ADVERTISEMENT

ಗಣೇಶೋತ್ಸವದಲ್ಲಿ ರಾತ್ರಿಯಿಡೀ ಕುಣಿದರೆ ಜನರಿಗೆ ತೊಂದರೆ: ಸಚಿವ ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 7:49 IST
Last Updated 9 ಸೆಪ್ಟೆಂಬರ್ 2025, 7:49 IST
ಡಿ.ಸುಧಾಕರ್‌
ಡಿ.ಸುಧಾಕರ್‌   

ಚಿತ್ರದುರ್ಗ: ‘ಗಣೇಶೋತ್ಸವವನ್ನು ಧಾರ್ಮಿಕವಾಗಿ ಆಚರಣೆ ಮಾಡಿದರೆ ಯಾರಿಗೂ ತೊಂದರೆಯಾಗುವುದಿಲ್ಲ. ಆದರೆ ಉತ್ಸವದ ಹೆಸರಿನಲ್ಲಿ ರಾತ್ರಿಯಿಡೀ ಕುಣಿದುಕೊಂಡಿದ್ದರೆ ಜನರಿಗೆ ತೊಂದರೆಯಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು.

ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿರುವ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಾರಿ ಗಣೇಶೋತ್ಸವದ ವೇಳೆ ಡಿ.ಜೆಗೆ ಅವಕಾಶ ನೀಡುವುದಿಲ್ಲ. ಡಿ.ಜೆ ಬಳಕೆ ಮಾಡಿದರೆ ಶಬ್ಧ ಮಾಲಿನ್ಯದಿಂದ ಜನರು ಕಿವುಡರಾಗುತ್ತಾರೆ, ಹೃದಯಾಘಾತವಾಗುತ್ತದೆ. ಹೀಗಾಗಿ ಡಿ.ಜೆ ಬಳಕೆ ನಿಷೇಧ ಮಾಡಿರುವುದು ಒಳ್ಳೆಯದು’ ಎಂದರು. 

‘ಸೆ.13ರಂದು ನಗರದಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ 4 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಕಿರಿದಾದ ರಸ್ತೆಗಳಲ್ಲಿ ಸೇರುವ ಜನಸಂದಣಿಯಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಇದನ್ನು ಸ್ವಚ್ಛಗೊಳಿಸಲು ನಗರಸಭೆ ಸಿಬ್ಬಂದಿಗೆ 14 ದಿನ ಬೇಕಾಗುತ್ತದೆ. ನಮ್ಮ ಜಿಲ್ಲೆಯ ಜನರು ಮಾತ್ರವಲ್ಲದೇ ಬೇರೆ ಜಿಲ್ಲೆಯ ಜನರೂ ಬಂದು ಸೇರುತ್ತಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು. 

ADVERTISEMENT

‘ಗಣೇಶೋತ್ಸವವನ್ನು ಸಾಂಸ್ಕೃತಿಕವಾಗಿ ಆಚರಣೆ ಮಾಡಬೇಕು. ಡೊಳ್ಳುಕುಣಿತ, ಕೋಲಾಟ, ಜಾನಪದ ಹಾಡುಗಳ ಮೂಲಕ ಗಣೇಶ ಮೂರ್ತಿಯನ್ನು ಮೆರವಣಿಗೆ ಮಾಡಬೇಕು. ಇದನ್ನು ಬಿಟ್ಟು ರಾತ್ರಿಯಿಡೀ, ಬೆಳಿಗ್ಗೆ 4 ಗಂಟೆವರೆಗೂ ಕುಣಿಯುತ್ತಾ ಉತ್ಸವ ಮಾಡಿದರೆ ಎಲ್ಲರಿಗೂ ತೊಂದರೆಯಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.