
ಚಿತ್ರದುರ್ಗ: ‘ಹೆಣ್ಣು ಭ್ರೂಣಹತ್ಯೆ ತಡೆಗಟ್ಟುವ ಸಂಬಂಧ ಪ್ರತಿ 3 ತಿಂಗಳಿಗೊಮ್ಮೆ ಪಿಸಿಪಿಎನ್‍ಡಿಟಿ (ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ) ಕಾಯ್ದೆಯಡಿ ರಚಿಸಲಾಗಿರುವ ಸಲಹಾ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ ನಡೆಸಬೇಕು. ಆದರೆ ಜಿಲ್ಲೆಯಲ್ಲಿ ನಿಗದಿತವಾಗಿ ಸಭೆ ನಡೆಯುತ್ತಿಲ್ಲ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆ ನಿಷೇಧ) ಕಾಯ್ದೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಹೆಣ್ಣು ಭ್ರೂಣ ಹತ್ಯೆ ತಡೆಗೆ ಸಮರ್ಪಕ ಯೋಜನೆಗಳನ್ನು ರೂಪಿಸಬೇಕು. ಕೇವಲ ಜಿಲ್ಲಾ ಅಥವಾ ರಾಜ್ಯಮಟ್ಟದಲ್ಲಿ ಸಭೆ ನಡೆಸಿ ಚರ್ಚೆ ನಡೆಸುವುದರಿಂದ ಬದಲಾವಣೆ ಸಾಧ್ಯವಿಲ್ಲ. ನಿಯಮಾನುಸಾರ ಮೇಲ್ವಿಚಾರಣ ಸಮಿತಿ ಸಭೆ ನಡೆಸದಿರುವುದಕ್ಕೆ ಕಾರಣ ನೀಡಬೇಕು. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗುವುದು. ಸಭೆ ನಡೆಸುವ ಮೂಲಕ ಭ್ರೂಣಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ನಿಗಾ ವಹಿಸಬೇಕು’ ಎಂದರು.
‘ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳ ಮೂಲಕ ತಳಮಟ್ಟದಲ್ಲಿ ಜನರಿಗೆ ಅರಿವು ಮೂಡಿಸಬೇಕು. ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಿಡೀರ್ ದಾಳಿ ನಡೆಸಬೇಕು. ಹೆಣ್ಣು ಮಕ್ಕಳ ರಕ್ಷಣೆಗೆ ಪೂರಕವಾದ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಕಾನೂನು ಜಾರಿಯ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು’ ಎಂದು ಸೂಚಿಸಿದರು.
‘ಹೆಣ್ಣು ಭ್ರೂಣ ಹತ್ಯೆಯು ಮಗುವಿನ ಬದುಕುವ ಮೂಲಭೂತ ಹಕ್ಕಿನ ನೇರ ಉಲ್ಲಂಘನೆಯಾಗಿದೆ. ಇಂತಹ ಅಮಾನವೀಯ ಪದ್ಧತಿಯನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಕಟ್ಟುನಿಟ್ಟಿನ ಕ್ರಮ ಹಾಗೂ ತಳಮಟ್ಟದಲ್ಲಿ ಅರಿವು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಕೆಲವು ಆಸ್ಪತ್ರೆಗಳು, ಸ್ಕ್ಯಾನಿಂಗ್ ಕೇಂದ್ರಗಳು ಅಪಾರ ಹಣ ಪಡೆದು ಭ್ರೂಣ ಲಿಂಗ ಪತ್ತೆ ಮಾಡುತ್ತಿವೆ ಎಂಬ ಆರೋಪವಿದೆ. ಇದರ ಬಗ್ಗೆ ಸೂಕ್ತ ಕ್ರಮವಾಗಬೇಕು’ ಎಂದರು.
‘ಬಾಲಕಿಯರಲ್ಲಿ ಗರ್ಭಧಾರಣೆಯ ಪ್ರಕರಣಗಳು ರಾಜ್ಯ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪಿಸಿಪಿಎನ್‍ಡಿಟಿ ಕಾಯ್ದೆ ಜಾರಿ ವಿಚಾರ ಮಹತ್ವ ಪಡೆದಿದೆ. ಕೇವಲ ಹೆಣ್ಣು ಮಗು ಎಂಬ ಕಾರಣಕ್ಕೆ ಗರ್ಭಪಾತ ಮಾಡಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಪರಿಣಾಮಕಾರಿಯಾಗಿ ಕಾನೂನು ಜಾರಿ ಮಾಡಬೇಕು. ಸಾಮಾಜಿಕ ಅರಿವು ಮೂಡಿಸುವ ಮೂಲಕ ಕಾಯ್ದೆಯ ಉದ್ದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು’ ಎಂದರು.
‘ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಮಾಡದಂತೆ ತಡೆಗಟ್ಟುವುದು ಹಾಗೂ ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಿಸುವುದು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಳ ಅಧಿನಿಯಮದ ಉದ್ದೇಶವಾಗಿದೆ. ಕೇವಲ ಜಿಲ್ಲಾ ಅಥವಾ ರಾಜ್ಯಮಟ್ಟದ ಚರ್ಚೆಗಳಿಂದ ಬದಲಾವಣೆ ಸಾಧ್ಯವಿಲ್ಲ. ಕಾಯ್ದೆಯ ಉದ್ದೇಶಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಕುಟಂಬ ಕಲ್ಯಾಣಾಧಿಕಾರಿ ಡಾ.ಟಿ.ಡಿ.ರೇಖಾ, ಪಿಸಿಪಿಎನ್‍ಡಿಟಿ ಪರಿಶೀಲನಾ ಮತ್ತು ತಪಾಸಣಾ ಸಮಿತಿ ಸದಸ್ಯರಾದ ಸತ್ಯನಾರಾಯಣ, ಕೆ.ಪಿ.ಮೀನಾಕ್ಷಿ, ಪಿಸಿಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ.ಎಸ್.ಸೌಮ್ಯ, ಸದಸ್ಯರಾದ ಡಾ.ದೇವರಾಜ್, ಗಾಯತ್ರಿ ಶಿವರಾಂ ಇದ್ದರು.
ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ
ಸಭೆಯ ನಂತರ ಕೆ.ಟಿ. ತಿಪ್ಪೇಸ್ವಾಮಿ ಅವರು ನಗರದ ವಿವಿಧ ಸ್ಕ್ಯಾನಿಂಗ್ ಕೇಂದ್ರಗಳಿಗೆ ಆಸ್ಪತ್ರೆಗಳಿಗೆ ತೆರಳಿ ತಪಾಸಣೆ ನಡೆಸಿದರು. ಕೇಂದ್ರಗಳ ಕಾರ್ಯವೈಖರಿ ಸ್ಕ್ಯಾನ್ ಮಾಡಿದ ದಾಖಲಾತಿ ಪ್ರತಿಗಳ ವೀಕ್ಷಣೆ ನಡೆಸಿದರು. ಕೇಂದ್ರಗಳಲ್ಲಿ ಕಾಯ್ದೆಯ ಬಗ್ಗೆ ಜಾಗೃತಿ ಬರಹಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು. ಜೆಸಿಆರ್ ಬಡಾವಣೆಯಲ್ಲಿರುವ ಕೀರ್ತಿ ಆಸ್ಪತ್ರೆ ಆಫಿಯಾ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.