ADVERTISEMENT

ಬಾರದ ಅನುದಾನ; ಸಂಸದರ ರಾಜೀನಾಮೆಗೆ ಒತ್ತಾಯ

ಗೋವಿಂದ ಕಾರಜೋಳ ಕಚೇರಿ ಎದುರು ರೈತಸಂಘದ ಸದಸ್ಯರ ಪ್ರತಿಭಟನೆ, ದೆಹಲಿ ಚಲೋ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 5:57 IST
Last Updated 24 ಫೆಬ್ರುವರಿ 2026, 5:57 IST
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಗೆ ಎಂದು ಒತ್ತಾಯಿಸಿ ಸೋಮವಾರ ಸಂಸದ ಗೋವಿಂದ ಕಾರಜೋಳ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಗೆ ಎಂದು ಒತ್ತಾಯಿಸಿ ಸೋಮವಾರ ಸಂಸದ ಗೋವಿಂದ ಕಾರಜೋಳ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು   

ಚಿತ್ರದುರ್ಗ: ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ₹ 5,300 ಕೋಟಿ ಅನುದಾನ ನೀಡಲು ಕೇಂದ್ರ ಸರ್ಕಾರ ವಿಫಲವಾಗಿದೆ. ಜಿಲ್ಲೆಯ ಸಂಸದ ಗೋವಿಂದ ಕಾರಜೋಳ ಅವರು ಕೂಡ ಅನುದಾನ ತರುವಲ್ಲಿ ಸೋತಿದ್ದಾರೆ. ಹೀಗಾಗಿ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸದಸ್ಯರು ಸೋಮವಾರ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಆರೂ ತಾಲ್ಲೂಕುಗಳಿಂದ ಬಂದಿದ್ದ ರೈತರು, ಮುಖಂಡರು ಪ್ರವಾಸಿ ಮಂದಿರದಿಂದ ಸಂಸದರ ಕಚೇರಿವರೆಗೂ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆ ಕೂಗಿದರು. ಸಂಸದರು ಕಚೇರಿಯಲ್ಲಿ ಇಲ್ಲದಿರುವುದನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಫೆ. 19ರಂದೇ ನಾವು ಸಂಸದರಿಗೆ ಪತ್ರ ನೀಡಿ ಪ್ರತಿಭಟನೆಯ ಮಾಹಿತಿ ನೀಡಿದ್ದೆವು. ಅಂದು ಹಾಜರಿದ್ದು ಅನುದಾನ ತರುವ ವಿಚಾರದಲ್ಲಿ ಆಗಿರುವ ಬೆಳವಣಿಗೆಗಳನ್ನು ರೈತರ ಎದುರು ತಿಳಿಸುವಂತೆ, ಮನವರಿಕೆ ಮಾಡಿಕೊಡುವಂತೆ ಮನವಿ ಮಾಡಿದ್ದೆವು. ಆದರೆ, ಸಂಸದರು ಜಿಲ್ಲೆಯಲ್ಲೇ ಇದ್ದರೂ ಕಚೇರಿಗೆ ಬಂದು ನಮಗೆ ಮಾಹಿತಿ ನೀಡದಿರುವುದು ಖಂಡನೀಯ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಒತ್ತಾಯಿಸಿದರು.

ADVERTISEMENT

‘15 ದಿನದ ಒಳಗಾಗಿ ಭದ್ರಾ ಅನುದಾನದ ಕುರಿತು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಮಾರ್ಚ್‌ ಅಂತ್ಯದೊಳಗೆ ಅನುದಾನ ತರಬೇಕು. ಇಲ್ಲದಿದ್ದರೆ ಏಪ್ರಿಲ್‌ ಮೊದಲ ವಾರದಲ್ಲಿ ನಾವು ದೆಹಲಿ ಚಲೋ ನಡೆಸಿ ಅಲ್ಲಿಯ ಜಂತರ್‌ ಮಂತರ್‌ನಲ್ಲಿ ಹೋರಾಟ ಕೈಗೊಳ್ಳುತ್ತೇವೆ. ರಾಜ್ಯದ ಸಂಸದರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಬಯಲು ಸೀಮೆಯ ಮಹತ್ವಾಕಾಂಕ್ಷಿ ಯೋಜನೆ ನನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ ಕೂಡ ಕೇಂದ್ರದ ಕಡೆಗೆ ಬೆರಳು ತೋರಿಸುತ್ತಿರುವುದರಿಂದ ಕಾಮಗಾರಿ ಪ್ರಗತಿ ಕಾಣದಾಗಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.

ಸತತ ಬರಗಾಲದಿಂದಾಗಿ ಅಂತರ್ಜಲ ಕುಸಿತ ಉಂಟಾಗಿ ಕುಡಿಯುವ ನೀರಿಗೂ ಕೊರತೆ ಎದುರಾಗಿದೆ. ರೈತರು ಬೆಳೆದಿರುವ ಬೆಳೆಗಳು ಅವರ ಕಣ್ಣಮುಂದೆಯೇ ಒಣಗಿ ಹೋಗುತ್ತಿವೆ. ಬೇಸಿಗೆ ಸಮೀಪಿಸುತ್ತಿದ್ದು, ಸಮರ್ಪಕವಾಗಿ ನೀರು ಸಿಗದಿದ್ದರೆ ನಷ್ಟ ಅನುಭವಿಸುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯವಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೇ 144.43ರಷ್ಟು ಅಂತರ್ಜಲ ಬಳಕೆಯಾಗುತ್ತಿದ್ದು, ಅಪಾಯದ ಮಟ್ಟ ಮೀರಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿಯ ಅಧ್ಯಯನ ಹೇಳಿದೆ. ಹೀಗಾಗಿ ಭದ್ರಾ ನೀರು ನಮ್ಮ ಜಿಲ್ಲೆಗೆ ಅನಿವಾರ್ಯವಾಗಿದೆ ಎಂದರು.

ಭದ್ರಾ ಮೇಲ್ದಂಡೆ ಕಾಮಗಾರಿ ಆರಂಭವಾಗಿ 20 ವರ್ಷ ಕಳೆದರೂ ಬಯಲು ಸೀಮೆಗೆ ನೀರು ಬಾರದಿರುವುದು ಸ್ಥಳೀಯ ಜನಪ್ರತಿನಿಧಿಗಳು ತಲೆತಗ್ಗಿಸುವ ವಿಚಾರವಾಗಿದೆ. 2019ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರಾ ಯೋಜನೆಗೆ ₹ 5,300 ಕೋಟಿ ಕೊಡುವುದಾಗಿ ಘೋಷಣೆ ಮಾಡಿದ್ದರು. ನಂತರ 2022–23ರ ಕೇಂದ್ರ ಬಜೆಟ್‌ನಲ್ಲಿ ಹಣ ನೀಡುವುದಾಗಿ ಕೇಂದ್ರ ಹಣಕಾಸು ಸಚಿವರು ಘೋಷಿಸಿದ್ದರು. ಆದರೆ, ಇಲ್ಲಿಯವರೆಗೆ ನಯಾಪೈಸೆಯೂ ಬಾರದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಲೋಕಸಭಾ ಚುನಾವಣೆ ವೇಳೆ ಸ್ಪರ್ಧಿಸಿದ್ದ ಗೋವಿಂದ ಕಾರಜೋಳ ಅವರು ತಾವು ಆಯ್ಕೆಯಾದರೆ ಅನುದಾನ ತರುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಹಣ ತರಲು ಸಾಧ್ಯವಾಗಿಲ್ಲ. ಇದರಿಂದಾಗಿ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಈ ಸಂಬಂಧ ಕೇಂದ್ರ ಸಚಿವರನ್ನು ಅನೇಕ ಬಾರಿ ಭೇಟಿ ಮಾಡಿ ಮನವಿ ಮಾಡಲಾಗಿದೆ. ಹಲವು ಹೋರಾಟಗಳ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೂ ಹಣ ಬಂದಿಲ್ಲ. ಹೀಗಾಗಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗಿದೆ ಎಂದರು.

ರೈತ ಮುಖಂಡರಾದ ಈಚಘಟ್ಟ ಸಿದ್ದವೀರಪ್ಪ, ಬೇಡರಹಳ್ಳಿ ಬಸವರೆಡ್ಡಿ, ಕೆ.ಟಿ. ತಿಪ್ಪೇಸ್ವಾಮಿ, ರಡ್ಡಿಹಳ್ಳಿ ವೀರಣ್ಣ, ರಾಜಣ್ಣ, ಟಿ.ಗಂಗಾಧರ, ನಾಗೇಂದ್ರಪ್ಪ, ಬಿ.ಎಸ್‌.ರಂಗಸ್ವಾಮಿ, ಸಿದ್ದರಾಮಣ್ಣ, ನಾಗರಾಜ, ತಿಮ್ಮಣ್ಣ, ಜಯಣ್ಣ, ರಾಮಯ್ಯ, ಪರಮೇಶ್ವರಪ್ಪ, ಪಾಲಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.