ADVERTISEMENT

ಚಿತ್ರದುರ್ಗ: ಓಂಕಾರ ಗಣಪತಿಯೆ ಕೋಟಿ ವಂದನೆ...

ಮಂಗಳವಾರ ಮನೆ ತುಂಬಿದ ಸ್ವರ್ಣಗೌರಿ; ಪೆಂಡಾಲ್‌ಗಳಲ್ಲಿ ಆಕರ್ಷಕ ಅಲಂಕಾರ

ಕೆ.ಪಿ.ಓಂಕಾರಮೂರ್ತಿ
Published 27 ಆಗಸ್ಟ್ 2025, 5:19 IST
Last Updated 27 ಆಗಸ್ಟ್ 2025, 5:19 IST
<div class="paragraphs"><p>ಚಿತ್ರದುರ್ಗದ ಆನೆಬಾಗಿಲು ರಸ್ತೆಯಲ್ಲಿ ಗಣೇಶ ಮೂರ್ತಿ ಖರೀದಿ ಸಂಭ್ರಮದಲ್ಲಿ ಜನರು&nbsp;</p></div>

ಚಿತ್ರದುರ್ಗದ ಆನೆಬಾಗಿಲು ರಸ್ತೆಯಲ್ಲಿ ಗಣೇಶ ಮೂರ್ತಿ ಖರೀದಿ ಸಂಭ್ರಮದಲ್ಲಿ ಜನರು 

   

ಪ್ರಜಾವಾಣಿ ಚಿತ್ರಗಳು: ವಿ.ಚಂದ್ರಪ್ಪ

ಚಿತ್ರದುರ್ಗ: ‘ಜಿಲ್ಲೆಯಾದ್ಯಂತ ಕೆರೆಕಟ್ಟೆಗಳಲ್ಲಿ ಜೀವ ಜಲ ನಳನಳಿಸುತ್ತಿದ್ದು, ಪ್ರಕೃತಿಯೂ ಹಸಿರ ಸೀರೆಯುಟ್ಟು ಗೌರಿ-ಗಣೇಶ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಮಂಗಳವಾರವೇ ಮನೆ–ಮನಗಳಿಗೆ ಗೌರಿಯ ಆಗಮನವಾಗಿದ್ದು, ವಿಘ್ನ ನಿವಾರಕನ ಪೂಜೆಗೆ ಕ್ಷಣಗಣನೆ ಶುರುವಾಗಿದೆ. 

ADVERTISEMENT

ಕಳೆದೊಂದು ವಾರದಿಂದ ಹಬ್ಬದ ಸಿದ್ಧತೆಗಳು ಬಿರುಸು ಪಡೆದಿದ್ದು, ಜನರು ಮಂಗಳವಾರ ಗೌರಿಯನ್ನು ಸ್ವಾಗತಿಸಿದರು. ರಾತ್ರಿ ಗಣೇಶನ ಪ್ರತಿಷ್ಠಾಪನೆಗೆ ಅಂತಿಮ ಹಂತದ ಸಿದ್ಧತೆ ನಡೆಸಿದರು.

ಸಂಜೆ ಮಳೆಯ ಆತಂಕದಲ್ಲಿದ್ದ ಜನರು ಮಾರುಕಟ್ಟೆಗೆ ಬೆಳಿಗ್ಗೆಯೇ ಆಗಮಿಸಿ ಪೂಜಾ ಸಾಮಗ್ರಿ ಖರೀದಿಸಿದರು. ಇದರಿಂದಾಗಿ ಗಾಂಧಿ ವೃತ್ತ, ಸಂತೆ ಹೊಂಡದ ರಸ್ತೆ, ಮೆದೇಹಳ್ಳಿ ರಸ್ತೆ, ಹೊಳಲ್ಕೆರೆ ರಸ್ತೆ, ಆನೆಬಾಗಿಲು, ಎಪಿಎಂಸಿ ಹೂವಿನ ಮಾರುಕಟ್ಟೆಯಲ್ಲಿ ಜನದಟ್ಟಣೆ ಉಂಟಾಗಿತ್ತು.

ಹೂವು, ಹಣ್ಣು, ಬಾಳೆ ಕಂದು, ಬಾಳೆ ಎಲೆ, ಮಾವಿನ ಎಲೆ, ತರಕಾರಿ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳ ಖರೀದಿ ಜೋರಾಗಿ ನಡೆಯಿತು. ಮೆದೇಹಳ್ಳಿ ರಸ್ತೆಯಲ್ಲಿ ಸಂಚಾರ ದಟ್ಟಣೆಯುಂಟಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಿದರು.

ಗಣಪನಿಗೆ ಅತ್ಯಂತ ಪ್ರಿಯವಾದ ಗರಿಕೆ ಹುಲ್ಲು, ತುಂಬೆ ಹೂ, ಪತ್ರೆ, ಎಕ್ಕೆ ಹೂವಿನ ಹಾರ, ವಿವಿಧ ಪುಷ್ಪ, ಹಣ್ಣುಗಳು, ಬಾಳೆ ಎಲೆ, ಮಾವಿನ ಎಲೆ, ಬಾಳೆ ದಿಂಡು ಸೇರಿ ಪೂಜೆಗೆ ಬಳಸುವ ಅಗತ್ಯ ಸಾಮಗ್ರಿಗಳ ಖರೀದಿ ಭರಾಟೆ ನಡೆಯಿತು. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿಗೆ ಹಾಕುವ ಹಾರ ₹ 200 ರಿಂದ ₹ 1,000, ಮಂಟಪಗಳಲ್ಲಿನ ವಿನಾಯಕನ ಮೂರ್ತಿಗಳಿಗೆ ₹ 1,000 ದಿಂದ ₹10,000 ದರ ಇತ್ತು. ಭಕ್ತರ ಅಭಿರುಚಿಗೆ ತಕ್ಕಂತೆ ಹಾರಗಳನ್ನು ಮಾರಾಟಗಾರರು ತಯಾರಿಸಿದ್ದರು.

ತೆಂಗಿನಕಾಯಿಗೆ ₹ 20ರಿಂದ ₹ 50, ಗರಿಕೆ ಜೋಡಿ ₹ 30, ವಿಳ್ಯೆದೆಲೆ ತಲಾ ಒಂದು ಕಟ್ಟಿಗೆ ₹ 120 ರಿಂದ ₹ 150, ಮಾವಿನ ಎಲೆ ಜೋಡಿ ₹ 50ರ ವರೆಗೂ ಮಾರಾಟವಾದವು. ಸೇಬು, ರಸಬಾಳೆ ಹಣ್ಣು, ಬಿಕ್ಕೆ ಹಣ್ಣು, ಮೋಸಂಬಿ, ದ್ರಾಕ್ಷಿ, ಮರಸೇಬು ಹಣ್ಣಿನ ದರ ಕೊಂಚ ಏರಿಕೆ ಕಂಡಿತ್ತು.

ವಿವಿಧ ರೂಪಗಳಲ್ಲಿ ಕಂಗೊಳಿಸುವ ವಿನಾಯಕನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆನೆಬಾಗಿಲು, ಚಿಕ್ಕಪೇಟೆ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಗೌರಿ–ಗಣೇಶ ಮೂರ್ತಿಗಳ ಮಾರಾಟ ಕಂಡುಬಂದವು. ಕುಟುಂಬ ಸಮೇತರಾಗಿ ಆಗಮಿಸಿದ ಜನರು ಗೌರಿ ಗಣೇಶ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ತೆಗೆದುಕೊಂಡು ಹೋದರೆ, ಕೆಲವರು ಮುಂಗಡ ಹಣ ಪಾವತಿಸಿ ಬುಧವಾರ ಬೆಳಿಗ್ಗೆ ಬರುವುದಾಗಿ ತಿಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲಂಕಾರಿಕ ವಸ್ತುಗಳು ವಿಶೇಷವಾಗಿ ಮಹಿಳೆಯರ ಗಮನ ಸೆಳೆದಿದ್ದರಿಂದ ಖರೀದಿಯಲ್ಲಿ ನಿರತರಾದರು.

ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆಯು ವಿವಿಧ ಬಗೆಯ ಪುಷ್ಪಗಳ ರಾಶಿಯಿಂದ ಭರ್ತಿಯಾಗಿತ್ತು. ಖರೀದಿಗಾಗಿ ಬೆಳಿಗ್ಗೆ 11ರಿಂದ ಸಂಜೆ 4ರ ವರೆಗೂ ಒಳಗೆ ಪ್ರವೇಶಿಸಲು ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿತ್ತು. ಮಾರುಕಟ್ಟೆಯಲ್ಲಿ ಗುಣಮಟ್ಟದ ಹಳದಿ, ಬಿಳಿ, ಕೆಂಪು, ನೇರಳೆ, ನೀಲಿ ಸೇರಿ ವಿವಿಧ ವರ್ಣದ ಸೇವಂತಿಗೆ ಹೂವು ಮಾರಾಟ ಜೋರಾಗಿತ್ತು. ಕನಕಾಂಬರ, ಕಾಕಡ, ಗುಲಾಬಿ (ಬಟನ್ಸ್‌) ಹೂಗಳನ್ನೂ ಜನರು  ಖರೀದಿಸಿದರು.

ಈ ಬಾರಿ ಗಣೇಶ ಮೂರ್ತಿಗಳ ದರ ಕೊಂಚ ಹೆಚ್ಚಳವಾಗಿದೆ. ತುಮಕೂರು, ಶಿರಾ, ತಿಪಟೂರು, ಹುಬ್ಬಳ್ಳಿ ಭಾಗದಿಂದ 30ಕ್ಕೂ ಹೆಚ್ಚು ಲೋಡ್‌ ಗಣಪತಿ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸಿವೆ. ನಿಷೇಧದ ನಡುವೆಯೂ ಪಿಒಪಿ ಗಣೇಶ ಮೂರ್ತಿಗಳನ್ನು ಆನೆಬಾಗಿಲು ಮಾರ್ಗದುದ್ದಕ್ಕೂ ಮಾರಾಟಗಾರರು ಸಾಲಾಗಿ ಇಟ್ಟು ಮಾರಾಟದಲ್ಲಿ ತೊಡಗಿದ್ದರು. ರಾಸಾಯನಿಕ ಬಣ್ಣಲೇಪಿತ ಮೂರ್ತಿಗಳು ಇದಕ್ಕೆ ಹೊರತಾಗಿರಲಿಲ್ಲ. 

ರಸ್ತೆ ಪಕ್ಕದಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲು ನಗರಸಭೆಗೆ ಜಕಾತಿ ಕಟ್ಟಬೇಕು. ಆದರೆ, ಮಳೆ ಬಂದರೆ ನಮ್ಮನ್ನು ಯಾರೂ ಕಾಪಾಡುವುದಿಲ್ಲ. ಜತೆಗೆ ರಾತ್ರಿ ವೇಳೆ ಮೂರ್ತಿ ಕಳವು ಸಾಮಾನ್ಯವಾಗಿದೆ ಎಂದು ಮೂರ್ತಿ ಮಾರಾಟಗಾರರು ಆತಂಕ ವ್ಯಕ್ತಪಡಿಸಿದರು.

ಚಿತ್ರದುರ್ಗದ ಜೈನಧಾಮದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಸಿದ್ಧತೆ ಪರಿಶೀಲಿಸಿದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಚಿತ್ರದುರ್ಗದ ಪಿಎನ್‌ಟಿ ಕ್ವಾಟ್ರಸ್‌ನ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಗೌರಿ ದೇವಿ ಮೂರ್ತಿ
ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಗೆ ಬಾಗಿನ ನೀಡುತ್ತಿರುವ ದೇವಸ್ಥಾನ ಸಮಿತಿ
ವಿಶೇಷ ಅಲಂಕಾರದಲ್ಲಿ ಮೇಲುದುರ್ಗದ ಏಕನಾಥೇಶ್ವರಿ ದೇವಿ
ಬಳೆ ಅಲಂಕಾರದಲ್ಲಿ ಬರಗೇರಮ್ಮ ದೇವಿ
ಅಲಂಕೃತ ಉಚ್ಚಂಗಿ ಯಲ್ಲಮ್ಮ ದೇವಿ
ಹಿಂದೂ ಮಹಾ ಗಣಪತಿ ಮಹೋತ್ಸವ ಮಧ್ಯ ಕರ್ನಾಟಕದ ಸಾಂಸ್ಕೃತಿಕ ಉತ್ಸವವಾಗಿದೆ. ದೇಶಕ್ಕೆ ಬಹು ದೊಡ್ಡ ಸಂದೇಶ ಕೊಡುವ ಶೋಭಾಯಾತ್ರೆ ನಡೆಯುತ್ತಿರುವುದು ನಮ್ಮೆಲ್ಲರಿಗೂ ಸಂತೋಷದ ಸಂಗತಿ
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾದಾರ ಚನ್ನಯ್ಯ ಗುರುಪೀಠ
25 ವರ್ಷದ ಪೂಜಾ ಮಹೋತ್ಸವದ ವಿಶೇಷತೆಗೆ ಕಮಲದಲ್ಲಿ ನಿಂತಿರುವ ಏಳು ಅಡಿ ಎತ್ತರದ ಗೌರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಆ.30 ರಂದು ಚಂದ್ರವಳ್ಳಿಯಲ್ಲಿ ಮೂರ್ತಿ ವಿಸರ್ಜಿಸಲಾಗುತ್ತದೆ. ಐದು ದಿನ ಮಹಿಳೆಯರಿಗೆ ಬಾಗಿನ ನೀಡಲಾಗುತ್ತದೆ
ಗುರುಮೂರ್ತಿ ಅಧ್ಯಕ್ಷ ಪಿಎನ್‌ಟಿ ಕ್ವಾಟ್ರಸ್‌ ಬೆನಕನ ಬಳಗ

‘ವಿಜಯದ ಸಂಕೇತದಲ್ಲಿ ಹಿಂದೂ ಮಹಾ ಗಣಪತಿ’:

‘ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಹಾಗೂ ಹಿಂದೂ ಮಹಾ ಗಣಪತಿ ಮಹೋತ್ಸವ ಸಮಿತಿ ಸಹಯೋಗದಲ್ಲಿ 18ನೇ ವರ್ಷದ ಹಿಂದೂ ಮಹಾ ಗಣಪತಿ ಮಹೋತ್ಸವಕ್ಕೆ ಜೈನಧಾಮದ ಆವರಣದಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಆ.27ರ ಬೆಳಿಗ್ಗೆ 10.55ಕ್ಕೆ ವಿದ್ಯುಕ್ತವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.  ‘ಗಣಪತಿ ಹಿಂಭಾಗದ ವೇದಿಕೆಗೆ ಸಿಂಧೂರ ವೇದಿಕೆ ಎಂದು ಹೆಸರಿಡಲಾಗಿದೆ. ಈ ಬಾರಿಯ ಮೂರ್ತಿ 18 ಅಡಿ ಎತ್ತರ ಇದೆ. ಸಾಗರದ ಕಲಾವಿದರ ತಂಡ ಮಂಟಪವನ್ನು ವೈಭವ ಪೂರ್ಣವಾಗಿ ಅಲಂಕಾರಗೊಳಿಸಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.  ‘18ನೇ ದಿನ ಶೋಭಾಯಾತ್ರೆ ನಡೆಸಲಾಗುತ್ತದೆ. ನಿತ್ಯ ಪೂಜೆಯ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಚಿಂತನಗೋಷ್ಠಿ ವಿವಿಧ ವಿಷಯಗಳ ಪ್ರವಚನ ಭಾಷಣ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಪ್ರತಿ ವರ್ಷಕ್ಕಿಂತ ಈ ವರ್ಷ ವಿಜೃಂಭಣೆಯಿಂದ ಶೋಭಾಯಾತ್ರೆ ನಡೆಯಲು ಸಮಿತಿಯವರು ವ್ಯವಸ್ಥೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು. ‘ರಾಜಸ್ಥಾನ ಮತ್ತು ಜೈಪುರ ಶೈಲಿಯ ಮಾದರಿಯಲ್ಲಿ ಮಂಟಪ ನಿರ್ಮಿಸಲಾಗಿದೆ. ಈ ಬಾರಿಯ ಮೂರ್ತಿಯು ಗಣಪತಿಯ 31ನೇ ಅವತಾರ ವಿಜಯ ಸಂಕೇತದ ಸ್ವರೂಪಿ. ಗಣಪತಿ ಜತೆ ಎರಡು ಹುಲಿಗಳಿವೆ. ಆ.28ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ’ ಎಂದು ಮಹೋತ್ಸವ ಸಮಿತಿ ಅಧ್ಯಕ್ಷ ಶರಣ್‌ ಕುಮಾರ್‌ ಮಾಹಿತಿ ನೀಡಿದರು.

ದೇವಸ್ಥಾನಗಳಲ್ಲಿ ಸಡಗರ ಸಂಭ್ರಮ:

  ಜಿಲ್ಲೆಯಾದ್ಯಂತ ಮಂಗಳವಾರ ಸಡಗರ ಸಂಭ್ರಮದಿಂದ ಸ್ವರ್ಣಗೌರಿ ಹಬ್ಬ ಆಚರಿಸಲಾಯಿತು. ನಗರದ ಪಿಎನ್‌ಟಿ ಕ್ವಾಟ್ರಸ್‌ ಗಣಪತಿ ದೇವಸ್ಥಾನದ ಆವರಣದಲ್ಲಿ ಕಮಲದಲ್ಲಿ ನಿಂತಿರುವ 7 ಅಡಿ ಎತ್ತರದ ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಮೇಲುದುರ್ಗದ ಏಕನಾಥೇಶ್ವರಿ ಉಚ್ಚಂಗಿ ಯಲ್ಲಮ್ಮ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ಕಣಿವೆ ಮಾರಮ್ಮ ತಿಪ್ಪಿನ ಘಟ್ಟಮ್ಮ ನೀಲಕಂಠೇಶ್ವರ ದೇವಸ್ಥಾನ ಜೆ.ಸಿ.ಆರ್‌ ಬಡಾವಣೆ ದೇವಸ್ಥಾನದಲ್ಲಿ ಗೌರಮ್ಮನ ಮಾದರಿಯ ಅಲಂಕಾರ ಮಾಡಲಾಗಿತ್ತು. ದೇಗುಲಗಳಲ್ಲಿ ಬಾಗಿನ ಕೊಡುವ ದೃಶ್ಯ ಸಾಮಾನ್ಯವಾಗಿತ್ತು. ನಗರದ ಜೋಗಿಮಟ್ಟಿ ರಸ್ತೆ ಕಾಮನಬಾವಿ ಬುರುಜನಹಟ್ಟಿ ನೆಹರುನಗರ ಜೆಸಿಆರ್‌ ಸೇರಿದಂತೆ ಬಡಾವಣೆಗಳಲ್ಲಿ ನಾಗರ ಕಲ್ಲಿಗೆ ಹಾಲೆರೆದು ಹಬ್ಬ ಆಚರಿಸಿದರು. ನೆರೆ-ಹೊರೆಯ ಮಹಿಳೆಯರನ್ನು ಪೂಜೆಗೆ ಆಹ್ವಾನಿಸಿ ಅರಿಶಿಣ ಕುಂಕುಮ ಎಲೆ-ಅಡಿಕೆ ಹೂವು-ಹಣ್ಣು ನೀಡಿ ಉಡಿ ತುಂಬಿದರು.

1783 ಕಡೆ ಗಣೇಶ ಪ್ರತಿಷ್ಠಾಪನೆ:

ಜಿಲ್ಲೆಯಲ್ಲಿ 1783 ಕಡೆ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ. ಇವುಗಳಲ್ಲಿ 7 ಅತೀ ಸೂಕ್ಷ್ಮ 95 ಸೂಕ್ಷ್ಮ 1681 ಸಾಮಾನ್ಯ ಗಣೇಶ ಪೆಂಡಾಲ್‌ಗಳು ಎಂದು ಗುರುತಿಸಲಾಗಿದೆ. ವಿಶ್ವ ಹಿಂದೂ ಪರಿಷತ್‌ ಮತ್ತು ಭಜರಂಗದಳ ಸಂಘಟನೆಯಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳ 7 ಸ್ಥಳಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಹುಲಿ ಸಿಂಹ ಹಂಸ ನವಿಲು ಶಿವ-ಪಾರ್ವತಿ ಆಪರೇಷನ್‌ ಸಿಂಧೂರ ಶ್ರೀಕೃಷ್ಣ ಕಮಲ ಸರ್ಪ ಇಲಿಯ ಮೇಲೆ ಕುಳಿತಿರುವ ಗಣೇಶ ಸೇರಿದಂತೆ ವಿವಿಧ ವಿನ್ಯಾಸಗಳ ಗಣೇಶ ಮೂರ್ತಿಗಳು ಭಕ್ತರನ್ನು ಆಕರ್ಷಿಸುತ್ತಿವೆ. ಗಣೇಶನ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಆಯಾ ಸಂಘ– ಸಂಸ್ಥೆಯವರು ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್ ಕುಮಾರ್‌ ಬಂಡಾರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.