ADVERTISEMENT

ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸಿ: ನಾಗಭೂಷಣ್

ಆನ್‌ಲೈನ್ ಮೂಲಕ ಪೋಷಕರ ಸಭೆ ನಡೆಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮೇ 2021, 5:10 IST
Last Updated 4 ಮೇ 2021, 5:10 IST

ಹಿರಿಯೂರು: ತಾಲ್ಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ವಸತಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಆನ್‌ಲೈನ್ ಮೂಲಕ ಪೋಷಕರ ಸಭೆ ನಡೆಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಸೂಚಿಸಿದ್ದಾರೆ.

ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸೋಮವಾರ ಝೂಮ್ ಆ್ಯಪ್ ಮೂಲಕ ಹಮ್ಮಿಕೊಂಡಿದ್ದ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ಹೊರತಂದಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ನೀಡಿ ಅವುಗಳಿಗೆ ಉತ್ತರ ಬರೆಯಿಸಬೇಕು. ಗೂಗಲ್ ಫಾರಂ ಬಳಸಿ ರಸಪ್ರಶ್ನೆ ಕಾರ್ಯಕ್ರಮ ನಡೆಸಬೇಕು. ಪ್ರತಿ ವಿಷಯದ ಕ್ಲಿಷ್ಟಕರ ವಿಷಯಗಳಿಗೆ ಸಂಬಂಧಿಸಿದಂತೆ ವಿಡಿಯೊ ಪಾಠಗಳನ್ನು ತಯಾರಿಸಿ ವಾಟ್ಸ್‌ಆ್ಯಪ್‌ ಮತ್ತು ಇತರೆ ಆ್ಯಪ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಿ, ಗೃಹ ಪಾಠಗಳನ್ನು ಮುಗಿಸಿರುವ ಬಗ್ಗೆ ಫೋಟೊ ಸಹಿತ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಅವರು ಮುಖ್ಯ ಶಿಕ್ಷಕರಿಗೆ ತಿಳಿಸಿದರು.

ADVERTISEMENT

‘ಮೇ 5ರಂದು ಡಿಡಿಪಿಐ ಅವರು ಆನ್‌ಲೈನ್‌ ಮೂಲಕ ತಾಲ್ಲೂಕಿನ ಮುಖ್ಯ ಶಿಕ್ಷಕರ ಸಭೆ ನಡೆಸಲಿದ್ದು, ಆ ವೇಳೆಗೆ ಇಲಾಖೆಯ ಮಾರ್ಗದರ್ಶನದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಕೋವಿಡ್ ಸುರಕ್ಷತೆ ಬಗೆಗೂ ಜಾಗೃತಿ ಮೂಡಿಸಬೇಕು’ ಎಂದು ನಾಗಭೂಷಣ್ ಅವರು ಹೇಳಿದರು.

‘10ನೇ ತರಗತಿಗೆ ಸಂಬಂಧಿಸಿದಂತೆ ಎಲ್ಲಾ ವಿಷಯಗಳ ಪಾಠಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು. ಆನ್‌ಲೈನ್ ಮೂಲಕ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಿ, ಪಾಠಗಳ ಪುನರಾವರ್ತನೆ ಮಾಡಬೇಕು. ವಿಷಯವಾರು ಶಿಕ್ಷಕರು ತಮ್ಮ ಬೋಧನಾ ವಿಷಯದಲ್ಲಿ ಮಕ್ಕಳ ಮೇಲ್ವಿಚಾರಣೆ ಮಾಡುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರು ನಿಗಾ ಇಡಬೇಕು’ ಎಂದು ಅವರು ಸೂಚಿಸಿದರು.

ತಾಲ್ಲೂಕಿನ 30 ಸರ್ಕಾರಿ, 24 ಅನುದಾನಿತ, 17 ಅನುದಾನರಹಿತ ಹಾಗೂ 7 ವಸತಿ ಶಾಲೆಗಳ 78 ಮುಖ್ಯ
ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ತಿಪ್ಪೇರುದ್ರಪ್ಪ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ನಾಗರಾಜಾಚಾರಿ, ತಾಲ್ಲೂಕಿನ ನಾಲ್ಕು ಹೋಬಳಿಗಳ ಇ.ಸಿ.ಒಗಳಾದ ಗಿರೀಶ್, ಶಶಿಧರ್, ಲೋಹಿತ್ ಮತ್ತು ಹರೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.