ADVERTISEMENT

ಮೊಬೈಲ್ ಹಾವಳಿಯಿಂದ ಜಾನಪದ ಕಲೆ ನಾಶ: ಶಾಸಕ ಎಂ.ಚಂದ್ರಪ್ಪ

ವೀರಗಾಸೆ, ಭಜನಾ ಸ್ಪರ್ಧೆ ಉದ್ಘಾಟಿಸಿದ ಶಾಸಕ ಎಂ.ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 6:33 IST
Last Updated 7 ಅಕ್ಟೋಬರ್ 2025, 6:33 IST
ಹೊಳಲ್ಕೆರೆ ತಾಲ್ಲೂಕಿನ ಚನ್ನಸಮುದ್ರದಲ್ಲಿ ಸೋಮವಾರ ಶಾಸಕ ಎಂ.ಚಂದ್ರಪ್ಪ ವಿಶ್ವ ಬುಡಕಟ್ಟು ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ವೀರಗಾಸೆ ಮತ್ತು ಭಜನಾ ಸ್ಪರ್ಧೆ ಉದ್ಘಾಟಿಸಿದರು. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಬಿಲ್ಲಪ್ಪ ಇದ್ದರು.
ಹೊಳಲ್ಕೆರೆ ತಾಲ್ಲೂಕಿನ ಚನ್ನಸಮುದ್ರದಲ್ಲಿ ಸೋಮವಾರ ಶಾಸಕ ಎಂ.ಚಂದ್ರಪ್ಪ ವಿಶ್ವ ಬುಡಕಟ್ಟು ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ವೀರಗಾಸೆ ಮತ್ತು ಭಜನಾ ಸ್ಪರ್ಧೆ ಉದ್ಘಾಟಿಸಿದರು. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಬಿಲ್ಲಪ್ಪ ಇದ್ದರು.   

ಹೊಳಲ್ಕೆರೆ: ಮೊಬೈಲ್ ಹಾಗೂ ಟಿ.ವಿ ಹಾವಳಿಯಿಂದ ಜಾನಪದ ಕಲೆಗಳು ವಿನಾಶದತ್ತ ಸಾಗುತ್ತಿವೆ ಎಂದು ಶಾಸಕ ಎಂ.ಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಚನ್ನಸಮುದ್ರದಲ್ಲಿ ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ದಸರಾ ಮಹೋತ್ಸವ ಅಂಗವಾಗಿ ಸಿದ್ದರಾಮೇಶ್ವರ ದೇವಸ್ಥಾನ ಸಮಿತಿ ಹಾಗೂ ಕನ್ನಡ ಜಾನಪದ ಪರಿಷತ್ ಆಯೋಜಿಸಿದ್ದ ವೀರಗಾಸೆ ಮತ್ತು ಭಜನಾ ಮೇಳ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಂಗಳೂರು ಭಾಗದಲ್ಲಿ ಆಧುನಿಕತೆಯ ಭರಾಟೆಯಲ್ಲಿ ಜಾನಪದ ಕಲೆ ಕಣ್ಮರೆಯಾಗಿದೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಜಾನಪದ ಕಲೆಗಳು ಜೀವಂತವಾಗಿವೆ. ಅಲ್ಲಿ ಜಾನಪದ ನೃತ್ಯ, ಜಾನಪದ ಗೀತೆಗಳು ಇನ್ನೂ ಉಳಿದಿವೆ. ಜಾನಪದ ಕಲೆಗೆ ಜನರ ಪ್ರೋತ್ಸಾಹವೂ ಅಗತ್ಯವಾಗಿದ್ದು, ಕಲಾವಿದರಿಗೆ ಬೆಂಬಲ ನೀಡಬೇಕಿದೆ. ಸಿದ್ದರಾಮೇಶ್ವರ ದೇವಸ್ಥಾನ ಸಮಿತಿ ಇಂತಹ ವಿಶಿಷ್ಟ ಸ್ಪರ್ಧೆ ಏರ್ಪಡಿಸಿರುವುದು ಅತ್ಯಂತ ಖುಷಿ ತಂದಿದೆ. ಇಂತಹ ಕಾರ್ಯ ಎಲ್ಲ ಗ್ರಾಮಗಳಲ್ಲೂ ನಡೆಯಬೇಕು’ ಎಂದು ಹೇಳಿದರು.

ADVERTISEMENT

‘ಗ್ರಾಮೀಣ ಕಲೆಗಳನ್ನು ಉಳಿಸುವ ಹೊಣೆ ಇಂದಿನ ಯುವಜನಾಂಗದ ಮೇಲಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕಲೆ, ಸಂಸ್ಕೃತಿ ಉಳಿಸುವ ಕಾರ್ಯದಲ್ಲಿ ತೊಡಗಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ದಾನವೇಂದ್ರ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ರಾ.ಸು.ತಿಮ್ಮಯ್ಯ, ರಾಮಪ್ಪ, ಮೈಲಾರಪ್ಪ, ಜಯಂತಿ ಶ್ರೀನಿವಾಸ್, ರಾಮಚಂದ್ರಪ್ಪ, ಪುರುಷೋತ್ತಮ, ಸ್ವಾಮಿ, ಜಯಂತಿ, ದೇವರಾಜಯ್ಯ, ಗೋಪಿನಾಥ್ ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.