
ಚಿತ್ರದುರ್ಗ: ‘ಪ್ರಸ್ತುತ ನಾವು ಕತ್ತಿ ಹಿಡಿದು ಯುದ್ಧ ಮಾಡುವ ಕಾಲದಲ್ಲಿಲ್ಲ. ಇಂದಿನ ಯುಗದಲ್ಲಿ ಶಿಕ್ಷಣವೇ ನಮಗೆ ದೊಡ್ಡ ಆಯುಧವಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಮಾತನಾಡಿದರು.
‘ಸರ್ಕಾರವು ಮರಾಠ ಸಮುದಾಯಕ್ಕೆ 3ಎ ಮೀಸಲಾತಿ ಕಲ್ಪಿಸಿದೆ. ಈ ಸೌಲಭ್ಯ ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯುವ ಮೂಲಕ ಸರ್ಕಾರಿ ಉದ್ಯೋಗಗ ಪಡೆಯಬೇಕು’ ಎಂದರು.
‘ಮರಾಠ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಇದರ ಮೂಲಕ ದೊರೆಯುವ ಸಾಲ ಸೌಲಭ್ಯ ಮತ್ತು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕವಾಗಿ ಸದೃಢರಾಗಬೇಕು’ ಎಂದು ತಿಳಿಸಿದರು.
‘ಶಿವಾಜಿ ಮಹಾರಾಜರ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜಯಂತಿ ಆಚರಣೆಗಳಿಗೆ ಅರ್ಥ ಬರುತ್ತದೆ. ದೇಶದ ಅಸ್ಮಿತೆ ಮತ್ತು ಶೌರ್ಯದ ಸಂಕೇತ. ಭಾರತೀಯ ಇತಿಹಾಸದ ಧೃವತಾರೆ ಶಿವಾಜಿ’ ಎಂದು ಬಣ್ಣಿಸಿದರು.
‘ಶಿವಾಜಿ ಮಹಾರಾಜರು ಸರ್ವರಿಗೂ ಪ್ರೇರಣೆಯಾಗಿದ್ದಾರೆ. ನಗರದಲ್ಲಿರುವ ಮರಾಠ ಸಮಾಜದವರು ಪೂರ್ವಜರಿಂದ ಬಳುವಳಿಯಾಗಿ ಬಂದ ಮರಾಠಿ ಭಾಷೆ ಹಾಗೂ ಸಂಪ್ರದಾಯಗಳನ್ನು ನಿರ್ಲಕ್ಷಿಸದೆ, ಮಕ್ಕಳಿಗೆ ಮಾತೃಭಾಷೆ ಹಾಗೂ ಸಂಪ್ರದಾಯಗಳನ್ನು ಕಲಿಸಬೇಕು’ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ತಿಳಿಸಿದರು.
‘ಶಿವಾಜಿಯವರ ತಂದೆ ಶಹಾಜಿ ಬೋಸ್ಲೇ ಅವರ ಸಮಾಧಿ ಚನ್ನಗಿರಿಯ ಬಳಿಯಿದೆ. ಚಿತ್ರದುರ್ಗದ ಹೆಸರಾಂತ ಪೈಲ್ವಾನ್ ನಂಜಪ್ಪನವರು ಸಹ ಮರಾಠ ಸಮುದಾಯಕ್ಕೆ ಸೇರಿದವರು. ಈ ಇಬ್ಬರ ಸ್ಮಾರಕ ಸ್ಥಳವನ್ನು ಮರಾಠ ಸಮುದಾಯದವರು ಅಭಿವೃದ್ಧಿ ಪಡಿಸಬೇಕು’ ಎಂದರು.
ಬಾಲಕರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಿ. ತಿಪ್ಪೇಸ್ವಾಮಿ ಉಪನ್ಯಾಸ ನೀಡಿದರು. ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಮರಾಠ ವಿದ್ಯಾವರ್ಧಕ ಸಂಘದ ಜಿಲ್ಲಾ ಘಟದ ಅಧ್ಯಕ್ಷ ಸುರೇಶ್ ರಾವ್ ಜಾದವ್, ಕಾರ್ಯದರ್ಶಿ ಜೆ.ಗೋಪಾಲರಾವ್ ಜಾದವ್ ಮತ್ತು ಜೀಜಾಮಾತ ಮಹಿಳಾ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷೆ ಜಿ.ಉಷಾಬಾಯಿ ಜಾದವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.