ಚಿತ್ರದುರ್ಗ: ‘ಕೃಷಿ ಉತ್ಪನ್ನಗಳ ಆಹಾರ ಸಂಸ್ಕರಣೆಯಲ್ಲಿ ಪ್ಯಾಕೇಜ್ ಹಾಗೂ ಬ್ರ್ಯಾಂಡಿಂಗ್ ಬಲು ಮುಖ್ಯ. ಅದು ಉತ್ಪನ್ನಗಳ ಮೌಲ್ಯ ಹೆಚ್ಚಿಸುತ್ತದೆ. ಗ್ರಾಹಕರ ನಂಬಿಕೆ, ವಿಶ್ವಾಸವನ್ನು ಉಳಿಸುತ್ತದೆ, ಆರ್ಥಿಕ ಶಿಸ್ತು ಮೈಗೂಡಿಸಿಕೊಳ್ಳುವಂತೆ ಮಾಡುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ನಗರದ ಜಿ.ಪಂ ಸಭಾಂಗಣದಲ್ಲಿ ಬುಧವಾರ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತು ನಿಗಮ, ಜಿಲ್ಲಾಡಳಿತದ ವತಿಯಿಂದ ನಡೆದ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ- ಎಣ್ಣೆಕಾಳು ಯೋಜನೆ ಮೌಲ್ಯ ಸರಪಳಿ, ಪಿ.ಎಂ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತ ಕೃಷಿ ಪ್ರಧಾನ ದೇಶವಾಗಿದ್ದು ವಿದೇಶಗಳಿಗೆ ವಾರ್ಷಿಕವಾಗಿ ₹ 48 ಲಕ್ಷ ಕೋಟಿ ಮೌಲ್ಯದ ಕೃಷಿ ಉತ್ಪನ್ನಗಳು, ₹ 7.5 ಲಕ್ಷ ಕೋಟಿ ಮೌಲ್ಯದ ಸಂಸ್ಕರಿಸಿದ ಆಹಾರ ಉತ್ಪನ್ನಗಳು ರಫ್ತಾಗುತ್ತಿವೆ. ಕೃಷಿ ಹಾಗೂ ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ಶುದ್ಧತೆ ಬಹಳ ಮುಖ್ಯ. ವಸ್ತುವಿನ ಗುಣಮಟ್ಟದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗಬಾರದು. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಪೂರೈಕೆಗೆ ಕ್ರಮವಹಿಸಬೇಕು’ ಎಂದರು.
‘ಆರ್ಥಿಕವಾಗಿ ನಮ್ಮ ರೈತರು ಸದೃಢರಾಗಬೇಕು. ಸ್ಥಳೀಯವಾಗಿ ಸಿಗುವ, ಬೆಳೆಯುವ ವಸ್ತು, ಪದಾರ್ಥಗಳನ್ನು ಮೌಲ್ಯವರ್ಧನೆ ಮಾಡಬೇಕು. ಪರಿಷ್ಕರಣೆ ಮಾಡಿರುವ ಪದಾರ್ಥ, ಆಹಾರದ ಪದಾರ್ಥಗಳನ್ನು ಗ್ರಾಹಕರು ಖರೀದಿ ಮಾಡುವ ರೀತಿಯಲ್ಲಿ ನಾನಾ ಸ್ವರೂಪ ಕೊಡಬೇಕು. ಆರೋಗ್ಯಕರ ಆಹಾರ ಪದಾರ್ಥವನ್ನು ಜನಸಾಮಾನ್ಯರೆಲ್ಲರೂ ಸಹ ಉಪಯೋಗಿಸಬೇಕು ಎಂಬ ಉದ್ದೇಶದಿಂದ ವಿವಿಧ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.
‘ಪಿಎಂ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಜೊತೆಗೂಡಿ ವಿಶೇಷ ಸೌಲಭ್ಯ ಕಲ್ಪಿಸುವ ಜತೆಗೆ ತರಬೇತಿ, ಹಣಕಾಸಿನ ಸೌಲಭ್ಯ ಒದಗಿಸಲಾಗುವುದು. ಸಹಾಯಧನ ನೀಡುವ ಜತೆಗೆ ಗೃಹಣಿಯಾಗಿದ್ದವರನ್ನೂ ಉದ್ಯಮಿಯನ್ನಾಗಿ ಮಾಡುವ ಮಹತ್ತರವಾದ ಕೆಲಸ ನಡೆಯುತ್ತಿದೆ’ ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಮಾತನಾಡಿ, ‘ಸಾಂಪ್ರದಾಯಿಕವಾಗಿ ರೂಪಿಸಿದ ಕಿರುಉದ್ದಿಮೆಗಳನ್ನು ಮುನ್ನೆಲೆಗೆ ತರಬೇಕು ಎಂಬ ಉದ್ದೇಶದಿಂದ 2010ರಲ್ಲಿ ಆತ್ಮನಿರ್ಭರ ಯೋಜನೆಯ ಮೂಲಕ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ₹ 10 ಲಕ್ಷ ಸಹಾಯಧನ ಕೊಡುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಉದ್ಯಮದಲ್ಲಿ ತೊಡಗಿರುವ ಮಹಿಳೆಯರಿಗೆ ಬಲತುಂಬುವ ನಿಟ್ಟಿನಲ್ಲಿ ಕ್ರಮವಹಿಸಿದೆ’ ಎಂದರು.
‘ಯೋಜನೆಯಡಿ ಕೇಂದ್ರ ಸರ್ಕಾರ ₹ 10,000 ಕೋಟಿ ವಿನಿಯೋಗ ಮಾಡಿದೆ. ಇದರ ಜೊತೆಗೆ ರಾಜ್ಯ ಸರ್ಕಾರವು ಶೇ 50ರಷ್ಟು ರಿಯಾಯಿತಿ ದರದಲ್ಲಿ ₹ 18 ಲಕ್ಷ ಸಹಾಯಧನ ನೀಡಿ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಬಲಪಡಿಸುವ ಕೆಲಸ ಮಾಡಿದೆ. ರಾಜ್ಯದಲ್ಲಿ 6,700ಕ್ಕೂ ಹೆಚ್ಚು ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 132 ಫಲಾನುಭವಿಗಳಿದ್ದು, ₹ 2.41 ಕೋಟಿ ಕೇಂದ್ರ ಸರ್ಕಾರದ ಸಹಾಯಧನ, ₹ 3.56 ಕೋಟಿ ರಾಜ್ಯ ಸರ್ಕಾರ ಸಹಾಯಧನ ಪಡೆದಿದ್ದಾರೆ’ ಎಂದರು.
ಪ್ರದರ್ಶನ ಮಳಿಗೆಗಳಿಗೆ ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ಉದ್ಘಾಟಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಆರ್.ಮಹೇಶ್ವರಪ್ಪ, ಉಪಾಧ್ಯಕ್ಷ ಧರಣೇಶ್, ತಾಲ್ಲೂಕು ಕೃಷಿಕ ಸಮಾಜದ ರಾಗಿ ಶಿವಮೂರ್ತಪ್ಪ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಪ್ರತಿನಿಧಿ ಚಂದ್ರಕುಮಾರ್, ನಬಾರ್ಡ್ ಪ್ರತಿನಿಧಿ ವಿನಂತ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ರಾಘವೇಂದ್ರ ಇದ್ದರು.
‘ನವೆಂಬರ್ 12ರಿಂದ 16ರವರೆಗೆ 5 ದಿನಗಳ ಕಾಲ ಚಿತ್ರದುರ್ಗದಲ್ಲಿ ಬೃಹತ್ ಸ್ವದೇಶಿ ಮೇಳ ನಡೆಯಲಿದೆ. ಕೇಂದ್ರ ಸರ್ಕಾರ ಎಂಎಸ್‍ಎಂಇ ಸಹಭಾಗಿತ್ವದಲ್ಲಿ ಮೇಳ ನಡೆಯಲಿದ್ದು 200ಕ್ಕೂ ಹೆಚ್ಚು ಸ್ವದೇಶಿ ವಸ್ತುಗಳ ಮಳಿಗೆ ಸ್ಥಾಪನೆ ಮಾಡಲಾಗುವುದು. ಇದರ ಸದುಪಯೋಗವನ್ನು ಜಿಲ್ಲೆಯ ಜನರು ಪಡೆಯಬೇಕು’ ಎಂದು ಕೆ.ಎಸ್.ನವೀನ್ ಹೇಳಿದರು. ‘ಸ್ವದೇಶಿ ವಸ್ತುಗಳ ಬಗ್ಗೆ ಸ್ವದೇಶಿ ಉತ್ಪಾದನೆಯ ಬಗ್ಗೆ ಸಾರ್ವನಿಕರು ಅರಿವು ಹೊಂದಬೇಕು. ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆಯೂ ಕೇಂದ್ರ ಸರ್ಕಾರ ಜಾಗೃತಿ ಮೂಡಿಸುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.