ADVERTISEMENT

ಚಿತ್ರದುರ್ಗ: ನಾಳೆಯಿಂದ ಫಲ-ಪುಷ್ಪ ಪ್ರದರ್ಶನ

ಐತಿಹಾಸಿಕ ಉಯ್ಯಾಲೆ ಕಂಬ, ಗಂಧದ ಗುಡಿ, ಕಾಂತಾರ ಕಲಾಕೃತಿ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 4:49 IST
Last Updated 9 ಫೆಬ್ರುವರಿ 2023, 4:49 IST
ಚಿತ್ರದುರ್ಗದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಫಲಪುಷ್ಪ ಪ್ರದರ್ಶಜನಕ್ಕೆ ನಡೆದ ಸಿದ್ಧತೆ.
ಚಿತ್ರದುರ್ಗದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಫಲಪುಷ್ಪ ಪ್ರದರ್ಶಜನಕ್ಕೆ ನಡೆದ ಸಿದ್ಧತೆ.   

ಚಿತ್ರದುರ್ಗ: ಇಲ್ಲಿನ ಜಿಲ್ಲಾ ತೋಟಗಾರಿಕಾ ಕಚೇರಿ ಆವರಣದಲ್ಲಿ ಫೆ.10ರಿಂದ 12ರವರೆಗೆ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಬಣ್ಣ–ಬಣ್ಣದ ಹೂಗಳಲ್ಲಿ ಚಿತ್ರದುರ್ಗದ ಇತಿಹಾಸದ ಮೆರುಗನ್ನು ಸ್ಥಳೀಯ ಕಲಾವಿದರ ಕೈಚಳಕದಲ್ಲಿ ಕಟ್ಟಿಕೊಡಲಾಗುತ್ತಿದೆ.

‘ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಫಲ-ಪುಷ್ಪ ಪ್ರದರ್ಶನಕ್ಕೆ ಮತ್ತೆ ಚಾಲನೆ ದೊರೆತಿದೆ. ವಿವಿಧ ಜಾತಿಯ ಹೂ, ಹಣ್ಣು, ತರಕಾರಿ ಮತ್ತು ಹಲವು ಬಗೆಯ ಅಲಂಕಾರಿಕ ಗಿಡಗಳು ಕಣ್ಮನ ಸೆಳೆಯಲಿವೆ. ಇಕೆಬಾನ, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಜತೆಗೆ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ, ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ದಿವಾಕರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಐತಿಹಾಸಿಕ ಗಾಳಿ ಗೋಪುರ ಮತ್ತು ಉಯ್ಯಾಲೆ ಕಂಬ, ಗಿಡ ಮರ, ಪ್ರಾಣಿ ಪಕ್ಷಿಗಳ ಸಂರಕ್ಷಣೆಯ ಪರಿಕಲ್ಪನೆಯೊಂದಿಗೆ ‘ಗಂಧದ ಗುಡಿ’ ಹಾಗೂ ‘ಕಾಂತಾರ’ ಚಲನಚಿತ್ರದ ಕಲಾಕೃತಿಗಳು ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿವೆ. ಸಿದ್ಧೇಶ್ವರ ಸ್ವಾಮೀಜಿ, ತರಕಾರಿ ಮನೆ ಹಾಗೂ ಹಳ್ಳಿಯ ಸೊಗಡು, ಮತದಾನ ಜಾಗೃತಿ ಕುರಿತ ಕಲಾಕೃತಿಗಳು ಸಹ ಫಲ-ಪುಷ್ಪ ಪ್ರದರ್ಶನದಲ್ಲಿ ಇರಲಿವೆ. ಮಕ್ಕಳಿಗಾಗಿ ನೀತಿ ಕತೆ ಹಾಗೂ ಕಾರ್ಟೂನ್ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ಪುಷ್ಪ ಜೋಡಣೆಗೆ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ 50ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಆರ್ಕಿಡ್ಸ್, ಕಾರ್ನೇಶನ್, ಕಾಕ್ಸ್ ಕೂಂಬ್, ಸೆಲೋಶಿಯಾ, ಪ್ಲಾಕ್ಸ್, ಗಾಕ್ಸೀನಿಯ, ಕಲಂಚಾ, ಲಿಲ್ಲಿಸ್, ಇಂಪೇಷನ್ಸ್, ಡೇಲಿಯಾ, ಸಾಲ್ವಿಯಾ (ಕೆಂಪು, ನೀಲಿ ಕೇಸರಿ, ಬಿಳಿ) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಸೇವಂತಿ ಪುಷ್ಪಗಳು ಮುದ ನೀಡಲಿವೆ’ ಎಂದು ಹೇಳಿದರು.

‘ಹಣ್ಣು ಮತ್ತು ತರಕಾರಿ, ತೆಂಗಿನ ಚಿಪ್ಪಿನ ಕೆತ್ತನೆಯ ಕಲಾಕೃತಿ ಪ್ರದರ್ಶನವೂ ಇರಲಿದೆ. ತೋಟಗಾರಿಕೆ ಇಲಾಖೆ ಯೋಜನಗಳ ಕುರಿತಾದ ಮಾಹಿತಿ ಸಹ ದೊರೆಯಲಿದೆ. ಪ್ರದರ್ಶನದ ಅಂಗವಾಗಿ ಜನಪದ ಹಾಗೂ ಭಾವಗೀತೆ ಸ್ಪರ್ಧೆ, ಚಿತ್ರಕಲಾ ಸ್ಟರ್ಧೆ, ಪ್ರಬಂಧ ಸ್ಪರ್ಧೆ, ಹಣ್ಣು ಮತ್ತು ಹೂ ತರಕಾರಿಗಳನ್ನು ಬಳಸಿ ಫ್ಯಾನ್ಸಿ ಡ್ರಸ್ಸ್ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಚಿಕ್ಕ ಮಕ್ಕಳಿಗೆ ಹಣ್ಣು ಮತ್ತು ತರಕಾರಿಗಳ ಗುರುತಿಸುವ ಸ್ಪರ್ಧೆ, ತರಕಾರಿ ಕೆತ್ತನೆ, ಹೂ ಜೋಡಣೆ ಸ್ಪರ್ಧೆ, ಬೋನ್ಸಾಯ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಜಿ.ಸವಿತ, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಸುಜಯ್ ಶಿವಪ್ರಕಾಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ದೇವರಾಜು ಇದ್ದರು.

ರೈತರ ಯೋಶೋಗಾಥೆ, ಪ್ರೇರಣೆ ಹಾಗೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚಿಸುವುದು ಇದರ ಉದ್ದೇಶ. ತಾರಸಿ ತೋಟ, ಹಿತ್ತಲ ತೋಟ ಬೆಳೆಸಲು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು.

ಎಂ.ಎಸ್.ದಿವಾಕರ, ಸಿಇಒ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.