ಹೊಸದುರ್ಗ: ಪಟ್ಟಣದ ಗಣೇಶ ಸದನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನಾ ಮೆರವಣಿಗೆ, ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಭಾನುವಾರ ನಡೆದವು.
ವಿಸರ್ಜನೆಗೂ ಮುನ್ನ ಗಣೇಶನಿಗೆ ವಿಶೇಷ ಪೂಜೆ ನೇರವೇರಿಸಲಾಯಿತು. ನಂತರ ಆಲಂಕೃತ ವಾಹನವೊಂದರಲ್ಲಿ ಮೂರ್ತಿ ಪ್ರತಿಷ್ಠಾಪಿಸಿ, ಜಯಘೋಷ ಮೊಳಗಿಸಲಾಯಿತು. ಗಣೇಶ ಸದನದಿಂದ ಆರಂಭವಾದ ಮೆರವಣಿಗೆ, ಬನಶಂಕರಿ ದೇವಾಲಯ, ಈಶ್ವರ ದೇವಾಲಯ, ದುರ್ಗಾದೇವಿ ದೇವಾಲಯದ ಮೂಲಕ ವೀರಭದ್ರೇಶ್ವರ ಸ್ವಾಮಿ ದೇವಾಲಯ ತಲುಪಿತು. ಎಲ್ಲಾ ದೇವಾಲಯಗಳಲ್ಲೂ ಗಣೇಶನಿಗೆ ಪೂಜೆ ನಡೆಸಲಾಯಿತು. ನಂತರ ಮದಕರಿ ವೃತ್ತದ ಮಾರ್ಗವಾಗಿ ಸೀತಾರಾಘವ ಬ್ಯಾಂಕ್ ರಸ್ತೆಯ ಮೂಲಕ ಸಂತೆಹೊಂಡ ತಲುಪಿತು. ಸಂಜೆ ವಿಸರ್ಜನೆ ನಡೆಯಿತು.
ವೀರಗಾಸೆ, ಡೊಳ್ಳು ಮೆರವಣಿಗೆಗೆ ಮೆರಗು ನೀಡಿದವು. ಪಟ್ಟಣದ ಪ್ರಮುಖ ಬೀದಿಯಲ್ಲಿ ಗಣೇಶನ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಪ್ರತಿ ಮನೆ ಮನೆಗೂ ಲಡ್ಡು ವಿತರಿಸಲಾಗಿತ್ತು.
ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯ ಕಥಾ ವೈಭವ ಬಿಂಬಿಸುವ ವೇದಿಕೆ 9 ದಿನಗಳ ಕಾಲ ಜನರ ಗಮನ ಸೆಳೆಯಿತು. ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು. ಗಣೇಶ ಸದನದ ಅಧ್ಯಕ್ಷ ಹಂಜಿ ಶಿವಸ್ವಾಮಿ, ಉಪಾಧ್ಯಕ್ಷ ಡಿ. ಆದಿರಾಜಯ್ಯ, ಬಿ.ವಿ. ಕುಶಕುಮಾರ್, ಇ.ಟಿ ಬಾಹುಬಲಿ, ಟಿ.ಎಂ. ಗಂಗಾಧರ್ ಗುಪ್ತ, ಎಸ್. ಪ್ರಹ್ಲಾದ್ ರಾವ್ ಸೇರಿದಂತೆ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.