ADVERTISEMENT

ಅವೈಜ್ಞಾನಿಕ ಆದೇಶ ಹಿಂಪಡೆಯಲು ಆಗ್ರಹ: ಉಪನ್ಯಾಸಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:35 IST
Last Updated 8 ನವೆಂಬರ್ 2025, 6:35 IST
ಚಿತ್ರದುರ್ಗದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸಿದ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ
ಚಿತ್ರದುರ್ಗದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸಿದ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ   

ಚಿತ್ರದುರ್ಗ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕಾಲೇಜುಗಳಲ್ಲಿ ಅವೈಜ್ಞಾನಿಕವಾಗಿ ಹೊರಡಿಸಿರುವ ಮತ್ತು ಹೊರಡಿಸುತ್ತಿರುವ ಆದೇಶಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ಶುಕ್ರವಾರ ಮೌನ ಪ್ರತಿಭಟನೆ ನಡೆಸಿತು.

ನಗರದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ‌ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದರು. ಶಾಲಾ ಶಿಕ್ಷಣ ಇಲಾಖೆಯಿಂದ ಕಾಲೇಜುಗಳಿಗೆ ಪೂರಕವಲ್ಲದ ಆದೇಶಗಳು ಬರುತ್ತಿರುವುದು ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದೇಶಗಳು ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳ ಆತ್ಮಸ್ಥೆರ್ಯವನ್ನು ಕುಗ್ಗಿಸುತ್ತಿವೆ. ಇದರ ಪರಿಣಾಮವಾಗಿ ಪದವಿ ಪೂರ್ವ ಕಾಲೇಜುಗಳ ಭವಿಷ್ಯ ಡೋಲಾಯಮಾನ ಸ್ಥಿತಿಗೆ ತಲುಪುತ್ತಿವೆ. ಪರೀಕ್ಷಾ ಮಂಡಳಿಯನ್ನು ಪದವಿಪೂರ್ವ ಇಲಾಖೆಯಿಂದ ಪ್ರತ್ಯೇಕಿಸಿದ ನಂತರ ದೇಶದಲ್ಲಿ ಮಾದರಿಯಾಗಿದ್ದ ಪದವಿ ಪೂರ್ವ ಶಿಕ್ಷಣ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಇತ್ತೀಚೆಗೆ ಪದವಿಪೂರ್ವ ಶಿಕ್ಷಣಕ್ಕೆ ಸಂಬಂಧವಿಲ್ಲದ ಡಯಟ್‌ನ ಪ್ರಶಿಕ್ಷಣಾರ್ಥಿಗಳನ್ನು ಪದವಿಪೂರ್ವ ಕಾಲೇಜುಗಳ ಸ್ಥಿತಿಗತಿಗಳ ದತ್ತಾಂಶ ಕ್ರೂಢೀಕರಿಸುವ ನೆಪದಲ್ಲಿ ಕಾಲೇಜುಗಳನ್ನು ಪರಿಶೀಲನೆಗೊಳಪಡಿಸಲು ಹೊರಟಿರುವುದು ಪದವಿಪೂರ್ವ ಶಿಕ್ಷಣದ ದುರಂತವೇ ಸರಿ. ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಹಾಗೂ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಕೂಡಲೇ ಜಂಟಿ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

20240–25ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಹಾಗೂ ಸಂಭಾವನೆ ಬಾಕಿ ಇರುವ ₹ 13.5 ಕೋಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಿ ವಿತರಿಸಬೇಕು. ಖಾಲಿ ಇರುವ ಉಪನ್ಯಾಸಕರ ಹುದ್ದೆಗಳು ಮತ್ತು ಪ್ರಾಂಶುಪಾಲರ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು. ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಉಪ ನಿರ್ದೇಶಕರ ಕಚೇರಿಯನ್ನು ಬಲವರ್ಧನೆಗೊಳಿಸಲು ಇಬ್ಬರು ಹಿರಿಯ ಪ್ರಾಂಶುಪಾಲರನ್ನು ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ನಿಯೋಜಿಸಿ, ಆ ಮೂಲಕ ಇಲಾಖೆಯ ಪರೀಕ್ಷೆ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತೇಜಿಸಬೇಕು. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿರುವ ಪರೀಕ್ಷಾ ವಿಭಾಗವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಈ ಹಿಂದೆ ಇದ್ದಂತೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್. ಮಲ್ಲೇಶ್ , ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಂ.ಜಿ. ರಾಜೇಶ್, ಕಾರ್ಯದರ್ಶಿ ಎ.ಕಾಂತರಾಜು, ಖಜಾಂಚಿ ಎನ್. ಕೆಂಚವೀರಪ್ಪ, ಕೋಶಾಧ್ಯಕ್ಷ ಎಸ್.ಎ. ಖಾನ್, ಪ್ರಾಂಶುಪಾಲರಾದ ಆರ್. ಮುಸ್ತಫ, ಸಣ್ಣಪಾಲಯ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಜಿಲ್ಲಾ‌ ಘಟಕದ ಅಧ್ಯಕ್ಷ ಜಿ.ಎಸ್. ತಿಪ್ಪೇಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.