ಚಿತ್ರದುರ್ಗ: ‘ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಅಲ್ಲಪ್ರಭು ಪಾಟೀಲ್ ಆಪ್ತ, ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಲಿಂಗರಾಜ್ ಕಣ್ಣಿ ಅವರು ಡ್ರಗ್ಸ್ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದಾರೆ. ಇದರ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಇರುವ ಅನುಮಾನವಿದ್ದು, ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
‘ಶಾಲೆ– ಕಾಲೇಜುಗಳಲ್ಲಿ, ಬೀಡಾ ಅಂಗಡಿಗಳಲ್ಲಿ, ಪಬ್‍ಗಳಲ್ಲಿ ವ್ಯಾಪಕವಾಗಿ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ. ಮಲ್ಲಿನಾಥ್ ಸೊಂತ್ ಎಂಬುವವರ ಮಗನೂ ಡ್ರಗ್ಸ್ ಸಾಗಾಟದಲ್ಲಿ ಭಾಗಿಯಾಗಿದ್ದು, ಅವನೂ ಕಾಂಗ್ರೆಸ್ ಕಾರ್ಯಕರ್ತ. ರಿಪಬ್ಲಿಕ್ ಆಫ್ ಕಲಬುರ್ಗಿಯಲ್ಲಿ ಪೊಲೀಸ್ ರಕ್ಷಣೆಯ ಕಣ್ಗಾವಲಿನಲ್ಲೇ ಡ್ರಗ್ಸ್ ಅವ್ಯವಹಾರ ನಡೆಯುತ್ತಿದೆ. ಡ್ರಗ್ಸ್ ಮಾಫಿಯಾದ ರೂವಾರಿ ಪ್ರಿಯಾಂಕ್ ಖರ್ಗೆ ಆಗಿರುವ ಸಾಧ್ಯತೆ ಇದೆ’ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
‘ಪ್ರಿಯಾಂಕ್ ಖರ್ಗೆ ಅವರು ತಮ್ಮ ಇಲಾಖೆಗಳಲ್ಲಿ ಉತ್ತಮ ಕೆಲಸ ಮಾಡುವುದನ್ನು ಬಿಟ್ಟು ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಮಾತನಾಡಿ ಪ್ರಚಾರ ಪಡೆಯುತ್ತಿದ್ದಾರೆ. ಕುಡಚಿ ಮತಕ್ಷೇತ್ರದ ಒಂದು ಗ್ರಾಮ ಪಂಚಾಯಿತಿಯಲ್ಲಿ ₹ 17 ಕೋಟಿ ಅವ್ಯವಹಾರ ಆಗಿದೆ. ವಿಜಯಪುರದ ನರೇಗಾ ಕಾಮಗಾರಿಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ನಿಲ್ಲಿಸಿ ಬಿಲ್ ಪಡೆದಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಪುರುಷರಿಗೆ ಸೀರೆ ತೊಡಿಸಿ ನರೇಗಾ ಬಿಲ್ ತೆಗೆದುಕೊಳ್ಳುತ್ತಾರೆ. ಇಷ್ಟೆಲ್ಲಾ ಅವ್ಯವಹಾರ ನಡೆಯುತ್ತಿದ್ದರೂ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ಮಾತನಾಡುತ್ತಲೇ ಇರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.