ADVERTISEMENT

ಕೋವಿಡ್ ವೇಳೆ ನೆರವಿಗೆ ಬಂದ ‘ಆಪ್ತಮಿತ್ರ’ರು

ಕಷ್ಟಕಾಲದಲ್ಲಿ ನೆರವಿಗೆ ನಿಂತ ಸ್ನೇಹ ಎಂಬ ಪವಿತ್ರ ಸಂಬಂಧ l ಸಹಾಯ ಮಾಡಿದವರನ್ನು ಸ್ಮರಿಸಿ ಭಾವುಕರಾದ ಸ್ನೇಹಿತರು

ಕೆ.ಎಸ್.ಪ್ರಣವಕುಮಾರ್
Published 1 ಆಗಸ್ಟ್ 2021, 2:02 IST
Last Updated 1 ಆಗಸ್ಟ್ 2021, 2:02 IST
ಟಿ. ಗುರುರಾಜ್
ಟಿ. ಗುರುರಾಜ್   

ಚಿತ್ರದುರ್ಗ: ಸ್ನೇಹ ಅತ್ಯಂತ ಪವಿತ್ರ ಸಂಬಂಧ. ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ರಾಜ–ಮಹಾರಾಜರು ಅಷ್ಟೇ ಅಲ್ಲದೆ, ಕಡುಬಡತನದಲ್ಲೂ ಸ್ನೇಹಿತರಿಗೆ ಸಹಾಯ ಮಾಡಿದ ನಿದರ್ಶನಗಳು ಸಾಕಷ್ಟು ಸಿಗುತ್ತವೆ. ಕೋವಿಡ್ ಎರಡನೇ ಅಲೆಯ ವೇಳೆಯಲ್ಲಿ ಸ್ನೇಹಿತರ ನೆರವಿಗೆ ನಿಂತ ಕೆಲ ಸ್ನೇಹಿತರು ಜಿಲ್ಲೆಯಲ್ಲಿ ಮಾದರಿಯಾಗಿದ್ದಾರೆ.

ಜೀವಕ್ಕೆ ಜೀವ ಕೊಡುವಂಥ ಸಾಕಷ್ಟು ಗೆಳೆಯ–ಗೆಳತಿಯರು ಇದ್ದಾರೆ. ಕೊರೊನಾ ಸೋಂಕು ತಗುಲಿದವರಿಗೆ ಜೀವ–ಭಯ ಬಿಟ್ಟು ಸಹಾಯಹಸ್ತ ಚಾಚುವ ಮೂಲಕ ಸ್ನೇಹಕ್ಕೆ ಇರುವ ಗೌರವ, ಸ್ಥಾನಮಾನ, ಆತಿಥ್ಯ ಎತ್ತಿಹಿಡಿದಿದ್ದಾರೆ.

ನೆರವು ಪಡೆದು ನೆರವಾದರು: ಕೊರೊನಾ ಸೋಂಕು ಕಾಣಿಸಿಕೊಂಡು ನೆರವು ಪಡೆದು ಗುಣಮುಖರಾದ ನಂತರ ಸೋಂಕು ತಗುಲಿದ ಸ್ನೇಹಿತರಿಗೆ, ಅವರ ಕುಟುಂಬದವರಿಗೆ ನೆರವು ನೀಡಿದ ನಿದರ್ಶನ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಸಿಗುತ್ತವೆ. ಅದಕ್ಕೆ ಉದಾಹರಣೆ ಇಲ್ಲಿಯ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ (ಕಂಪ್ಯೂಟರ್‌) ವಿಭಾಗದ ಎಚ್‌ಒಡಿ ಹಾಗೂ ಸಹ ಪಾಧ್ಯಾಪಕ ಟಿ. ಗುರುರಾಜ್.

ADVERTISEMENT

ಕೋವಿಡ್ ಎರಡನೇ ಅಲೆಯ ಆರಂಭದಲ್ಲೇ ಇವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಏಪ್ರಿಲ್ ತಿಂಗಳ ಕೊನೆಯ ವಾರದಿಂದ ಮೇ ತಿಂಗಳ ಎರಡನೇ ವಾರದವರೆಗೂ ಮನೆಯಲ್ಲಿಯೇ ಚಿಕಿತ್ಸೆ ಪಡೆದರು. ತಾಯಿ, ಪತ್ನಿ, ಮಗುವಿದ್ದು ಮೂವರಿಂದ ಗುಣಮುಖ ಆಗುವವರೆಗೂ ದೂರ ಉಳಿದರು. ಈ ವೇಳೆ ಕ್ರೀಡಾ ಸಾಮಗ್ರಿ ಅಂಗಡಿಯೊಂದರ ಮಾಲೀಕ ವಿ. ರಘು, ಪ್ರದೀಪ್‌ ಎಂಬುವರು ಔಷಧ ಸೇರಿ ಅಗತ್ಯ ವಸ್ತುಗಳನ್ನು ಸ್ನೇಹಿತರ ಮನೆಗೆ ತಲುಪಿಸುವ ಕೆಲಸ ಮಾಡಿ ನೆರವಿಗೆ
ನಿಂತರು.

ಗುಣಮುಖರಾದ ಬಳಿಕ ಸ್ನೇಹಿತರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸಿದ್ದಾರೆ. ಆಪ್ತಮಿತ್ರರಿಗೆ ಸೋಂಕು ಕಾಣಿಸಿಕೊಂಡಲ್ಲಿ ಆಹಾರದ ಪೊಟ್ಟಣ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಆಹಾರ ಕಿಟ್‌ ವಿತರಿಸುವ ಸಂಘ–ಸಂಸ್ಥೆಗಳಿಗೆ ಒಂದಿಷ್ಟು ಸಹಾಯಧನ ನೀಡಿ ಮಾನವೀಯತೆ ಮೆರೆದಿದ್ದಾರೆ.

ನನ್ನ ಪಾಲಿನ ಆಪ್ತಮಿತ್ರರು: ಇಲ್ಲಿಯ
ಫಿಲ್ಟರ್‌ ಹೌಸ್‌ ರಸ್ತೆಯ ಭುವನಾ
ಎಂಬುವವರು ಕೂಡ ಕೊರೊನಾ ಸೋಂಕು ತಗುಲಿ ನೋವು ಅನುಭವಿಸಿದ್ದಾರೆ.
ಲಾಕ್‌ಡೌನ್‌ ಅವಧಿಯಲ್ಲಿ ಬಾಡಿಗೆ ಆಟೊಗಳ ಸಂಚಾರ ತುಂಬಾ ವಿರಳವಾಗಿತ್ತು. ಸಮಯಕ್ಕೆ ಸರಿಯಾಗಿ ಬಾಡಿಗೆ ವಾಹನಗಳು ಸಿಗುತ್ತಿರಲಿಲ್ಲ. ಈ ವೇಳೆ ಆಸ್ಪತ್ರೆಗೆ ಕರೆದೊಯ್ಯಲು, ಪುನಃ ಮನೆಗೆ ಕರೆದುಕೊಂಡು ಬರಲು ಸ್ನೇಹಿತರಾದ ಕಾರ್ತಿಕ್, ಅನಂತ್‌, ಆರ್ಯವೈಶ್ಯ ಸಂಘದ ವೆಂಕಟೇಶ್‌ ತಮ್ಮ ವಾಹನಗಳನ್ನೇ ಕಳುಹಿಸಿಕೊಡುವ ಮೂಲಕ ಇವರ ಪಾಲಿಗೆ ಆಪ್ತಮಿತ್ರರಾಗಿದ್ದಾರೆ.

ಇಷ್ಟೇ ಅಲ್ಲದೆ, ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ತಿಂಡಿ–ಊಟವನ್ನು ಕಳುಹಿಸಿಕೊಟ್ಟಿದ್ದಾರೆ. ಜತೆಗೆ ಔಷಧಗಳನ್ನು ತಲುಪಿಸಿ ಗೆಳೆತನದ ಮಹತ್ವ ಸಾರಿದ್ದಾರೆ. ಕೋವಿಡ್ ಸಂದಿಗ್ಧ ಪರಿಸ್ಥಿರಿಯಲ್ಲಿ ಸಹಾಯಹಸ್ತ ಚಾಚಿದ ಸ್ನೇಹಿತರನ್ನು ನೆನಪಿಸಿಕೊಳ್ಳುವ ಮೂಲಕ ಭಾವುಕರಾಗಿದ್ದಾರೆ.

ಸ್ನೇಹಿತನ ಆರೈಕೆಯಲ್ಲಿ ಸ್ನೇಹದ ಮಿಡಿತ

ಎಸ್. ಸುರೇಶ್ ನೀರಗುಂದ

ಹೊಸದುರ್ಗ: ಕೋವಿಡ್ ಸೋಂಕು ತಗುಲಿದಾಗ ಸ್ನೇಹಿತನ ಆರೈಕೆಗೆ ಮಿಡಿದ ಸ್ನೇಹದ ಹಲವು ನಿದರ್ಶನಗಳು ತಾಲ್ಲೂಕಿನಲ್ಲಿ ಸಿಗುತ್ತವೆ.

ಅದರಲ್ಲಿ ತಾಲ್ಲೂಕಿನ ಮಾವಿನಕಟ್ಟೆ ಗ್ರಾಮದ ಚಂದ್ರಶೇಖರ್‌ಗೆ ಕೊರೊನಾ ಪಾಸಿಟಿವ್ ಬಂದಾಗ ಅವರನ್ನು ಗುಣಮುಖರನ್ನಾಗಿಸಲು ಸ್ನೇಹಿತ ಮಲ್ಲಿಕಾರ್ಜುನ್ ಆಸರೆಯಾಗಿದ್ದು, ಒಂದು ನಿದರ್ಶನ.

ಚಂದ್ರಶೇಖರ್ ಪಟ್ಟಣದ ಕಾಲೇಜು ಒಂದರಲ್ಲಿ ಬಿ.ಇಡಿ ತರಬೇತಿ ಪಡೆಯುತ್ತಿದ್ದರು. ಕೋವಿಡ್–ಲಾಕ್‌ಡೌನ್ ಕಾರಣದಿಂದ ಕಾಲೇಜಿಗೆ ರಜೆ ಇದ್ದಿದ್ದರಿಂದ ಕೃಷಿ ಕೆಲಸ ಮಾಡಿಕೊಂಡು ಊರಲ್ಲಿದ್ದರು. ಅವರ ಅಜ್ಜಿಗೆ ಕೊರೊನಾ ಸೋಂಕು ತಗುಲಿ ಚಿತ್ರದುರ್ಗದ ಆಸ್ಪತ್ರೆಯಲ್ಲಿ ಮೃತಪಟ್ಟರು.

‘ಈ ಘಟನೆಯಿಂದ ಕುಟುಂಬ ಸದಸ್ಯರೆಲ್ಲರೂ ಭಯ ಪಟ್ಟರು. ನಂತರ ಸ್ನೇಹಿತ ಚಂದ್ರಶೇಖರ್‌ಗೆ ಶೀತ, ತಲೆನೋವು, ಜ್ವರದಂತಹ ಲಕ್ಷಣಗಳು ಕಾಣಿಸಿದವು. ಆಗ ಗಾಬರಿಗೊಂಡ ಸ್ನೇಹಿತ ನನ್ನ ಬಳಿ ಸಮಸ್ಯೆ ಹೇಳಿಕೊಂಡ. ನಾನು ತಕ್ಷಣ ಆತನನ್ನು ಬೆಲಗೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟಿವ್ ಬಂದಿತ್ತು. ಇದರಿಂದ ಆತನಲ್ಲಿ ಆತಂಕ ಹೆಚ್ಚಾಯಿತು.’

‘ಪಾಸಿಟಿವ್ ಬಂದವರು ಊರೊಳಗೆ ಬರಬಾರದು ಎಂದು ಗ್ರಾಮದ ಕೆಲವರು ತಿಳಿಸಿದರು. ಆಗ ಆತನಿಗೆ ಇನ್ನಷ್ಟು ಭಯ ಹೆಚ್ಚಾಯಿತು. ಯಾರು ಏನೇ ಅಂದುಕೊಳ್ಳಲಿ ನಿನ್ನ ಜೀವಕ್ಕೆ ಏನೂ ಆಗಲ್ಲ. ಆರಾಮವಾಗಿರು. ನಿನ್ನನ್ನು ಗುಣಮುಖನನ್ನಾಗಿಸಲು ಬೇಕಾದ ಚಿಕಿತ್ಸೆಗೆ ವ್ಯವಸ್ಥೆ ನಾನು ಮಾಡುತ್ತೇನೆ ಎಂದು ಧೈರ್ಯ ಹೇಳಿ, ಸ್ನೇಹಿತನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆನು’ ಎಂದು ಮಲ್ಲಿಕಾರ್ಜುನ್‌ ತಿಳಿಸಿದರು.

‘ತೋಟದ ಮನೆಯಲ್ಲಿ ಹೋಂ ಕ್ವಾರಂಟೈನ್ ಮಾಡಿ ಅಗತ್ಯ ಚಿಕಿತ್ಸೆ, ಸಮಯಕ್ಕೆ ಸರಿಯಾಗಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ಸಂಜೆ ಊಟದ ವ್ಯವಸ್ಥೆ ಮಾಡಲಾಯಿತು. ಈ ಕ್ರಮದಿಂದ 8 ದಿನಗಳಿಗೆ ಗುಣಮುಖನಾದ ಸ್ನೇಹಿತ ನಗೆ ಬೀರಿದ. ಆಗ ನನಗೂ ಸ್ನೇಹಿತನನ್ನು ಆರೈಕೆ ಮಾಡಿದ ಸಂತೋಷ ಹೆಚ್ಚಾಯಿತು’ ಎಂದು ಮಲ್ಲಿಕಾರ್ಜುನ್ ವಿವರಿಸಿದರು.

...

ಕೋವಿಡ್‌ ವೇಳೆ ಜೀವಕ್ಕೂ ಅಂಜದೇ ಸ್ನೇಹಿತರ ಮನೆ ಬಾಗಿಲಿಗೆ ತಿಂಡಿ, ಊಟ, ಔಷಧ ತಲುಪಿಸುವ ಕೆಲಸ ನಾನು ಮಾತ್ರವಲ್ಲ. ನನ್ನಂತೆ ಅನೇಕ ಸ್ನೇಹಿತರು ಮಾಡಿದ್ದಾರೆ. ಜೀವ ಇರುವವರೆಗೂ ಸ್ನೇಹ ಎಂಬುದು ಬಿಡಿಸಲಾಗದ ನಂಟು.

-ಕಾರ್ತಿಕ್‌, ಪಕ್ಷಿ ಪ್ರೇಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.