ADVERTISEMENT

ದುಮ್ಮಿ ಗೊಲ್ಲರಹಟ್ಟಿ ಜುಂಜಪ್ಪ ಜಾತ್ರೆ ನಾಳೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:54 IST
Last Updated 5 ಡಿಸೆಂಬರ್ 2022, 4:54 IST
ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯಲ್ಲಿರುವ ಜುಂಜಪ್ಪ ಸ್ವಾಮಿ ದೇವಾಲಯ
ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯಲ್ಲಿರುವ ಜುಂಜಪ್ಪ ಸ್ವಾಮಿ ದೇವಾಲಯ   

ಹೊಳಲ್ಕೆರೆ: ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯ ಐತಿಹಾಸಿಕ ಜುಂಜಪ್ಪ ಸ್ವಾಮಿಯ ಜಾತ್ರೆ ಡಿಸೆಂಬರ್‌ 6ರಂದು ನಡೆಯಲಿದೆ.

ಜಾತ್ರೆಯ ಅಂಗವಾಗಿ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳ ಸಾವಿರಾರು ಜನರು ಭಾಗವಹಿಸುತ್ತಾರೆ.

ಜಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿಯ ಕಲೆಗಳು ಅನಾವರಣಗೊಳ್ಳಲಿವೆ. ಪಲ್ಲಕ್ಕಿ ಉತ್ಸವ, ಕದಳಿ ಪೂಜೆ, ಎಲೆ ಪೂಜೆ, ಹಾಲುಕಂಬಿ, ಹರಗಿನ ಮುದ್ರೆ, ಕಂಚಿನ ಕಡಗಗಳಿಗೆ ವಿಶೇಷ ಪೂಜೆಗಳು ನಡೆಯಲಿವೆ. ಮಹಿಳೆಯರ ವೀರಗಾಸೆ, ಕೀಲು ಕುದುರೆ, ಪೂಜಾಕುಣಿತ, ಕರಡಿ ಮಜಲು, ನಂದಿ ಧ್ವಜ ಕುಣಿತ, ಸೋಬಾನೆ ಪದ, ಮಂಡ್ಯದ ಪೂಜಾ ಕುಣಿತ, ಜನಪದ ಹಾಡು, ಲಂಬಾಣಿ ನೃತ್ಯ ಮತ್ತಿತರ ಕಲಾಪ್ರಕಾರಗಳು ಮೇಳೈಸಲಿವೆ.

ADVERTISEMENT

ಹರಕೆ ಹೊತ್ತ ಭಕ್ತರು ದೂರದ ಊರುಗಳಿಂದ ಮುಡಿಪು, ಮೀಸಲು ಕಟ್ಟಿಕೊಂಡು ಕಾಲ್ನಡಿಗೆಯಲ್ಲಿಯೂ ಬರುತ್ತಾರೆ. ಹಾವು, ಚೇಳು ಕಡಿದವರು ದೂರದ ಊರುಗಳಿಂದ ಮುಡುಪು ಕಟ್ಟಿಕೊಂಡು ದೇವಾಲಯಕ್ಕೆ ಬರುತ್ತಾರೆ.

ವರ್ಷದ ಎಲ್ಲಾ ಕಾಲದಲ್ಲೂ ಜನ ಇಲ್ಲಿಗೆ ಬರುವುದರಿಂದ ವಿಶ್ರಾಂತಿ ಗೃಹದ ಅಗತ್ಯ ಇದೆ. ಜಾತ್ರೆಗೆ ಸಾವಿರಾರು ಭಕ್ತರು ಬರುವುದರಿಂದ ರಸ್ತೆ, ಕುಡಿಯುವ ನೀರು, ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಜಾತ್ರೆಯ ದಿನ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ದಾವಣಗೆರೆ, ಚನ್ನಗಿರಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮದಲ್ಲಿ ಜುಂಜಪ್ಪ ಸಾಂಸ್ಕೃತಿಕ ಭವನ ನಿರ್ಮಿಸಬೇಕು ಎಂದು ಗ್ರಾಮದ ಮುಖಂಡ ಎ. ಚಿತ್ತಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.