸಲು ನಿರ್ಧರಿಸಿದೆ.

ಜಿಲ್ಲೆಯಾದ್ಯಂತ ವಿವಿಧೆಡೆ ಯುವಜನರು ಮಾದಕ ವಸ್ತುಗಳನ್ನು ಬಳಸುತ್ತಿರುವುದು ಪತ್ತೆಯಾಗುತ್ತಿದೆ. ಪಾಳು ಕಟ್ಟಡ, ನಿರ್ಜನ ಪ್ರದೇಶ, ಪ್ರವಾಸಿ ತಾಣಗಳ ಬಳಿ ಮದ್ಯ, ಡ್ರಗ್ಸ್‌ ಸೇವನೆಯಂತಹ ದೂರುಗಳು ಕೇಳಿಬರುತ್ತಿವೆ. ಮಾದಕ ವ್ಯಸನದಿಂದ ಯುವಜನರನ್ನು ಸಂರಕ್ಷಿಸಿ ಅವರ ಮೂಲಕವೇ ಮಾದಕ ವಸ್ತುಗಳ ವಿರುದ್ಧ ಹೋರಾಟ ನಡೆಸಲು ಪ್ರೇರೇಪಿಸುವ ಸಲುವಾಗಿ ನಶೆ ಮುಕ್ತ ಚಿತ್ರದುರ್ಗ ಅಭಿಯಾನ ಆರಂಭಿಸಲಾಗಿದೆ.

ಮಾದಕ ವಸ್ತುಗಳಿಂದ ದೂರವಾಗಿ ಓಟ, ಜಿಮ್‌, ಯೋಗ, ಧ್ಯಾನ ಸೇರಿ ವಿವಿಧ ರೀತಿಯ ದೈಹಿಕ ಚಟುವಟಿಕೆಗಳಲ್ಲಿ ಯುವಜನರನ್ನು ತೊಡಗಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಜಿಲ್ಲೆಯಾದ್ಯಂತ 2 ಹಂತದಲ್ಲಿ ಸ್ಪರ್ಧೆ ನಡೆಸಿ ತಲಾ 25 ಯುವಕ, ಯುವತಿಯರು ಸೇರಿ 50 ಮಂದಿಯನ್ನು ಆಯ್ಕೆ ಮಾಡಿ ಅವರನ್ನು ರಾಯಭಾರಿಗಳೆಂದು ಘೋಷಣೆ ಮಾಡಲಾಗುತ್ತದೆ. ಅವರ ಮೂಲಕ ತಜ್ಞರಿಂದ ಉಪನ್ಯಾಸ, ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ, ಜಾಥಾ, ಮ್ಯಾರಥಾನ್‌ ಆಯೋಜಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದ್ದಾರೆ.

ADVERTISEMENT

ಯುವಜನರಿಂದ ಯುವಜನರಿಗಾಗಿ ನಡೆಯುವ ಈ ಅಭಿಯಾನಕ್ಕೆ ಪೊಲೀಸ್‌ ಠಾಣೆ ಹಾಗೂ ಜಿಲ್ಲಾ ಮಟ್ಟದಿಂದ ನಾಮನಿರ್ದೇಶನಕ್ಕೆ ಆಹ್ವಾನ ನೀಡಲಾಗಿದೆ. ನಾಮ ನಿರ್ದೇಶನ ಪ್ರಕ್ರಿಯೆ ಅ. 5ರಿಂದ ಆರಂಭವಾಗಿಲಿದೆ. 15– 35 ವರ್ಷ ವಯೋಮಿತಿಯ ಯುವಕ– ಯುವತಿಯರು ಅಭಿಯಾನದ ಭಾಗವಾಗಲು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಅ. 12ರಂದು ಮೊದಲ ಹಂತದ ಸ್ಪರ್ಧೆ, ಅ. 26ರಂದು ಅಂತಿಮ ಹಂತದ ಸ್ಪರ್ಧೆಗಳು ನಡೆಯಲಿವೆ.

ಸ್ಪರ್ಧೆಗಳು ಹೀಗಿವೆ: ಮೊದಲ ಹಂತದಲ್ಲಿ ಯುವಕ– ಯುವತಿಯರಿಗೆ ಪ್ರತ್ಯೇಕವಾಗಿ ಅರ್ಹತಾ ಸುತ್ತಿನ ಸ್ಪರ್ಧೆಗಳು ನಡೆಯಲಿವೆ. ಯುವಕರಿಗೆ 20 ನಿಮಿಷಕ್ಕೆ 2.5 ಕಿ.ಮೀ ಓಟ, 15 ನಿಮಿಷ ಪುಷ್‌ ಅಪ್ಸ್‌, 15 ನಿಮಿಷ ಅಬ್ಡಮನ್‌ ಕ್ರಂಚಸ್‌, ಪುಲ್‌ ಅಪ್ಸ್‌ ಸ್ಪರ್ಧೆಗಳು ನಡೆಯಲಿವೆ. ಯುವತಿಯರಿಗೆ 20 ನಿಮಿಷಕ್ಕೆ 2 ಕಿ.ಮೀ ಓಟ, 10 ನಿಮಿಷ ಪುಷ್‌ ಅಪ್ಸ್‌, 10 ನಿಮಿಷ ಅಬ್ಡಮನ್‌ ಕ್ರಂಚಸ್‌, ಪುಲ್‌ ಅಪ್ಸ್‌ ಸ್ಪರ್ಧೆಗಳು ನಡೆಯಲಿವೆ.

ಅರ್ಹತಾ ಸುತ್ತಿನಲ್ಲಿ ಜಿಲ್ಲೆಯ ಪ್ರತಿ ಠಾಣೆಯಿಂದ 15 ಯುವಕರು, 10 ಯುವತಿಯರ ಆಯ್ಕೆ ನಡೆಯಲಿದೆ. ನಂತರ ಅ. 26ರಂದು ನಡೆಯಲಿರುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಣಿ ನಡೆಯಲಿದೆ. ಅಂತಿಮ ಹಂತದ ಸ್ಪರ್ಧೆಯಲ್ಲಿ ಯುವಕರು 25, 30, 35, 40 ನಿಮಿಷದಲ್ಲಿ ವಿವಿಧ ಹಂತಗಳಲ್ಲಿ 5 ಕಿ.ಮೀ ಓಡಬೇಕಿದೆ. ಯುವತಿಯರು 25– 40 ನಿಮಿಷಕ್ಕೆ 4 ಕಿ.ಮೀ ಓಡಬೇಕಿದೆ. ಪ್ರತಿ ಹಂತಕ್ಕೂ ಪ್ರತ್ಯೇಕ ಅಂಕ ನಿಗದಿ ಮಾಡಲಾಗಿದೆ. ಜೊತೆಗೆ ಪುಷ್‌ ಅಪ್ಸ್‌, ಅಬ್ಡಮನ್‌ ಕ್ರಂಚಸ್‌, ಪುಲ್‌ ಅಪ್ಸ್‌ ಸ್ಪರ್ಧೆಗಳೂ ನಡೆಯಲಿವೆ.

ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ತಲಾ 25 ಯುವಕ– ಯುವತಿಯರನ್ನು ಮಾದಕ ವಸ್ತುಗಳ ನಿಯಂತ್ರಣ ರಾಯಭಾರಿಗಳೆಂದು ನಾಮಕರಣ ಮಾಡಲಾಗುತ್ತದೆ. ನಾಮಕರಣ ಮಾತ್ರವಲ್ಲದೇ ಅವರಿಗೆ ಪ್ರಮಾಣ ಪತ್ರ, ಪದಕ ಹಾಗೂ ₹ 2,500 ನಗದು ಬಹುಮಾನವನ್ನೂ ನೀಡಿ ಗೌರವಿಸಲಾಗುತ್ತದೆ. ಇಷ್ಟಕ್ಕೆ ಅಭಿಯಾನ ನಿಲ್ಲದೇ ವರ್ಷಪೂರ್ತಿ ವಿವಿಧ ಚಟುವಟಿಕೆಗಳು ನಡೆಯಲಿದ್ದು, ರಾಯಭಾರಿಗಳು ಜಿಲ್ಲೆಯಾದ್ಯಂತ ಶಾಲೆ– ಕಾಲೇಜುಗಳಲ್ಲಿ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಕುರಿತು ವಿವಿಧ ಚಟುವಟಿಕೆ ನಡೆಸಲಿದ್ದಾರೆ.

ಯುವಜನರನ್ನು ವ್ಯಸನದಿಂದ ರಕ್ಷಿಸುವುದು ಅಭಿಯಾನದ ಉದ್ದೇಶ. 50 ಜನ ರಾಯಭಾರಿಗಳು ಜಾಗೃತಿ ಮೂಡಿಸಲಿದ್ದಾರೆ. ಅವರು ಇಷ್ಟಪಟ್ಟರೆ ವರ್ಷದ ನಂತರವೂ ಮುಂದುವರಿಸಲಾಗುವುದು.
– ರಂಜಿತ್‌ ಕುಮಾರ್‌ ಬಂಡಾರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪೊಲೀಸ್‌ ಠಾಣೆ ಸಂಪರ್ಕಿಸಿ...

‘ನಶೆ ಮುಕ್ತ ಚಿತ್ರದುರ್ಗ; ಸದೃಢ ಚಿತ್ರದುರ್ಗ’ ಅಭಿಯಾನದಲ್ಲಿ ಯುವಕರು ಪಾಲ್ಗೊಳ್ಳಲು ವ್ಯಾಪಕ ಪ್ರಚಾರ ನಡೆಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳಿಗೆ ಸೂಚಿಸಿದ್ದಾರೆ. ಈ ಕುರಿತು ಪ್ರಚಾರ ಪತ್ರವನ್ನೂ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅವುಗಳನ್ನು ಅಂಟಿಸುವಂತೆ ಸೂಚಿಸಲಾಗಿದೆ. ಪ್ರಚಾರ ಪತ್ರದಲ್ಲಿ ಕ್ಯು–ಆರ್‌ ಕೋಡ್‌ ಹಾಕಲಾಗಿದ್ದು ಯುವಜನರು ಅಲ್ಲಿ ಸ್ಕ್ಯಾನ್‌ ಮಾಡುವ ಮೂಲಕ ಸ್ಪರ್ಧೆಗಳಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಬಹುದು. ಅದು ಸಾಧ್ಯವಾಗದಿದ್ದರೆ ಸ್ಥಳೀಯ ಪೊಲೀಸ್‌ ಠಾಣೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ನೋಂದಣಿ ಮಾಡಿಕೊಳ್ಳಲು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.