ADVERTISEMENT

ಅರೇಹಳ್ಳಿ ಕೆರೆ ಏರಿ ಒಡೆಯುವ ಭೀತಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 2:58 IST
Last Updated 26 ನವೆಂಬರ್ 2021, 2:58 IST
ಹೊಸದುರ್ಗ ತಾಲ್ಲೂಕಿನ ಮತ್ತೋಡು ಗ್ರಾಮ ಪಂಚಾಯಿತಿ ಅರೇಹಳ್ಳಿ ಕೆರೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ವಿದ್ಯುತ್‌ ಕಂಬ, ಕೊಳವೆಬಾವಿ ಜಲಾವೃತವಾಗಿದೆ
ಹೊಸದುರ್ಗ ತಾಲ್ಲೂಕಿನ ಮತ್ತೋಡು ಗ್ರಾಮ ಪಂಚಾಯಿತಿ ಅರೇಹಳ್ಳಿ ಕೆರೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ವಿದ್ಯುತ್‌ ಕಂಬ, ಕೊಳವೆಬಾವಿ ಜಲಾವೃತವಾಗಿದೆ   

ಹೊಸದುರ್ಗ: ತಾಲ್ಲೂಕಿನ ಮತ್ತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿ ಗ್ರಾಮದ ಕೆರೆ ಏರಿ ಬಿರುಕು ಬಿಟ್ಟಿದ್ದು,ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.

ನೀರಿನ ಸಂಗ್ರಹಣೆಗೆ 2 ದಶಕಗಳ ಹಿಂದೆ ಕೆರೆ ಏರಿಯನ್ನು ನಿರ್ಮಾಣ ಮಾಡಲಾಗಿತ್ತು. ಈ ಗ್ರಾಮದ ಕೆರೆಯ ಸಮೀಪಕ್ಕೆ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಬಂದಿದೆ. ಇದರಿಂದಾಗಿ ತೇವಾಂಶ ಹೆಚ್ಚಾಗಿದ್ದು, ಕೆರೆಯ ಏರಿ ಒಡೆಯುವಂತಾಗಿದೆ. ಹಿನ್ನೀರು ಬಂದಿರುವುದರಿಂದ ವಿದ್ಯುತ್‌ ಕಂಬ ಹಾಗೂ ಗ್ರಾಮದ ಕುಡಿಯುವ ನೀರಿನ ಕೊಳವೆಬಾವಿಗಳು ಜಲಾವೃತವಾಗಿವೆ. ಇದರಿಂದ ಗ್ರಾಮದ ಜನರು ನೀರಿಗೆ ಪರದಾಡುವ ಸ್ಥಿತಿ ಎದುರಾಗಿದೆ.

ಗ್ರಾಮದ ರೈತರು ತಮ್ಮ ಜಮೀನುಗಳಿಗೆ ತೆರಳಲು ನಿರ್ಮಿಸಿಕೊಂಡಿದ್ದ ಎರಡು ರಸ್ತೆಗಳು ವಾಣಿವಿಲಾಸ ಜಲಾಶಯದ ಹಿನ್ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿವೆ. ರೈತರು ತಮ್ಮ ಜಮೀನಿಗೆ ತೆಪ್ಪಗಳ ಮೂಲಕ 34 ಕಿ.ಮೀ. ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಲಾಶಯದಲ್ಲಿ ಇನ್ನೂ ಹೆಚ್ಚಾಗುತ್ತಿರುವ ನೀರಿನಿಂದ ಗ್ರಾಮದ ಕೆರೆ ಏರಿ ಒಡೆದು ಹಾನಿ ಸಂಭವಿಸಬಹುದು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಿರಂಜನಮೂರ್ತಿ ತಿಳಿಸಿದ್ದಾರೆ.

ADVERTISEMENT

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಗ್ರಾಮಕ್ಕೆ ಆಗುವ ಹಾನಿಯನ್ನು ತಪ್ಪಿಸಲು ತುರ್ತು ಕ್ರಮವನ್ನು ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.