ಭರಮಗಿರಿ (ಹಿರಿಯೂರು):ತಾಲ್ಲೂಕಿನ ಭರಮಗಿರಿ ಗ್ರಾಮದಲ್ಲಿ ಬುಧವಾರ ಮತ್ತು ಗುರುವಾರ ಈರಣ್ಣದೇವರ ಪುನಃ ಸ್ಥಿರಬಿಂಬ (ನೂತನವಾಗಿ ನಿರ್ಮಿಸಿರುವ ಪೌಳಿ) ಪ್ರತಿಷ್ಠಾಪನೆ ಸಮಾರಂಭ ಅದ್ದೂರಿಯಾಗಿ ನಡೆಯಿತು.
ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
ಭರಮಗಿರಿ ಗ್ರಾಮದ ಈರಣ್ಣದೇವರು, ರಾಮನಹಳ್ಳಿ ಕಟ್ಟೆಮನೆ, ಸಿದ್ದನಕಟ್ಟೆ ಗುಡಿಕಟ್ಟು, ಚಂಗಾವರದ ಹೊಂಬಿಗೆ ಸೇರಿದ ಅರೇನವರ ಗೊಲ್ಲರ (ಮಾರೇರ ಗೊಲ್ಲರು) ಯಡ್ಡಪ್ಪ, ಮಂಗಣ್ಣ, ಮಡ್ನಿಮಾರಣ್ಣ ಮತ್ತು ಈರಮಾರಣ್ಣನ ಕಣತಿಗೆ ಸೇರಿದ ಅಣ್ಣ–ತಮ್ಮಂದಿರಿಗೆ ಇದು ಭಕ್ತಿಯ ಕೇಂದ್ರ.
‘ಮಡ್ನಿಮಾರಣ್ಣ ಮತ್ತು ಜಡಿಯಮ್ಮ ದಂಪತಿ ಪುತ್ರನಾದ ಭರಮಗಿರಿ ಈರಣ್ಣ ಕಾಡುಗೊಲ್ಲರ ಸಾಂಸ್ಕೃತಿಕ ವೀರರಲ್ಲಿ ಒಬ್ಬ. ತನ್ನ ಕುಲಕಸುಬಾದ ಪಶುಪಾಲನೆ ಮಾಡುತ್ತಿರುವಾಗ ಒಮ್ಮೆ ವೇದಾವತಿ ನದಿ ದಂಡೆಯ ಮಡುವೊಂದರ ಬಳಿ ಹಾಲು ಕಾಯಿಸುತ್ತಿರುವಾಗ ಯವನರ ದಂಡು ದಾಳಿ ಮಾಡುತ್ತದೆ. ಪವಿತ್ರವಾದ ತನ್ನ ಕುಲ ಕೆಡಬಾರದು ಎಂದು ಏಳು ಅರವಿಯ ಸುಡುವ ಹಾಲನ್ನು ಕುಡಿದ ಈರಣ್ಣ, ಉರಿ–ಬೇಗೆ ತಾಳಲಾರದೆ ಮಡುವಿಗೆ ಧುಮುಕಿ ಐಕ್ಯವಾಗಿ ದೇವರಾಗುತ್ತಾನೆ. ಈರಣ್ಣನ ಸಾಹಸ ಗಾಥೆಯನ್ನು ಯುವಪೀಳಿಗೆಗೆ ನೆನಪಿಸುವ ಮತ್ತು ಇಂತಹ ಪರಂಪರೆ ಸಂರಕ್ಷಿಸುವ ಉದ್ದೇಶದಿಂದ ಪೌಳಿಯ ಮೂಲ ವಿನ್ಯಾಸದೊಂದಿಗೆ ನೂತನ ದೇವಾಲಯ ನಿರ್ಮಿಸಲಾಗಿದೆ’ ಎಂದು ಉತ್ಸವ ಸಮಿತಿಯವರು ಹೇಳಿದರು.
ಬುಧವಾರ ಮೂಲದೇವರ ಗಂಗಾಪೂಜೆ ನೆರವೇರಿಸಲಾಯಿತು. ಸಂಜೆ 4.30ಕ್ಕೆ ಸನ್ನಿಧಿಗೆ ದೇವರ ಆಗಮನವಾಯಿತು. ಸಂಜೆ 5ಕ್ಕೆ ಋತ್ವಿಜರು ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರುವಾರ ಬೆಳಿಗ್ಗೆ ಪ್ರಾಣ ಪ್ರತಿಷ್ಠೆ, ಹೋಮ, ಮಹಾಮಂಗಳಾರತಿ, ಧಾರ್ಮಿಕ ಸಮಾರಂಭ, ಮಧ್ಯಾಹ್ನ 2.30ಕ್ಕೆ ಉಂಡೆಮಂಡೆ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.