ADVERTISEMENT

ಸತ್ಯ, ಅಹಿಂಸೆಯ ಪ್ರಬಲ ಪ್ರತಿಪಾದಕ ಗಾಂಧಿ

ಗಾಂಧೀಜಿ, ಶಾಸ್ತ್ರೀಜಿ ಜಯಂತಿ; ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 6:02 IST
Last Updated 3 ಅಕ್ಟೋಬರ್ 2025, 6:02 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಾತ್ಮ ಗಾಂಧೀಜಿ, ಲಾಲ್‌ಬಹದ್ದೂರ್‌ ಶಾಸ್ತ್ರಿ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪುಷ್ಪನಮನ ಸಲ್ಲಿಸಿದರು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಾತ್ಮ ಗಾಂಧೀಜಿ, ಲಾಲ್‌ಬಹದ್ದೂರ್‌ ಶಾಸ್ತ್ರಿ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪುಷ್ಪನಮನ ಸಲ್ಲಿಸಿದರು   

ಚಿತ್ರದುರ್ಗ: ‘ಸತ್ಯ ಹಾಗೂ ಅಹಿಂಸೆ ತತ್ವಗಳ ಪ್ರಬಲ ಪ್ರತಿಪಾದಕರಾಗಿರುವ ಮಹಾತ್ಮ ಗಾಂಧೀಜಿ ಬ್ರಿಟಿಷರ ವಿರುದ್ಧ ಶಾಂತಿಯುತವಾಗಿ ಹೋರಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಕೂಡ ನ್ಯಾಯದ ಹಾದಿಯಲ್ಲಿ ಸಮಾಜಕ್ಕೆ ಸಂದೇಶ ನೀಡಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗಾಂಧೀಜಿಯವರ ಜೀವನವೇ ನಮಗೆಲ್ಲ ಸಂದೇಶವಾಗಿದೆ. ಸತ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಗಾಂಧೀಜಿಯವರು ನಡೆಸಿದ ಪ್ರಯತ್ನವನ್ನು ಅವರ ಆತ್ಮಕಥನದಲ್ಲಿ ನಾವು ಕಾಣಬಹುದು. ಹೋರಾಟದ ಜೊತೆಗೆ ವೈಯಕ್ತಿಕವಾಗಿ ಎದುರಿಸಿದ ಸಲಾಲು, ದೌರ್ಬಲ್ಯಗಳ ಬಗ್ಗೆ ಆತ್ಮಚರಿತ್ರೆಯಲ್ಲಿ ನಿರ್ಭಯದಿಂದ ಹೇಳಿಕೊಂಡಿದ್ದಾರೆ. ನಾವೆಲ್ಲರೂ ಗಾಂಧೀ ಮಾರ್ಗದಲ್ಲಿ ಸಾಗಿದರೆ ನೈತಿಕವಾಗಿ ಬಲಗೊಳ್ಳಬಹುದು’ ಎಂದರು.

ADVERTISEMENT

‘ಪ್ರಸ್ತುತ ಜಗತ್ತಿನಾದ್ಯಂತ ಹಿಂಸೆ ತಾಂಡವವಾಡುತ್ತಿದೆ. ಯುವ ಜನತೆ ಭ್ರಮಾಲೋಕದಲ್ಲಿದ್ದಾರೆ. ಸತ್ಯ ಸಂಗತಿಗಳಿಂದ ದೂರವಾಗಿದ್ದಾರೆ. ಓದು ಎನ್ನುವುದು ಕೇವಲ ಕೆಲಸ ಗಿಟ್ಟಿಸಿಕೊಳ್ಳುವ ಮಾರ್ಗವಾಗಿದೆ. ಯುವ ಜನತೆ ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಮಾರ್ಗದಲ್ಲಿ ಸಾಗಬೇಕು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವ್ಯಕ್ತಿತ್ವ ಮಹೋನ್ನತವಾದುದು. ಶಾಸ್ತ್ರಿ ಅವರ ಪ್ರಾಮಾಣಿಕತೆ ಹಾಗೂ ಕರ್ತವ್ಯಪರತೆ ಮಾದರಿಯಾದುದು’ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಎಚ್.ಗುಡ್ಡದೇಶ್ವರಪ್ಪ ಉಪನ್ಯಾಸ ನೀಡಿ, ‘ನಾವು ಯಾವುದೇ ಕೆಲಸ, ಸೇವೆ ಮಾಡಬೇಕಾದರೆ ವಾಸ್ತವಿಕ ನೆಲೆಗಟ್ಟಿನ ಆಧಾರದ ಮೇಲೆ ಇರಬೇಕು. ವಾಸ್ತಾವಿಕತೆಯನ್ನು ನಾವು ಗಾಂಧೀಜಿಯವರಿಂದ ಕಲಿತುಕೊಳ್ಳಬೇಕಿದೆ. ಶೋಷಣೆ, ವರ್ಣವ್ಯವಸ್ಥೆಯಿಂದ ನಲುಗಿಹೋಗಿದ್ದ ರೈತರ ಹಾಗೂ ಶೋಷಿತರ ಅಂತರಾಳವನ್ನು ಕಂಡುಕೊಳ್ಳುವ ಪ್ರಯತ್ನಪಟ್ಟ ಅವರು, ಸತ್ಯವನ್ನೇ ದೇವರು ಎಂದು ಅರಿತು ಅಹಿಂಸಾ ಮಾರ್ಗದಲ್ಲೇ ಸಾಗಿದರು’ ಎಂದು ತಿಳಿಸಿದರು. 

‘ಗಾಂಧೀಜಿಯವರ ಆಲೋಚನೆಗಳು, ಚಿಂತನೆಗಳು ಬಹಳ ಶ್ರೇಷ್ಠತೆಯಿಂದ ಕೂಡಿವೆ. ಗಾಂಧೀಜಿಯವರು ಅವರ ದೌರ್ಬಲ್ಯಗಳನ್ನು ಸಹ ಬಹಿರಂಗ ಪಡಿಸುವ ಮೂಲಕ ಆತ್ಮವಿಮರ್ಶೆ ಮಾಡಿಕೊಂಡಿದ್ದರು. ಗಾಂಧೀಜಿಯವರು ನಾಯಕರಷ್ಟೇ ಅಲ್ಲದೇ ನಾಯಕರನ್ನು ಬೆಳೆಸಿದವರು. ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೇ ಜಾಗತಿಕ ಮಟ್ಟದಲ್ಲಿಯೂ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಸೇರಿದಂತೆ ಹಲವು ನಾಯಕರು ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದಾರೆ’ ಎಂದರು.

ಬಹುಮಾನ ವಿತರಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ್ಯ ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ನಗರಸಭೆ ಅಧ್ಯಕ್ಷೆ ಎಂ.ಪಿ. ಅನಿತಾ, ಉಪಾಧ್ಯಕ್ಷೆ ಶಕೀಲಾಬಾನು, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಂಗಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್, ನಗರಸಭೆ ಆಯುಕ್ತೆ ಎಸ್‌.ಲಕ್ಷ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.