ADVERTISEMENT

ರೈತರ ಹೆದ್ದಾರಿ ತಡೆ ನಾಳೆ

ದೆಹಲಿಯ ರೈತರ ಹೋರಾಟಕ್ಕೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 10:51 IST
Last Updated 24 ನವೆಂಬರ್ 2021, 10:51 IST
ನುಲೇನೂರು ಶಂಕರಪ್ಪ
ನುಲೇನೂರು ಶಂಕರಪ್ಪ   

ಚಿತ್ರದುರ್ಗ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ. ಹೋರಾಟಕ್ಕೆ ವರ್ಷ ತುಂಬುತ್ತಿರುವುದರಿಂದ ನ.26ರಂದು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲು ರೈತರಿಗೆ ಕರೆ ನೀಡಿದೆ.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕ್ಯಾದಿಗೆರೆಯ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಸಹ ಸಂಘಟನೆಗಳಾದ ಕರ್ನಾಟಕ ರಾಜ್ಯ ರೈತ ಸಂಘ, ಸಿಐಟಿಯು, ಎಐಯುಟಿಯುಸಿ, ಎಐಟಿಯುಸಿ, ಕಟ್ಟಡ ಕಾರ್ಮಿಕರು, ಕನ್ನಡ ಪರ ಸಂಘಟನೆ, ಜನಶಕ್ತಿ, ದಲಿತ ಸಂಘಟನೆ, ಜೈ ಭಾರತ್ ರಕ್ಷಣಾ ವೇದಿಕೆ, ಅಸಂಘಟಿತ ಕಾರ್ಮಿಕರ ಸಂಘ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ, ಯುವ ಮುನ್ನಡೆ ಸಂಘಟನೆಗಳು ಪಾಲ್ಗೊಳ್ಳಲಿವೆ.

‘ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ. ಆದರೆ, ಇದಕ್ಕೆ ಅನುಗುಣವಾದ ಕಾನೂನಾತ್ಮಕ ಪ್ರಕ್ರಿಯೆ ಸಂಸತ್ತಿನಲ್ಲಿ ಅಧಿಕೃತವಾಗಿ ನಡೆಯಬೇಕಿದೆ. ಕಾಯ್ದೆ ವಾಪಸ್ಸು ಪಡೆಯುವ ಕೆಲಸ ಅಗಬೇಕಾಗಿದೆ. ಹೀಗಾಗಿ ಹೋರಾಟವನ್ನು ಮುಂದುವರಿಸುವ ಅಗತ್ಯವಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ ತಿಳಿಸಿದ್ದಾರೆ.

ADVERTISEMENT

‘ರೈತರು ಹಾಗೂ ಕಾರ್ಮಿಕರು ಸುದೀರ್ಘ ಒಂದು ವರ್ಷದಿಂದ ಆಹೋರಾತ್ರಿ ಹೋರಾಟ ನಡೆಸಿದೆ. 700ಕ್ಕೂ ಅಧಿಕ ರೈತರು ಹುತಾತ್ಮರಾಗಿದ್ದಾರೆ. ಹೋರಾಟಕ್ಕೆ ಮಣಿದ ಪ್ರಧಾನಿ ಮೂರು ಕಾಯ್ದೆಗಳನ್ನು ವಾಪಸ್ಸು ತೆಗೆಯುವ ಬಗ್ಗೆ ಮಾತನಾಡಿದ್ದಾರೆ. ಆದರೆ, ರೈತರ ಬೇರೆ ಸಮಸ್ಯೆಗಳ ಬಗ್ಗೆ ಚಕಾರ ಎತ್ತಿಲ್ಲ. ಕರ್ನಾಟಕದಲ್ಲಿ ಈಗಾಗಲೇ ಜಾರಿಗೊಳಿಸಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ಕಾಯ್ದೆ ಹಾಗೂ ಜಾನುವಾರು ರಕ್ಷಣಾ ಕಾಯ್ದೆಗಳನ್ನು ಹಿಂಪಡೆಯುವ ಅಗತ್ಯವಿದೆ’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ವಿದ್ಯುತ್ ಮಸೂದೆಗೆ ತಿದ್ದುಪಡಿ ಮಾಡಿ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಲು ಮುಂದಾಗಿವೆ. ಈ ಆಲೋಚನೆಯನ್ನು ಸರ್ಕಾರಗಳು ಮೊದಲು ಕೈಬಿಡಬೇಕು. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು. ದೇಶದಾದ್ಯಂತ ಈ ಹೋರಾಟದಲ್ಲಿ ಭಾಗವಹಿಸಿದ ಹೋರಾಟಗಾರರ ಮೇಲೆ ಹಾಕಲಾಗಿರುವ ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕು. ಉತ್ತರಪ್ರದೇಶದಲ್ಲಿ ರೈತರ ಮೇಲೆ ಜೀಪು ಹರಿಸಿದ ಆರೋಪಿಯ ತಂದೆಯನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.