ಮೊಳಕಾಲ್ಮುರು: ನಕಲಿ ಬಂಗಾರದ ನಾಣ್ಯಗಳನ್ನು ಮಾರಾಟ ಮಾಡಿದ ಆರೋಪ ಸಂಬಂಧ ತಾಲ್ಲೂಕಿನ ರಾಂಪುರ ಪೊಲೀಸರು ಭಾನುವಾರ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಆರೋಪಿಯಿಂದ ₹ 3.85 ಲಕ್ಷ ವಶಪಡಿಸಿಕೊಂಡಿದ್ದು, ಇನ್ನೊಬ್ಬ ಆರೋಪಿಗೆ ಶೋಧ ಕಾರ್ಯ ನಡೆಸಿದ್ದಾರೆ.
ಆಂಧ್ರಪ್ರದೇಶದ ಇಬ್ಬರು ಆರೋಪಿಗಳು ಆಂಧ್ರದ ಕಾಕಿನಾಡದ ಚಿಂತಕಾಯಲ ಶ್ರೀನಿವಾಸ ಅವರಿಗೆ ಕರೆ ಮಾಡಿ ಪರಿಚಯ ಮಾಡಿಕೊಂಡಿದ್ದರು.
ನಂತರ, ‘ನಮ್ಮ ಸಂಬಂಧಿಕರ ಹಳೆ ಮನೆಯನ್ನು ಕೀಳುವಾಗ ಅದರಲ್ಲಿ 5 ಕೆ.ಜಿಯಷ್ಟು ಪೂರ್ವಿಕರಿಗೆ ಸೇರಿದ ಬಂಗಾರದ ನಾಣ್ಯಗಳು ಸಿಕ್ಕಿವೆ. ಇವುಗಳನ್ನು ಅರ್ಧ ದರಕ್ಕೆ ನೀಡುವುದಾಗಿ ನಂಬಿಸಿದ್ದಾರೆ. ಅದರಂತೆ ಶ್ರೀನಿವಾಸ ಅವರು ರಾಂಪುರಕ್ಕೆ ಬಂದಾಗ ಅವರಿಂದ ಹಣ ಪಡೆದು ಬಂಗಾರದ ನಾಣ್ಯಗಳನ್ನು ತರುವುದಾಗಿ ಹೇಳಿ ಬೈಕ್‌ನಲ್ಲಿ ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ರಾಂಪುರ ಪಿಎಸ್‌ಐ ಮಹೇಶ್ ಹೊಸಪೇಟೆ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
‘ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಆಂಧ್ರಪ್ರದೇಶ, ತೆಲಂಗಾಣಕ್ಕೆ ಸೇರಿದ ವಂಚಕರು ನಕಲಿ ಬಂಗಾರವನ್ನು ಅಸಲಿ ಎಂದು ನಂಬಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದು, ಜನರು ಎಚ್ಚರ ವಹಿಸಬೇಕು’ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.