ADVERTISEMENT

ತುಂಬಿದ ಚಿತ್ರದುರ್ಗ ಜಿಲ್ಲೆಯ ಶಾಂತಿವನ ಜಲಾಶಯ: ಸಿರಿಗೆರೆಶ್ರೀ ಭೇಟಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 4:44 IST
Last Updated 21 ನವೆಂಬರ್ 2021, 4:44 IST
ಸಿರಿಗೆರೆ ಸಮೀಪದ ಶಾಂತಿವನ ಜಲಾಶಯವನ್ನು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವೀಕ್ಷಿಸಿದರು
ಸಿರಿಗೆರೆ ಸಮೀಪದ ಶಾಂತಿವನ ಜಲಾಶಯವನ್ನು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವೀಕ್ಷಿಸಿದರು   

ಸಿರಿಗೆರೆ: ಶುಕ್ರವಾರ ಸುರಿದ ಮಳೆಗೆ ಸಿರಿಗೆರೆ ಸಮೀಪದ ಶಾಂತಿವನ ಜಲಾಶಯ 3ನೇ ಬಾರಿ ತುಂಬಿ ಹರಿಯುತ್ತಿದ್ದು, ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವೀಕ್ಷಿಸಿದರು.

ತ್ರಿವೇಣಿ ಸಂಗಮದಂತೆ ಕಾಣುವ ಜಲಾಶಯದಿಂದ ನೀರು ಧುಮ್ಮಿಕ್ಕುವ ನೀರನ್ನು ನೋಡಲು ಸುತ್ತಮುತ್ತಲ ಗ್ರಾಮದ ಜನ ಸಾಗರದಂತೆ ಹರಿದು ಬರುತ್ತಿದ್ದಾರೆ. ಸಂಜೆಯ ವೇಳೆ ಹಕ್ಕಿಗಳ ಚಿಲಿಪಿಲಿಯ ನಿನಾದ ನೊಂದ ಮನಗಳಿಗೆ ಮುದ ನೀಡುತ್ತಿದೆ.

ಅಕ್ಟೋಬರ್ ತಿಂಗಳಿನಲ್ಲಿ ಗಾದ್ರಿಗುಡ್ಡ, ಪುಡಕಲಹಳ್ಳಿ ಗುಡ್ಡಗಳಿಗೆ ಸುರಿದ ಮಳೆಗೆ ಶಾಂತಿವನ ಜಲಾಶಯ ತುಂಬಿ ಹರಿದಿತ್ತು. ಆಗ ಎರಡು ಕ್ರಸ್ಟ್‌ಗೇಟ್‌ಗಳನ್ನು ತೆರೆಯಲಾಗಿತ್ತು. ಶನಿವಾರ ನಾಲ್ಕು ಕ್ರಸ್ಟ್‌ಗೇಟ್‌ ಮೂಲಕ ನೀರು ಹರಿಯುವ ದೃಶ್ಯ ಮನೋಹರವಾಗಿತ್ತು.

ADVERTISEMENT

200 ಎಕರೆಗಿಂತ ಹೆಚ್ಚು ಜಮೀನಿನ ಮಧ್ಯಭಾಗದ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದೆ. 6 ವರ್ಷಗಳ ನಂತರ ತುಂಬಿ ಹರಿದ ಜಲಾಶಯಕ್ಕೆ ಜನರು ತಂಡೋಪವಾಗಿ ಭೇಟಿ ನೀಡಿ ಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸುವುದು ಕಂಡುಬಂತು.

ಶಾಂತಿವನ ಜಲಾಶಯ 35 ಅಡಿ ಆಳ ಇದ್ದು, ಹೆಚ್ಚಿನ ನೀರು ಸಂಗ್ರಹವಾಗಿದೆ. ನೀರು ಹರಿದು ಬರುವ ಜಾಗದಲ್ಲಿ ಸುಂದರ ನೀರಿನ ಕಾರಂಜಿ ಹಾಗೂ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.

ಅರಭಘಟ್ಟ ಸಮೀಪದ ಹಳ್ಳವೂ ತುಂಬಿ ಹರಿದಿದೆ. ದೊಡ್ಡಿಗನಾಳು ಹೊಸಟ್ಟಿ ಹಳ್ಳ, ಜಮ್ಮೇನಹಳ್ಳಿ ಬ್ಯಾಡರ
ಹಳ್ಳ, ಸೀಗೇಹಳ್ಳಿ ಹಳ್ಳಗಳು ತುಂಬಿದೆ.

ಗ್ರಾಮದ ಹೊಸಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ನಡೆದಿತ್ತು. ಈ ಬಾರಿ ಉತ್ತಮ ನೀರು ಸಂಗ್ರಹವಾಗಿದೆ. ಬುಕ್ಕರಾಯನಕೆರೆ, ಗೌಡನಕೆರೆಗಳಿಗೆ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಮುಂದಿನ ದಿನಗಳಂದು ಕೆರೆತುಂಬಿಸುವ ಕಾರ್ಯಕ್ಕೆ ಸಹಕಾರಿಯಾಗಲಿದೆ ಎಂದು ಗ್ರಾಮದ ಹಿರಿಯರು ಹೇಳಿದರು.

ತರಳಬಾಳು ಶ್ರೀಗಳವ ಮಾರ್ಗದರ್ಶನದಲ್ಲಿ ಕೆರೆ ತುಂಬಿಸುವ ಕಾಯಕ ನಡೆಯುತ್ತಿದ್ದು ರೈತರ ಬವಣೆ ನೀಗುವ ಕಾಲ ಬಂದಿದೆ ಎಂದು ಕೆರೆ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿಪಾಟೀಲ್‌ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.