ADVERTISEMENT

ಹೊಸದುರ್ಗ:17ಕ್ಕೆ ದುರ್ಗಾಪರಮೇಶ್ವರಿ ಮೂರ್ತಿ ಪ್ರತಿಷ್ಠಾಪನೆ

ತೃತೀಯ ವರ್ಷದ ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 3:25 IST
Last Updated 8 ಅಕ್ಟೋಬರ್ 2020, 3:25 IST
ಹೊಸದುರ್ಗದಲ್ಲಿ ದುರ್ಗಾಪರಮೇಶ್ವರಿ ಪ್ರತಿಷ್ಠಾಪಿಸಲಿರುವ ದುರ್ಗಾದೇವಿ ಮಂಟಪ
ಹೊಸದುರ್ಗದಲ್ಲಿ ದುರ್ಗಾಪರಮೇಶ್ವರಿ ಪ್ರತಿಷ್ಠಾಪಿಸಲಿರುವ ದುರ್ಗಾದೇವಿ ಮಂಟಪ   

ಹೊಸದುರ್ಗ: ಇಲ್ಲಿನ ಅಶೋಕ ರಂಗಮಂದಿರದ ದುರ್ಗಾದೇವಿ ಮಂಟಪದಲ್ಲಿ ಅ. 17ರಿಂದ 26ರವರೆಗೆ ತೃತೀಯ ವರ್ಷದ ದುರ್ಗಾಪರಮೇಶ್ವರಿ ಶರನ್ನವರಾತ್ರಿ ದಸರಾ ಮಹೋತ್ಸವ ನಡೆಯಲಿದೆ.

‘ದುರ್ಗಾಪರಮೇಶ್ವರಿ ಮೂರ್ತಿ ಯನ್ನು ಒಮ್ಮೆ ಪ್ರತಿಷ್ಠಾಪಿಸಿದರೆ 9 ವರ್ಷ ನಿರಂತರವಾಗಿ ಪ್ರತಿಷ್ಠಾಪಿಸಬೇಕು. 2003ರಿಂದ 2011ರವರೆಗೆ ಪ್ರತಿಷ್ಠಾಪಿಸಲಾಯಿತು. ಆಗ ಸಕಾಲಕ್ಕೆ ಮಳೆ, ಬೆಳೆ ತಾಲ್ಲೂಕಿನಲ್ಲಿ ಉತ್ತಮವಾಗಿತ್ತು. ನಂತರದ 5 ವರ್ಷ ಸಕಾಲಕ್ಕೆ ಮಳೆ, ಬೆಳೆ ಸರಿಯಾಗಿ ಆಗಲಿಲ್ಲ. ನೀರಿನ ಅಭಾವವೂ ಎದುರಾಗಿತ್ತು. ಹಾಗಾಗಿ ಮತ್ತೆ 2018ರಿಂದ ದುರ್ಗಾಪರಮೇಶ್ವರಿ ಪ್ರತಿಷ್ಠಾಪಿಸಲಾಗುತ್ತಿದೆ. ಎರಡು ವರ್ಷಗಳಿಂದ ಉತ್ತಮವಾಗಿ ಬರುತ್ತಿದೆ’ ಎಂದು ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಟಿ.ಮಂಜುನಾಥ್‌ ತಿಳಿಸಿದರು.

‘ವಿಜಯದಶಮಿ ಇನ್ನೂ 20 ದಿನ ಇರುವ ಮೊದಲೇ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕೊರೊನಾ ಮುಕ್ತಿಗೆ ಹಾಗೂ ಸಮೃದ್ಧ ಮಳೆ, ಬೆಳೆಗೆ ಪ್ರಾರ್ಥಿಸಿ ಮೈಸೂರು ದಸರಾ ಮಾದರಿಯಲ್ಲಿಯೇ ಸ್ಥಳೀಯವಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ದುರ್ಗಾಪರಮೇಶ್ವರಿ ಮೂರ್ತಿಯನ್ನು ಸತತ 3ನೇ ವರ್ಷವೂ ಪ್ರತಿಷ್ಠಾಪಿಸುತ್ತಿರುವುದು ತಾಲ್ಲೂಕಿನ ಜನರಲ್ಲಿ ಸಂತಸ ತಂದಿದೆ’ ಎಂದು ತಿಳಿಸಿದರು.

ADVERTISEMENT

ದಸರಾ ಮಹೋತ್ಸವದ ಯಶಸ್ಸಿಗೆ ಈಗಾಗಲೇ ಸಿದ್ಧತೆ ಕಾರ್ಯ ಆರಂಭವಾಗಿದೆ. ಮೈಸೂರು ದಸರಾ ಮಾದರಿಯಲ್ಲಿ ಮಹಾಮಂಟಪ ನಿರ್ಮಾಣ, ದುರ್ಗಾಪರಮೇಶ್ವರಿದೇವಿ ಮೂರ್ತಿ ತಯಾರಿಸಲಾಗುವುದು. 10 ದಿನ ನಡೆಯುವ ಕಾರ್ಯಕ್ರಮ ವೀಕ್ಷಿಸಲು ಕುರ್ಚಿ ವ್ಯವಸ್ಥೆ, ಮಂಟಪದ ಹೊರ ಭಾಗದಲ್ಲಿ ಜನರು ನಿಲ್ಲಲು ಸ್ಥಳಾವಕಾಶ ಹಾಗೂ ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತದೆ.

ಅ. 17ರ ಬೆಳಿಗ್ಗೆ 11ಕ್ಕೆ ದುರ್ಗಾಪರಮೇಶ್ವರಿ ಮೂರ್ತಿ ಪ್ರತಿಷ್ಠಾಪನೆ, 20ರಂದು ವಿಶೇಷ ಸೇವೆ ದೀಪೋತ್ಸವ, 24ರ ದುರ್ಗಾಷ್ಟಮಿಯಂದು ಬೆಳಿಗ್ಗೆ 8.30ರಿಂದ ಕುಮಾರಿ ಪೂಜೆ, ದುರ್ಗಾಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ. ಅ.17ರಿಂದ 26ರವರೆಗೂ ನಿತ್ಯ ವಿಶೇಷ ಪೂಜೆ, ಸ್ಥಳೀಯ ಕಲಾವಿದರಿಂದ ಭಜನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಲಿವೆ ಎಂದು ದುರ್ಗಾ ಸೇವಾ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.