ADVERTISEMENT

ಚಿತ್ರದುರ್ಗ | ರಂಗೇರದ ಕಣ: ಕಾಣದ ಉತ್ಸಾಹ

ಲೋಕಸಭಾ ಚುನಾವಣೆ, ಕಾಂಗ್ರೆಸ್‌– ಬಿಜೆಪಿಯಲ್ಲಿ ಅಂತಿಮಗೊಳ್ಳದ ಟಿಕೆಟ್‌

ಜಿ.ಬಿ.ನಾಗರಾಜ್
Published 19 ಮಾರ್ಚ್ 2024, 5:51 IST
Last Updated 19 ಮಾರ್ಚ್ 2024, 5:51 IST
ಎಂ.ಕೆ.ತಾಜ್‌ಪೀರ್‌
ಎಂ.ಕೆ.ತಾಜ್‌ಪೀರ್‌   

ಚಿತ್ರದುರ್ಗ: ಲೋಕಸಭಾ ಚುನಾವಣೆ ಘೋಷಣೆಯಾಗಿ ನಾಲ್ಕು ದಿನ ಕಳೆದರೂ ಅಭ್ಯರ್ಥಿ ಆಯ್ಕೆಯ ಗೊಂದಲ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಮುಂದುವರಿದಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕಣ ರಂಗೇರಿಲ್ಲ. ಹುರಿಯಾಳು ಘೋಷಣೆಯಾಗದಿರುವುದರಿಂದ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿಯೂ ಉತ್ಸಾಹ ಕಾಣುತ್ತಿಲ್ಲ.

ರಾಜ್ಯದ ಕೆಲವು ಕ್ಷೇತ್ರಗಳಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಪಕ್ಕದ ತುಮಕೂರು, ದಾವಣಗೆರೆ ಸೇರಿ ಹಲವು ಕ್ಷೇತ್ರಗಳಲ್ಲಿ ಹರಿಯಾಳುಗಳು ಅಖಾಡಕ್ಕೆ ಇಳಿದಿದ್ದಾರೆ. ಆದರೆ, ಚಿತ್ರದುರ್ಗ ಕ್ಷೇತ್ರಕ್ಕೆ ಎರಡೂ ಪ್ರಮುಖ ಪಕ್ಷಗಳು ಅಭ್ಯರ್ಥಿ ಆಯ್ಕೆ ಮಾಡದಿರುವುದರಿಂದ ಚುನಾವಣಾ ಭರಾಟೆ ಗೋಚರಿಸುತ್ತಿಲ್ಲ.

ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಲಾಗಿದೆ. ಮಾರ್ಚ್‌ 28ರಿಂದ ನಾಮಪತ್ರ ಸಲ್ಲಿಕೆ ಕೂಡ ಆರಂಭವಾಗಲಿದೆ. ಆದರೆ, ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆಯನ್ನು ಮುಂದೂಡುತ್ತಲೇ ಇವೆ. ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರು ಪಕ್ಷದ ವರಿಷ್ಠರ ತೀರ್ಮಾನವನ್ನು ಎದುರು ನೋಡುತ್ತಿದ್ದಾರೆ.

ADVERTISEMENT

ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಹೊಂದಾಣಿಕೆ ಏರ್ಪಟ್ಟಿದೆ. ಸೀಟು ಹಂಚಿಕೆಯಲ್ಲಿ ಚಿತ್ರದುರ್ಗ ಮೀಸಲು ಕ್ಷೇತ್ರ ಬಿಜೆಪಿ ಪಾಲಾಗಿದೆ. ಕೇಂದ್ರ ಸಚಿವರೂ ಆಗಿದ್ದ ಬಿಜೆಪಿಯ ಎ. ನಾರಾಯಣಸ್ವಾಮಿ ಅವರಿಗೆ ಮತ್ತೆ ಅವಕಾಶ ಸಿಗುವ ನಿರೀಕ್ಷೆಗಳಿದ್ದವು. ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದಾಗಿ ಅವರು ನೀಡಿದ ಹೇಳಿಕೆಯಿಂದ ಅಭ್ಯರ್ಥಿ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿದೆ. ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಸಂಸದ ಜನಾರ್ದನಸ್ವಾಮಿ ಹಾಗೂ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ. ರಘುಚಂದನ್‌ ಹೆಸರು ಕೇಳಿಬರುತ್ತಿವೆ. ಟಿಕೆಟ್‌ ಗಿಟ್ಟಿಸಿಕೊಳ್ಳಲು ಎಲ್ಲರೂ ರಾಜ್ಯ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ರಾಜ್ಯದ ಏಳು ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದೇ ಪಟ್ಟಿಯಲ್ಲಿ ಚಿತ್ರದುರ್ಗ ಕ್ಷೇತ್ರದ ಹುರಿಯಾಳು ಪ್ರಕಟವಾಗುವ ನಿರೀಕ್ಷೆ ಗರಿಗೆದರಿತ್ತು. ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ, ಬಿ.ತಿಪ್ಪೇಸ್ವಾಮಿ, ನೇರಲಗುಂಟೆ ಎಂ.ರಾಮಪ್ಪ ಹೆಸರು ಮುಂಚೂಣಿಯಲ್ಲಿವೆ. ‘ಮೈತ್ರಿ’ ಅಭ್ಯರ್ಥಿಗೆ ಪ್ರಬಲ ಪ್ರತಿಸ್ಪರ್ಧಿಯಾಗಬಹುದಾದ ಹುರಿಯಾಳು ಆಯ್ಕೆಗೆ ಕಾಂಗ್ರೆಸ್‌ ಕಾಲಾವಕಾಶ ತೆಗೆದುಕೊಂಡಿದೆ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನಲ್ಲಿ ಚುನಾವಣಾ ಉತ್ಸಾಹ ಅಷ್ಟಾಗಿ ಕಾಣುತ್ತಿಲ್ಲ. ಪಕ್ಷದ ಅಭ್ಯರ್ಥಿ ಇಲ್ಲ ಎಂಬ ಅಸಮಾಧಾನ ಜೆಡಿಎಸ್ ತಳಹಂತದ ಕಾರ್ಯಕರ್ತರಲ್ಲಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌, ಪ್ರಸಕ್ತ ಚುನಾವಣೆಯಲ್ಲಿ ನಿಷ್ಠೆ ಬದಲಿಸಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಬದಲಾದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಪಕ್ಷದ ಕಾರ್ಯಕರ್ತರು, ಸದಸ್ಯರನ್ನು ಸಜ್ಜುಗೊಳಿಸುವ ಸವಾಲು ಜೆಡಿಎಸ್‌ಗೆ ಇದೆ.

ಎ.ಮುರುಳಿ

ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕ ಯಶಸ್ಸಿನಿಂದ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಅಭ್ಯರ್ಥಿ ಘೋಷಣೆಯಾದ ತಕ್ಷಣ ಕಾರ್ಯಚಟುವಟಿಕೆ ಆರಂಭಗೊಳ್ಳಲಿವೆ.

–ಎಂ.ಕೆ. ತಾಜ್‌ಪೀರ್‌ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ಅಭ್ಯರ್ಥಿ ಘೋಷಣೆಯಾಗಿಲ್ಲ ಎಂಬ ಕಾರಣಕ್ಕೆ ಪಕ್ಷದ ಕಾರ್ಯಚಟುವಟಿಕೆ ನಿಂತಿಲ್ಲ. ‘ಕಮಲ’ವೇ ಅಭ್ಯರ್ಥಿ ಎಂಬ ಮನೋಭಾವದೊಂದಿಗೆ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.

–ಎ. ಮುರುಳಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

‘ಗ್ಯಾರಂಟಿ’ ಮೇಲೆ ಕಾಂಗ್ರೆಸ್‌ ಭರವಸೆ

ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಇದೇ ಕಾರ್ಯತಂತ್ರ ಬಳಸಿ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿದೆ. ಗ್ಯಾರಂಟಿ ಅನುಷ್ಠಾನಕ್ಕೆ ರೂಪುಗೊಂಡ ಸಮಿತಿಗಳನ್ನು ಮುಂದಿಟ್ಟುಕೊಂಡು ಪ್ರಚಾರಕ್ಕೆ ಇಳಿಯಲು ಸಿದ್ಧತೆ ಮಾಡಿಕೊಂಡಿದೆ. ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಅಂತಿಮಗೊಂಡ ಬಳಿಕ ಪೂರ್ವಭಾವಿ ಸಭೆ ಕರೆಯಲು ಕಾಂಗ್ರೆಸ್‌ ಮುಖಂಡರು ನಿರ್ಧರಿಸಿದ್ದಾರೆ. ವಿಧಾನಸಭಾ ಚುನಾವಣೆಯ ಮಾದರಿಯಲ್ಲಿಯೇ ಲೋಕಸಭಾ ಚುನಾವಣೆಯನ್ನು ಎದುರಿಸಲು ಮುಂದಾಗಿದ್ದಾರೆ.

ಬಿಜೆಪಿಯಿಂದ ‘ಗಾಂವ್‌ ಚಲೋ’

ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿ ಮನೆಗೆ ಮಾಹಿತಿ ನೀಡಲು ಬಿಜೆಪಿ ‘ಗಾಂವ್‌ ಚಲೋ’ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ. ಕ್ಷೇತ್ರ ವ್ಯಾಪ್ತಿಯ ಎಲ್ಲೆಡೆ ಗೋಡೆ ಬರಹ ಫಲಾನುಭವಿಗಳ ಭೇಟಿ ಮಾಡಿ ‘ಮತ್ತೊಮ್ಮೆ ಮೋದಿ’ ಸಂದೇಶ ರವಾನಿಸಿದೆ. ಶಕ್ತಿ ಕೇಂದ್ರ ಮಹಾಶಕ್ತಿ ಕೇಂದ್ರ ಬೂತ್‌ ಅಧ್ಯಕ್ಷ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ನಡೆಸಿದೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ರಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.