ADVERTISEMENT

ಧರ್ಮಪುರ: ಕಲಿಸೋರೇ ಗತಿಯಿಲ್ಲದಂತಾದ ಗೊಲ್ಲರಹಟ್ಟಿ ಶಾಲೆ

ವೇಣುಕಲ್ಲುಗುಡ್ಡ: 50 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕಿ!

ವಿ.ವೀರಣ್ಣ
Published 28 ಜೂನ್ 2022, 4:16 IST
Last Updated 28 ಜೂನ್ 2022, 4:16 IST
ಧರ್ಮಪುರ ಸಮೀಪದ ವೇಣುಕಲ್ಲುಗುಡ್ಡ ಗೊಲ್ಲರಹಟ್ಟಿಯಲ್ಲಿರುವ ಆಶ್ರಮ ಶಾಲೆ (ಎಡಚಿತ್ರ). ಆಶ್ರಮ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು.
ಧರ್ಮಪುರ ಸಮೀಪದ ವೇಣುಕಲ್ಲುಗುಡ್ಡ ಗೊಲ್ಲರಹಟ್ಟಿಯಲ್ಲಿರುವ ಆಶ್ರಮ ಶಾಲೆ (ಎಡಚಿತ್ರ). ಆಶ್ರಮ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು.   

ಧರ್ಮಪುರ: ಈ ಶಾಲೆಗೆ ಸುಸಜ್ಜಿತ ಕಟ್ಟಡವೂ, ವಿಶಾಲವಾದ ಆಟದ ಮೈದಾನವೂ, ಮೈದಾನದಲ್ಲಿ ಮಕ್ಕಳು ಆಟವಾಡಲು ವಿವಿಧ ಪರಿಕರಗಳೂ, ಸುತ್ತಲೂ ಕಾಂಪೌಂಡೂ ಇದೆ. ಆದರೆ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅಗತ್ಯ ಸಂಖ್ಯೆಯ ಶಿಕ್ಷಕರೇ ಇಲ್ಲ.

ಹಿರಿಯೂರು ತಾಲ್ಲೂಕಿನ ವೇಣುಕಲ್ಲುಗುಡ್ಡದ ಗೊಲ್ಲರ ಹಟ್ಟಿಶಾಲೆಯಸ್ಥಿತಿ ಇದು. ಚಿತ್ರದುರ್ಗ ಜಿಲ್ಲೆಗೆ ಮಂಜೂರಾಗಿದ್ದ ಎರಡು ಆಶ್ರಮ ಶಾಲೆಗಳ ಪೈಕಿ ಈಶಾಲೆಯೂಒಂದು.ಹೊಸದುರ್ಗ ತಾಲ್ಲೂಕಿಗೆ ಮಂಜೂರಾಗಿದ್ದ ಇನ್ನೊಂದು ಆಶ್ರಮ ಶಾಲೆ ಈಗಾಗಲೇ ಮುಚ್ಚಿದೆ.

ಗೊಲ್ಲರಹಟ್ಟಿಯ ಆಶ್ರಮ ಶಾಲೆಯಲ್ಲಿ 12 ವರ್ಷಗಳಿಂದ ಒಬ್ಬರೇ ಶಿಕ್ಷಕಿ ಇದ್ದು, ಅವರೂ ಹೊರಗುತ್ತಿಗೆ ಅಡಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

‘ಈ ಹಿಂದೆ ನೇಮಕಗೊಂಡಿದ್ದ ಶಿಕ್ಷಕ ನಿಲಯ ಮೇಲ್ವಿಚಾರಕರಾಗಿ ಬಡ್ತಿ ಹೊಂದಿದ್ದು, ಅವರ ಹುದ್ದೆ ಖಾಲಿ ಇದೆ. ಸ್ಥಳಿಯರೇ ಆದ ಶಿಕ್ಷಕಿಯೊಬ್ಬರು 12 ವರ್ಷಗಳಿಂದ 1ರಿಂದ 5ನೇ ತರಗತಿಯವರೆಗೆ ಬೋಧನೆ ಮಾಡುತ್ತಿದ್ದಾರೆ. ಆರಂಭದಲ್ಲಿ 25 ಮಕ್ಕಳಿಗೆ ಕಲಿಕೆಗೆ ಪ್ರವೇಶವಿತ್ತು. ಈಗ 50 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೂ ಶಿಕ್ಷಕರ ಸಂಖ್ಯೆ ಮಾತ್ರ ವೃದ್ಧಿಸಿಲ್ಲ.

ವೇಣುಕಲ್ಲುಗುಡ್ಡ ಗೊಲ್ಲರಹಟ್ಟಿ, ಹೊಂಬಳದಹಟ್ಟಿ ಮತ್ತು ವೇಣುಕಲ್ಲುಗುಡ್ಡ ಗ್ರಾಮಗಳ ಸುತ್ತ ಮುತ್ತ ಅಲೆಮಾರಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಶ್ರಮ ಶಾಲೆಯ ಪ್ರವೇಶಕ್ಕೆ ಬೇಡಿಕೆ ಇದೆ. ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸಬೇಕು’ ಎಂದು ಪಾಲಕರು ಒತ್ತಾಯಿಸಿದ್ದಾರೆ.

ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಸೇರಿರುವ ಇಲ್ಲಿನ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ವಸತಿ, ಊಟ ಮತ್ತು ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಲು 1994ರಲ್ಲಿ ಎರಡು ಎಕರೆಯ ವಿಶಾಲವಾದ ಮೈದಾನದಲ್ಲಿ 10 ಸುಸಜ್ಜಿತ ಕೊಠಡಿಗಳನ್ನೊಳಗೊಂಡ ಆಶ್ರಮ ಶಾಲೆಯನ್ನು ಅಂದಿನ ಸಮಾಜ ಕಲ್ಯಾಣ ಖಾತೆ ಸಚಿವರಾಗಿದ್ದ ಎ. ಕೃಷ್ಣಪ್ಪ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಮಂಜೂರು ಮಾಡಿಸಿದ್ದರು. ಆದರೆ, ಶಿಕ್ಷಕರಿಲ್ಲದ್ದರಿಂದ ಶಾಲೆಯನ್ನು ಆರಂಭಿಸಿರುವ ಉದ್ದೇಶವೇ ಈಡೇರದಂತಾಗಿದೆ.

*

20 ವರ್ಷಗಳಿಂದ ಆಶ್ರಮ ಶಾಲೆಗೆ ಯಾವುದೇ ಅನುದಾನ ಬಂದಿಲ್ಲ. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಪ್ರವೇಶ ಮಿತಿ ಹೆಚ್ಚಿಸಿ, ಅನುದಾನ ಒದಗಿಸಲಾಗುವುದು. ಈ ಆಶ್ರಮ ಶಾಲೆಯ ಶಿಕ್ಷಕರ ಕೊರತೆಯನ್ನು ನೀಗಿಸಲಾಗುವುದು.
- ಕೆ.ಪೂರ್ಣಿಮಾ ಶ್ರೀನಿವಾಸ್, ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.