ADVERTISEMENT

ಉಪದೇಶದ ಸರಕಾಗುತ್ತಿದೆ ಕಾಯಕ ತತ್ವ

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 5:41 IST
Last Updated 4 ಆಗಸ್ಟ್ 2020, 5:41 IST
ಪಂಡಿತಾರಾಧ್ಯ ಸ್ವಾಮೀಜಿ
ಪಂಡಿತಾರಾಧ್ಯ ಸ್ವಾಮೀಜಿ   

ಚಿತ್ರದುರ್ಗ: ಆದರ್ಶಗಳನ್ನು ಗಾಳಿಗೆ ತೂರಿ ಹಣ ಸಂಪಾದಿಸಬೇಕು ಎಂಬ ಹಪಹಪಿಕೆ ಹೆಚ್ಚಾಗಿರುವುದರಿಂದ ಕಾಯಕ ತತ್ವ ಉಪದೇಶದ ಸರಕಾಗುತ್ತಿದೆ ಎಂಬ ವೇದನೆ ಕಾಡುತ್ತಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

‘ಮತ್ತೆ ಕಲ್ಯಾಣ’ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ಮಾತನಾಡಿದ ಸ್ವಾಮೀಜಿ, ‘ವಾಮಮಾರ್ಗದಲ್ಲಿ ಕೋಟಿ ಕೋಟಿ ಸಂಪಾದಿಸುವ ಸ್ಪರ್ಧೆ ಶುರುವಾಗಿದೆ. ಇದರಲ್ಲಿ ರಾಜಕಾರಣಿ, ಸ್ವಾಮೀಜಿಗಳು, ಅಧಿಕಾರಿ, ವ್ಯಾಪಾರಿಗಳು ಹಾಗೂ ಗುತ್ತಿಗೆದಾರರು ಇದ್ದಾರೆ. ಎಷ್ಟೋ ಜನರಿಗೆ ದುಡಿಮೆಯಲ್ಲಿ ಒಲವಿಲ್ಲ. ಅಲ್ಪ ಶ್ರಮದ ಮೂಲಕ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ಹೀಗಾಗಿ, ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ’ ಎಂದು ಹೇಳಿದರು.

‘ಶರಣರ ದೃಷ್ಟಿಯಲ್ಲಿ ಪೂಜೆಗಿಂತಲೂ ಶ್ರೇಷ್ಠವಾದುದು ಕಾಯಕ. 12ನೇ ಶತಮಾನಕ್ಕೂ ಮೊದಲು ದೇಗುಲಗಳು ಕೂಡ ಸುಲಿಗೆಯ ಕೇಂದ್ರಗಳಾಗಿದ್ದವು. ಹೀಗಾಗಿ, ಶರಣರು ಕಾಯಕ ಚಳವಳಿಯ ಮೂಲಕ ಇಷ್ಟಲಿಂಗ ಪೂಜೆಗೆ ಒತ್ತು ನೀಡಿದರು. ಪ್ರತಿಯೊಬ್ಬರಲ್ಲೂ ಕಾಯಕ ಶ್ರದ್ಧೆ ಬಲಗೊಂಡರೆ ಬಡತನಕ್ಕೆ ಇಂಬಿರುವುದಿಲ್ಲ. ಭಿಕ್ಷೆಗೆ ಅವಕಾಶವಿರುವುದಿಲ್ಲ’ ಎಂದರು.

ADVERTISEMENT

‘ಕಾಯಕವೇ ಶರಣರ ಚಳವಳಿಯ ಶಕ್ತಿ. ಆ ಶಕ್ತಿಯನ್ನು ತುಂಬಿದವರು ತಳಸಮುದಾಯದ ಕುಶಲಕರ್ಮಿಗಳು. ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿ ಯಾವುದೇ ಸ್ಥಾನದಲ್ಲಿದ್ದರೂ ತನ್ನ ಜೀವನ ನಿರ್ವಹಣೆಗೆ ಕಾಯಕ ಮಾಡಲೇಬೇಕು. ಹಾಗಂತ ದುರ್ಮಾರ್ಗ, ಮೋಸದಿಂದ ಸಂಪಾದನೆ ಮಾಡುವ ವೃತ್ತಿ ಕಾಯಕವಾಗುವುದಿಲ್ಲ’ ಎಂದು ವಿಶ್ಲೇಷಣೆ ಮಾಡಿದರು.

‘ಕಾಯಕದಲ್ಲಿ ಮೇಲು-ಕೀಳು ಎಂಬ ಅಂತರವಿಲ್ಲ. ಯಾವುದೇ ಕಾಯಕವಾದರೂ ಕೈ ಮುಟ್ಟಿ ಮಾಡಬೇಕು. ಕಾಯಕದ ಮೂಲಕ ಕಲ್ಯಾಣದಲ್ಲಿ ತಳವರ್ಗದ ಜನರು ಅದ್ಭುತ ಚಳುವಳಿ ಮಾಡಿದ್ದು ಇಂದಿಗೂ ಪ್ರಸ್ತುತ. ಇಂಥ ಚಳವಳಿ ವಿಶ್ವದ ಯಾವ ಭಾಗದಲ್ಲೂ ನಡೆದಿಲ್ಲ ಎನ್ನುವುದು ಕನ್ನಡಿಗರಾದ ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ’ ಎಂದರು.

‘ಕಾಯಕ ಜೀವಿಗಳ ಚಳುವಳಿ’ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಸಿ.ವೀರಣ್ಣ ಮಾತನಾಡಿದರು.

‘ಐಕ್ಯ’ ವಿಶ್ಲೇಷಣೆಗೆ ಆಕ್ಷೇಪ

‘ಕಾಯಕ ಜೀವಿಗಳ ಚಳವಳಿ’ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ.ಸಿ.ವೀರಣ್ಣ, ‘ಕಲ್ಯಾಣಕ್ರಾಂತಿ ಬಳಿಕ ಬಸವಣ್ಣ ನೀರಲ್ಲಿ ಮುಳುಗಿದರು. ವಚನ ಚಳವಳಿ ರೂಪಿಸಿದ ಬಸವಣ್ಣನಿಗೆ ಕ್ರಾಂತಿ ಬಳಿಕ ಬೇಸರವೂ ಆಗಿರಬಹುದು. ಹೀಗಾಗಿ ಈ ರೀತಿ ಮಾಡಿರಬಹುದು’ ಎಂದು ‌ಕೂಡಲ ಸಂಗಮದಲ್ಲಿ ಬಸವಣ್ಣನವರು ಐಕ್ಯವಾದ ಬಗೆ ವಿವರಿಸಿದರು.

ವೀರಣ್ಣ ಅವರ ಅಭಿಪ್ರಾಯಕ್ಕೆ ಪಂಡಿತಾರಾಧ್ಯ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು. ‘ಚಳವಳಿ ವಿಫಲ ಕ್ರಾಂತಿ’ ಎಂಬ ಉಪನ್ಯಾಸಕರ ವಿಶ್ಲೇಷಣೆಗೂ ಸ್ವಾಮೀಜಿ ಸ್ಪಷ್ಟನೆ ನೀಡಿದರು.

‘ಅಷ್ಟೊಂದು ಜನರಿಗೆ ಆತ್ಮಸ್ಥೈರ್ಯ ತುಂಬಿದ ಬಸವಣ್ಣ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ’ ಎಂಬ ಅಂಬಿಕಾ ಶರಣಬಸಪ್ಪ ಎಂಬುವವರ ಪ್ರಶ್ನೆಗೆ ಸ್ವಾಮೀಜಿ ಪ್ರತಿಕ್ರಿಯಿಸಿದರು.

‘ಚಳವಳಿಯನ್ನು ಮುನ್ನಡೆಸಿದ ವ್ಯಕ್ತಿ ಎಂತಹದೇ ಸಂದರ್ಭದಲ್ಲಿ ಧೈರ್ಯಗೆಡುವುದಿಲ್ಲ. ಅದರಲ್ಲೂ ಬಸವಣ್ಣನವರಂತಹ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.