
ಚಿತ್ರದುರ್ಗ: ‘ದಾಂಪತ್ಯ ಜೀವನದಲ್ಲಿ ಜ್ಞಾನದಷ್ಟೇ ನಂಬಿಕೆ ಬಹಳ ಮುಖ್ಯ. ವ್ಯಕ್ತಿಯ ಸ್ವಪ್ರತಿಷ್ಠೆ, ಅಹಂಕಾರ ಭಾವನೆಯಿಂದಾಗಿ ಪರಸ್ಪರ ಹೊಂದಾಣಿಕೆ ಇಲ್ಲವಾಗುತ್ತಿದೆ’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.
ನಗರದ ಮುರುಘಾ ಮಠದಲ್ಲಿ ಗುರುವಾರ ಆಯೋಜಿಸಿದ್ದ 36ನೇ ವರ್ಷದ ಎರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದರು.
‘ಸತಿಪತಿಗಳು ಒಂದಾಗಿ ಜೀವನ ನಡೆಸಿದರೆ ಅದು ಅಮೃತವಾಗುತ್ತದೆ. ಇಂದು ಇಡೀ ಜಗತ್ತು ಭಾರತದ ಸಂಸ್ಕೃತಿಯನ್ನು ಗೌರವಿಸುತ್ತಿದೆ. ನಮ್ಮ ಕೌಟುಂಬಿಕ ಮೌಲ್ಯಗಳು ಅಷ್ಟು ಮಹತ್ವಪೂರ್ಣವಾಗಿವೆ. ಆದರೆ ಸ್ವಪ್ರತಿಷ್ಠೆ ಪರಿಣಾಮವಾಗಿ ವಿಚ್ಛೇದನ ಪ್ರಕರಣ ಹೆಚ್ಚಾಗುತ್ತಿವೆ. ಚಾಡಿ ಮಾತುಗಳನ್ನು ಸತಿಪತಿಗಳು ಕೇಳಬಾರದು’ ಎಂದು ಸಲಹೆ ನೀಡಿದರು.
‘ಮಾನವನಿಗೆ ಹೊಟ್ಟೆ ಹಸಿವು ಎಷ್ಟು ಮುಖ್ಯವೋ ನೆತ್ತಿಯ ಹಸಿವು ಕೂಡ ಅಷ್ಟೇ ಮುಖ್ಯ. ದೇಹವೆಂಬ ಕೊಡದಲ್ಲಿ ಸುಜ್ಞಾನವನ್ನು ತುಂಬಿಕೊಳ್ಳಬೇಕು. ಅಹಂಕಾರದ ಬದಲಾಗಿ ಜ್ಞಾನವನ್ನು ತುಂಬಿಕೊಂಡಾಗ ಅದು ಎಂದಿಗೂ ತುಳುಕುವುದಿಲ್ಲ’ ಎಂದರು.
‘ಶ್ರೀಮಠವು ಸರ್ವಜನಾಂಗದ ಮಠವಾಗಿದೆ. ದಶಕಗಳಿಂದಲೂ ಅತ್ಯಂತ ಸರಳವಾಗಿ ಅರ್ಥಪೂರ್ಣವಾಗಿ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮದುವೆಯ ವೆಚ್ಚದ ಹೊರೆಯನ್ನು ತಗ್ಗಿಸುವುದು ಮತ್ತು ಜಾತಿ, ಮತಗಳ ಭೇದವಿಲ್ಲದೆ ಸಮಾಜವನ್ನು ಒಗ್ಗೂಡಿಸುವುದು ಇಂದಿನ ಅತ್ಯಂತ ಅವಶ್ಯಕತೆಗಳಲ್ಲಿ ಒಂದಾಗಿದೆ’ ಎಂದು ತಿಳಿಸಿದರು.
‘ಅತ್ಯಂತ ಸಾತ್ವಿಕವಾದ ಜೀವನ ಸಾಗಿಸಲು ಗುರು–ಹಿರಿಯರ, ಶರಣರ, ಪುಣ್ಯಪುರಷರ ಸತ್ಸಂಗವಿರಬೇಕು. ನಮ್ಮ ದೇಹ, ಮನಸ್ಸು, ಪ್ರಾಣ ಈ ಮೂರನ್ನು ಉಪಯೋಗಿಸಿಕೊಂಡು ನಾವು ವಿಶ್ವಪ್ರಜ್ಞೆಯನ್ನು ಹೊಂದಬೇಕು. ದಂಪತಿಗಳು ತಮ್ಮ ಆಲೋಚನೆಗಳನ್ನು ಕುಟುಂಬದಾಚೆಗೆ ವಿಸ್ತರಿಸಿಕೊಂಡು ವಿಶ್ವ ಮಾನವರಾಗಬೇಕು’ ಎಂದು ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಹೇಳಿದರು.
‘ಸಾಲವಿಲ್ಲದ ಮದುವೆ ಎಂದರೆ ಅದು ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವವಾಗಿದೆ. ನಿಮ್ಮ ಮಕ್ಕಳ ಮದುವೆಗಾಗಿ ಸಾಲ ಮಾಡಿ ಜೀವನಪೂರ್ತಿ ಕಷ್ಟಗಳನ್ನು ಅನುಭವಿಸುವುದಕ್ಕಿಂತ ಇಂತಹ ಕಾರ್ಯಕ್ರಮಗಳ ಸದುಪಯೋಗ ಮಾಡಿಕೊಂಡು ನೀವು ನಿಮ್ಮ ಕುಟುಂಬದವರು ನೆಮ್ಮದಿ ಜೀವನ ಸಾಗಿಸಿರಿ’ ಎಂದು ಶ್ರೀಮಠದ ಪೈಲ್ವಾನ್ ತಿಪ್ಪೇಸ್ವಾಮಿ ತಿಳಿಸಿದರು.
16 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಭಕ್ತರಾದ ಗಿರೀಶಾಚಾರ್ಯ, ಟಿ.ಪಿ.ಜ್ಞಾನಮೂರ್ತಿ ಇದ್ದರು.
ಭೌತಿಕ ಸಂಪತ್ತಿಗಾಗಿ ಮನಸ್ತಾಪಗೊಂಡು ವಿಚ್ಛೇದನಕ್ಕೆ ಒಳಗಾಗುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ. ಹಾಗಾಗಿ ಸತಿ ಪತಿಗಳು ಪರಸ್ಪರರ ತಪ್ಪು ಒಪ್ಪುಗಳನ್ನು ತಿದ್ದಿಕೊಂಡು ಸುಖ ಜೀವನವನ್ನು ನಡೆಸಬೇಕು.ಬಸವಪ್ರಭು ಸ್ವಾಮೀಜಿ ದಾವಣಗೆರೆ ವಿರಕ್ತಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.