ADVERTISEMENT

ಚಿತ್ರದುರ್ಗ: ರಸ್ತೆ ಗುಡಿಸೋರಿಲ್ಲ, ಮನೆ ಕಸ ಕೇಳೋರಿಲ್ಲ

ವಿಲೇವಾರಿಯಾಗದ ನೂರಾರು ಟನ್‌ ತ್ಯಾಜ್ಯ, ಇಕ್ಕಟ್ಟಿಗೆ ಸಿಲುಕಿದ ನಗರ ಸ್ಥಳೀಯ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:16 IST
Last Updated 5 ಜುಲೈ 2022, 4:16 IST
ಚಿತ್ರದುರ್ಗದ ಪ್ರಸನ್ನ ಚಿತ್ರಮಂದಿರದ ಮುಂದೆ ಬಿದ್ದಿರುವ ಕಸದ ರಾಶಿ.
ಚಿತ್ರದುರ್ಗದ ಪ್ರಸನ್ನ ಚಿತ್ರಮಂದಿರದ ಮುಂದೆ ಬಿದ್ದಿರುವ ಕಸದ ರಾಶಿ.   

ಚಿತ್ರದುರ್ಗ: ಸೇವೆ ಕಾಯಂ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುತ್ತಿಗೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಬಹಿಷ್ಕರಿಸಿ ನಡೆಸುತ್ತಿರುವ ಮುಷ್ಕರದ ಪರಿಣಾಮ ನಗರದ ರಸ್ತೆಗಳು ಕಸದ ತೊಟ್ಟಿಗಳಾಗಿ ಪರಿವರ್ತನೆಗೊಂಡಿವೆ.

ಕಳೆದ ನಾಲ್ಕು ದಿನದಿಂದ ನೂರಾರೂ ಟನ್‌ ಕಸ ವಿಲೇವಾರಿಯಾಗದೆ ಎಲ್ಲರ ಮನೆ, ರಸ್ತೆಯಲ್ಲಿಯೇ ಕೊಳೆತು ದುರ್ವಾಸನೆ ಬೀರುತ್ತಿದೆ. ಇದರಿಂದ ನಗರದ ಕೆಲ ಬಡಾವಣೆಗಳ ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಿತ್ಯ ಬೆಳಗ್ಗೆ ಪೊರಕೆ, ಪುಟ್ಟಿಗಳನ್ನು ಹಿಡಿದು ರಸ್ತೆಗಿಳಿಯುತ್ತಿದ್ದ ಪೌರಕಾರ್ಮಿಕರು ಮುಷ್ಕರ ಹೂಡಿದ ಕಾರಣ ರಸ್ತೆ ಗುಡಿಸೋರಿಲ್ಲ, ಮನೆ ಮನೆಯಲ್ಲಿ ಸಂಗ್ರಹವಾಗಿರುವ ಕಸ ಕೇಳೋರಿಲ್ಲ ಎಂಬ ಸ್ಥಿತಿ ಎದುರಾಗಿದೆ. ಕಾಯಂ ಪೌರಕಾರ್ಮಿಕರು ನಿತ್ಯ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಕೆಲಸ ಮಾಡಿ ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಕಾಯಂ ಪೌಕಕಾರ್ಮಿಕರು ಕೂಡ ಮುಷ್ಕರವನ್ನು ಬೆಂಬಲಿಸಿದ್ದಾರೆ.

ADVERTISEMENT

ನಗರದಲ್ಲಿ ನಿತ್ಯ ಅಂದಾಜು 60 ಟನ್‌ ಕಸ ವಿಲೇವಾರಿಯಾಗುತ್ತಿತ್ತು. ಮುಷ್ಕರದ ಪರಿಣಾಮ ಕಸ ವಿಲೇವಾರಿಗೆ ಗ್ರಹಣ ಬಡಿದಿದೆ. ನಗರಸಭೆಯಲ್ಲಿ 110 ಜನ ಕಾಯಂ ಹಾಗೂ 71 ನೇರ ನಗದು ಪಾವತಿಯ ಕಾರ್ಮಿಕರಿದ್ದಾರೆ. ನಗರದ ಬಹುತೇಕ ಸ್ವಚ್ಚತಾ ಕಾರ್ಯವನ್ನು ನೇರ ನಗದು ಪಾವತಿ ಕಾರ್ಮಿಕರು ನಿರ್ವಹಿಸುತ್ತಿದ್ದರು. ಈಗ 110 ಜನ ಕಾಯಂ ಪೌರಕಾರ್ಮಿಕರ ಮೇಲೆ ನಗರ ಸ್ವಚ್ಚತೆ ಹೊಣೆ ಬಿದ್ದಿದ್ದು, ಮಾರುಕಟ್ಟೆ, ನಗರದ ಮುಖ್ಯ ರಸ್ತೆ ಹಾಗೂ ಪ್ರಮುಖ ಬಡಾವಣೆಗಳ ಕಸದ ವಿಲೇವಾರಿ ಮಾಡಲು ಹರಸಾಹಸಪಡುತ್ತಿದ್ದಾರೆ.

ಕಾರ್ಮಿಕರ ಸಂಖ್ಯೆ ಏಕಾಏಕಿ ಕುಗ್ಗಿದ ಪರಿಣಾಮ ಗೋಪಾಲಪುರ ರಸ್ತೆ, ಪ್ರಸನ್ನ ಚಿತ್ರಮಂದಿರದ ರಸ್ತೆ, ಕಾಮನಬಾವಿ ಬಡಾವಣೆ, ಅಗಸನಕಲ್ಲು, ಜೋಗಿಮಟ್ಟಿ ರಸ್ತೆ, ಐಯುಡಿಪಿ ಬಡಾವಣೆ, ದೊಡ್ಡಪೇಟೆ, ಚಿಕ್ಕಪೇಟೆ ಸೇರಿದಂತೆ ನಾನಾ ಕಡೆ ಸ್ವಚ್ಛತೆ ಸಾಧ್ಯವಾಗಿಲ್ಲ. ಮನೆ ಮನೆಯಿಂದ ಕಸ ಸಂಗ್ರಹ ಬಹುತೇಕ ಸ್ಥಗಿತಗೊಂಡಿದೆ. ಅನಿವಾರ್ಯವಾಗಿ ಜನರು ರಸ್ತೆ ಬದಿ, ಖಾಲಿ ಇರುವ ಪ್ರದೇಶಗಳಲ್ಲಿ ಕಸವನ್ನು ಎಸೆಯುತ್ತಿದ್ದಾರೆ.

ಹೋಟೆಲ್‌ಗಳಲ್ಲಿ ಸಂಗ್ರಹವಾಗುವ ಕಸವನ್ನು ಅಲ್ಲಿನ ಸಿಬ್ಬಂದಿಗಳೇ ತಾಜ್ಯ ವಿಲೇವಾರಿ ಘಟಕಕ್ಕೆ ತೆಗೆದುಕೊಂಡು ಹೋಗಿ ಸುರಿಯುತ್ತಿದ್ದಾರೆ. ಕೆಲವರು ನಗರದ ಹೊರ ಭಾಗದ ರಸ್ತೆ ಬದಿಯ ಚರಂಡಿಗಳಿಗೆ ಸುರಿಯುತ್ತಿದ್ದಾರೆ. ಈ ಸ್ಥಳಗಳಲ್ಲಿ ಹಂದಿ, ನಾಯಿಗಳು ಬೀಡುಬಿಟ್ಟಿದ್ದು, ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

70 ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಧರಣಿ ನಡೆಸುತ್ತಿರುವ ಕಾರಣ ಕೆಲಸದ ಒತ್ತಡ ಹೆಚ್ಚಾಗಿದೆ. ನಗರದ ಪ್ರಮುಖ ಕಡೆಗಳಲ್ಲಿ ಮಾತ್ರ ಕಸ, ತ್ಯಾಜ್ಯ ಸಂಗ್ರಹ ಮಾಡಿ ವಿಲೇವಾರಿ ಮಾಡಲಾಗುತ್ತಿದೆ ಎನ್ನುತ್ತಾರೆ ಕಾಯಂ ಪೌರಕಾರ್ಮಿಕರು. ನೇರ ನಗದು ಪಾವತಿಯ ಕಾರ್ಮಿಕರ ಮುಷ್ಕರಕ್ಕೆ ಲೋಡರ್ಸ್‌, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಚತಾ ಕಾರ್ಮಿಕರು, ನೀರಗಂಟಿಗಳು ಸಹ ಬೆಂಬಲ ಸೂಚಿಸಿದ್ದಾರೆ.

‘ಜಿಲ್ಲೆಯ ಸ್ವಚ್ಛತೆಗೆ ಶ್ರಮವಹಿಸುವ ಪೌರಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ಕಸದ ವಿಲೇವಾರಿಯಲ್ಲಿ ತೊಂದರೆ ಆಗುತ್ತಿದೆ. ಆದರೂ ನಮ್ಮ ಬೇಡಿಕೆ ಈಡೇರುವ ತನಕ ಮುಷ್ಕರ ಹಿಂಪಡೆಯುವುದಿಲ್ಲ’ ಎನ್ನುತ್ತಾರೆ ಜಿಲ್ಲಾ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಡಿ.ದುರುಗೇಶ್‌.

5ನೇ ದಿನಕ್ಕೆ ಮುಷ್ಕರ

ಪೌರಕಾರ್ಮಿಕ ಮುಷ್ಕರ ನಾಲ್ಕನೇ ದಿನವೂ ಮುಂದುವರೆದಿದ್ದು, ಸೋಮವಾರ ಕಾಂಗ್ರೆಸ್‌ ಜಿಲ್ಲಾ ಘಟಕ ಬೆಂಬಲ ಸೂಚಿಸಿತು.

‘ರಾಜ್ಯದ ಈ ಸಮಸ್ಯೆ ಅಷ್ಟು ಸುಲಭವಾಗಿ ಬಗೆಹರಿಯುವುದಿಲ್ಲ. ಟೆಂಡರ್ ಪದ್ಧತಿಯಡಿ ಕೆಲಸ ಮಾಡುವ ಎಲ್ಲರೂ ಸಂಘಟನೆಯೊಳಗೆ ಬರದಿದ್ದರೆ ಎಷ್ಟು ಹೋರಾಟ ಮಾಡಿದರೂ ನಿಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವುದಿಲ್ಲ. ಎದೆಗುಂದದೆ ಸಂಘಟಿತರಾಗಿ’ ಎಂದುಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್‌ ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.