ADVERTISEMENT

ಕುರಿ– ಮೇಕೆ ಹಿಂಡಿನೊಂದಿಗೆ ರೈತರ ಪ್ರತಿಭಟನೆ

ಜವನಗೊಂಡನಹಳ್ಳಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 36ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 14:50 IST
Last Updated 24 ಜುಲೈ 2024, 14:50 IST
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 36ನೇ ದಿನವಾದ ಬುಧವಾರ ರೈತರು ನಾಡಕಚೇರಿ ಮುಂದೆ ಕುರಿ ಹಿಂಡು ತರುಬುವ ಮೂಲಕ ಪ್ರತಿಭಟನೆ ನಡೆಸಿದರು
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 36ನೇ ದಿನವಾದ ಬುಧವಾರ ರೈತರು ನಾಡಕಚೇರಿ ಮುಂದೆ ಕುರಿ ಹಿಂಡು ತರುಬುವ ಮೂಲಕ ಪ್ರತಿಭಟನೆ ನಡೆಸಿದರು    

ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಹೋಬಳಿಯ ಕೆರೆಗಳಿಗೆ ವಾಣಿವಿಲಾಸ ಜಲಾಶಯದ ನೀರು ಹರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 36ನೇ ದಿನವಾದ ಬುಧವಾರ ರೈತರು ನಾಡಕಚೇರಿ ಮುಂದೆ ಕುರಿ– ಮೇಕೆ ಹಿಂಡಿನೊಂದಿಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ‘ಹೋಬಳಿಯ ಐದಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ. ದಿನಕ್ಕೆ ಒಂದೆರಡು ಟ್ಯಾಂಕರ್ ನೀರು ಕಳುಹಿಸಿದಲ್ಲಿ ಅಡುಗೆ, ಸ್ನಾನ, ಬಟ್ಟೆಬರೆ ಶುಚಿ, ದನಕರುಗಳಿಗೆ ಹೇಗೆ ಸಾಕಾಗುತ್ತದೆ ಎಂಬುದನ್ನು ಆಡಳಿತ ನಡೆಸುವವರು ಅರ್ಥ ಮಾಡಿಕೊಳ್ಳಬೇಕು’ ಎಂದು ದೂರಿದರು.

‘ಬೇಸಿಗೆ ಸಮಯದಲ್ಲಿ ಇಡೀ ಹೋಬಳಿಯ ಹಳ್ಳಿಗಳಲ್ಲಿ ನೀರಿನ ಹಾಹಾಕಾರ ಉಂಟಾಗಿ ಟ್ಯಾಂಕರ್‌ಗಳಲ್ಲಿ ನೀರು ಕೊಡಲಾಗುತ್ತಿದೆ. ದನಕರು, ಕುರಿ– ಮೇಕೆಗಳನ್ನು ಸಾಕುತ್ತಿರುವ ರೈತರು ನೀರಿಗಾಗಿ ಕಿಲೋಮೀಟರ್ ದೂರ ಹೋದರೂ ನೀರು ಸಿಗುತ್ತಿಲ್ಲ. ನೀರಿನ ವಿಚಾರಕ್ಕೆ ಬೇಸತ್ತು ಚಳವಳಿ ನಡೆಸುವ ನಿರ್ಧಾರಕ್ಕೆ ಬಂದಿದ್ದೇವೆ. ಸರ್ಕಾರ ನೀರಿನ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಹೋಬಳಿಯ ಒಂದೇ ಒಂದು ಕೆರೆಗೆ ಬೊಗಸೆಯಷ್ಟೂ ನೀರು ಬಂದಿಲ್ಲ. ಹೋಬಳಿಯಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಜನರು ಶೇ 90ರಷ್ಟಿದ್ದು, ಕೃಷಿಯ ಜೊತೆಗೆ ಕುರಿ ಸಾಕಣೆಯನ್ನು ಪ್ರಮುಖ ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಮನೆಯಲ್ಲಿರುವ ನೂರಾರು ಕುರಿಗಳಿಗೆ ಟ್ಯಾಂಕರ್ ನೀರು ಸಾಕಾಗುತ್ತದೆಯೇ ಎಂಬುದರ ಅರಿವು ಆಡಳಿತ ನಡೆಸುವವರಿಗೆ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒತ್ತಾಯ: ‘ಅಂತರ್ಜಲ ಕುಸಿತದಿಂದ ಅಡಿಕೆ, ತೆಂಗು, ಬಾಳೆ, ದಾಳಿಂಬೆ, ಪಪ್ಪಾಯ ತೋಟಗಳನ್ನು ಒಣಗಿಸಿಕೊಂಡಿರುವ ರೈತರಿಗೆ ಸರ್ಕಾರದಿಂದ ತಕ್ಷಣ ತಾತ್ಕಾಲಿಕ ಪರಿಹಾರ ನೀಡಬೇಕು. ನೀರಾವರಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ವಾಣಿವಿಲಾಸದಿಂದ ಹೋಬಳಿಯ ಕೆರೆಗಳಿಗೆ ನೀರು ಹರಿಸಬೇಕು. ಜುಲೈ 31ರಂದು ಇಲ್ಲಿಂದ ಹಿರಿಯೂರಿನ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಅಷ್ಟರಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳದೇ ಹೋದರೆ ಹೆದ್ದಾರಿ ತಡೆಯಂತಹ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ’ ಎಂದು ತಿಪ್ಪೇಸ್ವಾಮಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಆಲೂರು ಸಿದ್ದರಾಮಣ್ಣ, ಎಂ.ಆರ್.ಈರಣ್ಣ, ಕೆ.ಆರ್.ಹಳ್ಳಿ ರಾಮಯ್ಯ ಮಾತನಾಡಿದರು. ಮೀಸೆ ರಾಜಣ್ಣ, ಈರಣ್ಣ, ವಾಜಿದ್, ಚಿತ್ರಲಿಂಗಪ್ಪ, ವಜೀರ್, ಕನ್ಯಪ್ಪ, ಕೆ.ಆರ್.ಹಳ್ಳಿ ರಾಜಪ್ಪ, ರಾಮಕೃಷ್ಣ, ಚಂದ್ರಪ್ಪ, ಮಂಜುನಾಥ್, ಕೃಷ್ಣಪ್ಪ, ಶಿವಣ್ಣ, ಈರಣ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.