ADVERTISEMENT

ನಾಯಕನಹಟ್ಟಿ: ಪವರ್‌ ಸ್ಟೇಷನ್ ಕಾಮಗಾರಿ ಆರಂಭಕ್ಕೆ ಒತ್ತಾಯ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:43 IST
Last Updated 24 ಡಿಸೆಂಬರ್ 2025, 7:43 IST
ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮಮತಾ ಅವರಿಗೆ ಮನವಿಪತ್ರ ಸಲ್ಲಿಸಿದರು
ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮಮತಾ ಅವರಿಗೆ ಮನವಿಪತ್ರ ಸಲ್ಲಿಸಿದರು   

ನಾಯಕನಹಟ್ಟಿ: ತಳಕು ಹೋಬಳಿಯ ಹಿರೇಹಳ್ಳಿ ಮತ್ತು ಘಟಪರ್ತಿ ಗ್ರಾಮಗಳಿಗೆ ಮಂಜೂರಾಗಿರುವ 66/11ಕೆವಿ ಪವರ್‌ ಸ್ಟೇಷನ್‌ಗಳ ಕಾಮಗಾರಿಯನ್ನು ತುರ್ತಾಗಿ ಆರಂಭಿಸಿ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಒತ್ತಾಯಿಸಿದರು. 

‘ತಳಕು ಹೋಬಳಿಯ ಹಿರೇಹಳ್ಳಿ, ಬೇಡರೆಡ್ಡಿಹಳ್ಳಿ, ದೇವರೆಡ್ಡಿಹಳ್ಳಿ, ಘಟಪರ್ತಿ ಸೇರಿದಂತೆ ಹತ್ತಾರು ಗ್ರಾಮಗಳ ವ್ಯಾಪ್ತಿಯಲ್ಲಿ ಕೆರೆಕುಂಟೆಗಳಲ್ಲಿ ನೀರಿದ್ದು, ರೈತರು ನೀರಾವರಿ ಕೃಷಿಯತ್ತ ಗಮನ ಹರಿಸಿದ್ದಾರೆ. ಇದರಿಂದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿದರು.  

‘ಸರ್ಕಾರ ಹಿರೇಹಳ್ಳಿ ಮತ್ತು ಘಟಪರ್ತಿ ಗ್ರಾಮಗಳಲ್ಲಿ ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಕೇಂದ್ರಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಬೆಸ್ಕಾಂ ಉನ್ನತಾಧಿಕಾರಿಗಳು ಆದಷ್ಟು ಬೇಗ ಸೂಕ್ತ ಜಾಗ ಆಯ್ಕೆ ಮಾಡಿಕೊಂಡು 66/11 ಕೆ.ವಿ. ಪವರ್‌ ಸ್ಟೇಷನ್ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದರು. 

ADVERTISEMENT

‘ಸುಟ್ಟ ವಿದ್ಯುತ್ ಪರಿವರ್ತಕಗಳನ್ನು ತುರ್ತಾಗಿ ಬದಲಾಯಿಸುವುದು, ವಿದ್ಯುತ್ ಲೈನ್‌ಗಳ ಮೇಲೆ ಬೆಳೆದಿರುವ ಗಿಂಡಗಂಟೆಗಳನ್ನು ಕತ್ತರಿಸುವುದು, ಅಕ್ರಮ- ಸಕ್ರಮ ಯೋಜನೆಯಲ್ಲಿ ರೈತರಿಗೆ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬೆಸ್ಕಾಂ ಉಪವಿಭಾಗದ ಸಹಾಯಕ ಎಂಜಿನಿಯರ್ ಮಮತಾ ಅವರಿಗೆ ಮನವಿ ಸಲ್ಲಿಸಿದರು. 

‘ಜ.7ರಂದು ತಳಕು ಬೆಸ್ಕಾಂ ಆವರಣದಲ್ಲಿ ಹಿರಿಯೂರಿನ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ನೇತೃತ್ವದಲ್ಲಿ ರೈತರ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗಿದೆ. ಹಂತ ಹಂತವಾಗಿ ರೈತರ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲಾಗುವುದು’ ಎಂದು ಮಮತಾ ತಿಳಿಸಿದರು. 

ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಾದ ಹಿರೇಹಳ್ಳಿ ತಿಪ್ಪೇಸ್ವಾಮಿ, ಟಿ.ಗಂಗಾಧರಪ್ಪ, ಪ್ರಶಾಂತ್‌ ರೆಡ್ಡಿ, ರಾಜಣ್ಣ, ತಳವಾರ ತಿಪ್ಪೇಸ್ವಾಮಿ, ಓಬ್ಯಾನಾಯ್ಕ, ನಾಗೇಂದ್ರಪ್ಪ, ಮಧು, ಮ್ಲಲಿಕಾರ್ಜುನ, ಚಿತ್ತಯ್ಯ, ಅಂಜಿನಪ್ಪ, ಗೌಡಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.