ADVERTISEMENT

Ganesh Chaturthi: ಕೋಟೆನಾಡಿಗೆ ಬಂದ ಗಣಪತಿ; ಸುಸ್ವಾಗತ

ಬಿ.ಡಿ ರಸ್ತೆ ಮೈದಾನದಲ್ಲಿ ಅರಮನೆಯಂತಹ ಪೆಂಡಾಲ್‌, ಪುರ ಪ್ರವೇಶ ಮಾಡಿದ ಮೂರುತಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 7:57 IST
Last Updated 26 ಆಗಸ್ಟ್ 2025, 7:57 IST
ವಿಶ್ವ ಹಿಂದೂ ಪರಿಷತ್‌ ವತಿಯಿಂದ ಬಿ.ಡಿ ರಸ್ತೆಯ ಮೈದಾನದಲ್ಲಿ ನಡೆಯುವ ಗಣಶೋತ್ಸವಕ್ಕೆ ಅರಮನೆಯಂತಹ ವೇದಿಕೆ ಸಿದ್ಧಗೊಳ್ಳುತ್ತಿರುವುದು
ವಿಶ್ವ ಹಿಂದೂ ಪರಿಷತ್‌ ವತಿಯಿಂದ ಬಿ.ಡಿ ರಸ್ತೆಯ ಮೈದಾನದಲ್ಲಿ ನಡೆಯುವ ಗಣಶೋತ್ಸವಕ್ಕೆ ಅರಮನೆಯಂತಹ ವೇದಿಕೆ ಸಿದ್ಧಗೊಳ್ಳುತ್ತಿರುವುದು   

ಚಿತ್ರದುರ್ಗ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗಣೇಶ ಹಬ್ಬದ ಸಂಭ್ರಮ ಆರಂಭಗೊಂಡಿದ್ದು ಗೌರಿ, ಗಣೇಶ ಮೂರ್ತಿಗಳಿಗೆ ಸ್ವಾಗತ ಕೋರಲಾಗುತ್ತಿದೆ. ನಗರದ ಬಿಡಿ ರಸ್ತೆಯ ಮೈದಾನದಲ್ಲಿ ‘ವಿಶ್ವ ಹಿಂದೂ ಮಹಾ ಗಣಪತಿ ಮಹೋತ್ಸವ’ ವೈಭವಯುತವಾಗಿ ನಡೆಯಲಿದ್ದು ಅರಮನೆಯಂತಹ ಪೆಂಡಾಲ್‌ ಸಿದ್ಧಗೊಂಡಿದೆ.

‘ವಿಶ್ವ ಹಿಂದೂ ಮಹಾ ಗಣಪತಿ ಮಹೋತ್ಸವ’ ಈ ಬಾರಿ 18 ವರ್ಷಕ್ಕೆ ಕಾಲಿಟ್ಟಿಟ್ಟಿರುವ ಕಾರಣ ಈ ವರ್ಷ 18 ದಿನ ಗಣೇಶೋತ್ಸವ ನಡೆಸಲಾಗುತ್ತಿದೆ. 18 ದಿನವೂ ವಿಶೇಷ ಪೂಜೆ ನಡೆಯಲಿದ್ದು ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಡಿ ರಸ್ತೆಯ ಇಕ್ಕೆಲಗಳಲ್ಲಿ ಜಾತ್ರೆಯ ವಾತಾವರಣ ಏರ್ಪಟ್ಟಿದೆ. ಸರ್ವೀಸ್‌ ರಸ್ತೆಯ ಎರಡೂ ಕಡೆ ಅಂಗಡಿಗಳು ತಲೆ ಎತ್ತಿವೆ. ಅರ್ಧ ಕಿ.ಮೀ ವರೆಗೂ ದೀಪಾಲಂಕಾರ ಮಾಡಲಾಗಿದ್ದು ಇಡೀ ರಸ್ತೆ ಝಗಮಗಿಸುತ್ತಿದೆ.

ಸೋಮವಾರ ನಗರಕ್ಕೆ ಬಂದ ಬೃಹತ್‌ ಗಣೇಶ ಮೂರ್ತಿಗೆ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಯಿತು. ಅಲ್ಲಿಂದ ಬಿ.ಡಿ ರಸ್ತೆಯ ಪೆಂಡಾಲ್‌ವರೆಗೂ ಮೆರವಣಿಗೆಯ ಮೂಲಕ ತರಲಾಯಿತು. ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 18 ದಿನಗಳವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಖ್ಯಾತನಾಮ ಸಂಗೀತಗಾರರು ಕಾರ್ಯಕ್ರಮ ನೀಡಲಿದ್ದಾರೆ.

ADVERTISEMENT

ವಿವಿಧೆಡೆ ಪೆಂಡಾಲ್‌ ಸಿದ್ಧ: ಜಿಲ್ಲೆಯ ವಿವಿಧೆಡೆ ವಿವಿಧ ಗಣೇಶೋತ್ಸವ ಸಂಘಟನೆಗಳು ಪೆಂಡಾಲ್‌ಗಳನ್ನು ಸಿದ್ಧಗೊಳಿಸಿದ್ದು ಮಂಗಳವಾರ ಗಣೇಶ ಮೂರ್ತಿ ತರಲು ಸಿದ್ಧತೆ ಮಾಡಿಕೊಂಡಿದ್ದಾರೆ. ದರ್ಬಾರ್, ಶಿವ, ಆದಿಶೇಷ, ಶ್ರೀಕೃಷ್ಣ, ನವಿಲು ಹೀಗೆ ನಾನಾ ರೂಪದ ಗಣೇಶ ಮೂರುತಿಗಳನ್ನು ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆನೆಬಾಗಿಲು ಬಳಿ ನಡೆಯುವ ಗಣೇಶೋತ್ಸವದ ಚಿತ್ರದುರ್ಗದ ಹಳೆಯ ಉತ್ಸವವಾಗಿದೆ. ಈ ಬಾರಿಯೂ ಇಲ್ಲಿ ವೈಭವದ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಳೆದ ವರ್ಷ ದರ್ಬಾರ್‌ ಭಂಗಿಯಲ್ಲಿದ್ದ ಗಣೇಶ ಮೂರುತಿ ಕಂಗೊಳಿಸುತ್ತಿದ್ದ. ಬುರುಜನಹಟ್ಟಿಯ ಏಕನಾಥೇಶ್ವರಿ ಪಾದಗುಡಿಯಲ್ಲಿ ಸರ್ಕಲ್‌ ಅಡ್ಡ ಬಳಗದ ವತಿಯಿಂದ ಪೆಂಡಾಲ್‌ ಹಾಕಿದ್ದು ಉತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬುರುಜನಹಟ್ಟಿಯ ಸೊಪ್ಪಿನವರ ಬೀದಿಯಲ್ಲಿ ವಿನಾಯಕ ಬಳಗದ ಸದಸ್ಯರು ಕೂಡ ಗಣೇಶೋತ್ಸವಕ್ಕೆ ಪೆಂಡಾಲ್‌ ಸಿದ್ಧಗೊಳಿಸಿದ್ದಾರೆ. ಹೊಳಲ್ಕೆರೆ ರಸ್ತೆಯಲ್ಲಿನ ಸರ್‌.ಎಂ.ವಿಶ್ವೇಶ್ವರಯ್ಯ ಯುವಕರ ಬಳಗದಿಂದಲೂ ಗಣೇಶೋತ್ಸವ ನಡೆಯಲಿದೆ.

ಕೋಟೆ ಯೂತ್ಸ್ ಬಳಗದಿಂದ ಕೋಟೆ ಮುಂಭಾಗ ಗಣಪತಿ ಪ್ರತಿಷ್ಠಾಪನೆ ಮಾಡಲಿದ್ದಾರೆ. 11 ದಿನದ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಜೋಗಿಮಟ್ಟಿ ರಸ್ತೆ, ಜಿಲ್ಲಾ ಕ್ರೀಡಾಂಗಣ ರಸ್ತೆ, ಚಿಕ್ಕಪೇಟೆ, ಕೋಟೆ ರಸ್ತೆ, ಜೆಸಿಆರ್, ಹೊಳಲ್ಕೆರೆ ರಸ್ತೆ, ಗಾರೇಹಟ್ಟಿ, ಮುನ್ಸಿಪಲ್‌ ಕಾಲೊನಿ, ಕಾಮನಬಾವಿ, ಮಾಸ್ತಮ್ಮ ಬಡಾವಣೆ ಸೇರಿ ನಗರದ ವಿವಿಧೆಡೆ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.