ADVERTISEMENT

ಗೌರಸಮುದ್ರ: ಸೌಲಭ್ಯ ವಂಚಿತ ಐತಿಹಾಸಿಕ ಗ್ರಾಮ

ಪ್ರತಿ ವರ್ಷ ಅತೀ ಹೆಚ್ಚು ಭಕ್ತರ ಭೇಟಿ; ಗಡಿಯಲ್ಲಿರುವ ಗ್ರಾಮದ ಬಗ್ಗೆ ತೀವ್ರ ನಿರ್ಲಕ್ಷ್ಯ

ಕೊಂಡ್ಲಹಳ್ಳಿ ಜಯಪ್ರಕಾಶ
Published 16 ಜೂನ್ 2025, 8:10 IST
Last Updated 16 ಜೂನ್ 2025, 8:10 IST
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಗೌರಸಮುದ್ರದಲ್ಲಿ ಬಸ್‌ನಿಲ್ದಾಣ ಇಲ್ಲದ ಕಾರಣ ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗದಲ್ಲಿ ಕುಳಿತಿರುವ ಪ್ರಯಾಣಿಕರು
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಗೌರಸಮುದ್ರದಲ್ಲಿ ಬಸ್‌ನಿಲ್ದಾಣ ಇಲ್ಲದ ಕಾರಣ ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗದಲ್ಲಿ ಕುಳಿತಿರುವ ಪ್ರಯಾಣಿಕರು   

ಮೊಳಕಾಲ್ಮುರು: ತಳಕು ಹೋಬಳಿ ವ್ಯಾಪ್ತಿಯ ಐತಿಹಾಸಿಕ ಗೌರಮುದ್ರದಲ್ಲಿ ಮೂಲಸೌಕರ್ಯಗಳಿಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಪ್ರಸಿದ್ಧ ಮಾರಮ್ಮದೇವಿ ಸ್ವಕ್ಷೇತ್ರವಾದ ಗ್ರಾಮಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದರೂ ಗ್ರಾಮವು ಸೌಲಭ್ಯಗಳಿಂದ ವಂಚಿತವಾಗಿದೆ.

ವಾರ್ಷಿಕವಾಗಿ 2 ಬಾರಿ ಜಾತ್ರೆ ನಡೆಯುವ ಕ್ಷೇತ್ರ ಧಾರ್ಮಿಕವಾಗಿ ಪ್ರಸಿದ್ಧಿ ಪಡೆದಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆಯಂದು ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಜಿಲ್ಲೆಯಲ್ಲಿ ನಾಯಕನಹಟ್ಟಿ ಜಾತ್ರೆ ಹೊರತುಪಡಿಸಿದರೆ ಅತೀ ದೊಡ್ಡದಾಗಿ ನಡೆಯುವ ಜಾತ್ರೆ ಇದೇ ಎಂದು ಪ್ರಸಿದ್ಧಿ ಪಡೆದಿದೆ.

ಗೌರಸಮುದ್ರ ಸೀಮಾಂಧ್ರ ಗಡಿಯಲ್ಲಿದ್ದು, ಇಲ್ಲಿಂದ ಆಂಧ್ರ ಗಡಿ ಕೇವಲ 2 ಕಿ.ಮೀ ದೂರದಲ್ಲಿದೆ. ದೇವಸ್ಥಾನಕ್ಕೆ ಆಂಧ್ರದ ಸಾಕಷ್ಟು ಭಕ್ತರೂ ಬರುತ್ತಾರೆ. ಮಾರಮ್ಮದೇವಿ ಮೂಲಸ್ಥಳ ಆಂಧ್ರವಾಗಿರುವುದು ಇದಕ್ಕೆ ಕಾರಣ. ದೇವಸ್ಥಾನ ಸಂಪರ್ಕ ರಸ್ತೆ ತೀರಾ ಚಿಕ್ಕದಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗ್ರಾಮ ಸಂಪರ್ಕ ಮುಖ್ಯರಸ್ತೆಯೂ ಕಿರಿದಾಗಿದ್ದು ವಾಹನ ಬಂದರೆ ಎದುರು ವಾಹನ ಹೋಗಲು ಸಾಧ್ಯವಾಗುತ್ತಿಲ್ಲ.

ADVERTISEMENT

‘ಜಾತ್ರೆ ಮತ್ತು ಹಬ್ಬಗಳ ಸಮಯದಲ್ಲಿ ಭಕ್ತರ ಪಾಡು ಹೇಳತೀರದು. ರಸ್ತೆ ವಿಸ್ತರಣೆಗೆ ಜಿಲ್ಲಾಡಳಿತಕ್ಕೆ ಗ್ರಾಮಪಂಚಾಯಿತಿ ಮನವಿ ಮಾಡಿತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಂದು ರಸ್ತೆ ಸರ್ವೇ ಮಾಡಿದ್ದು ಬಿಟ್ಟರೆ ಬೇರೆ ಕ್ರಮ ಜರುಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ಆರೋಪಿಸುತ್ತಾರೆ.

‘ಗ್ರಾಮಸ್ಥರಿಗೆ ಮತ್ತು ದೇವಾಲಯಕ್ಕೆ ಬರುವ ಭಕ್ತರಿಗೆ ಬಸ್‌ ಕಾಯಲು ಪ್ರಯಾಣಿಕರ ತಂಗುದಾಣ ನಿರ್ಮಿಸುವಂತೆ ಹಲವು ಬಾರಿ  ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಮುಖ್ಯರಸ್ತೆಯಲ್ಲಿ ಗ್ರಾಮ ಪಂಚಾಯಿತಿ ಹಳೆ ಕಟ್ಟಡವನ್ನು ಮೀಸಲು ಇಡಲಾಗಿದೆ. ಬರುವವರು ಮನೆಗಳ ಮುಂದೆ, ಮರಗಳ ಕೆಳಗಡೆ ಕುಳಿತು ಬಸ್‌ ಕಾಯಬೇಕಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಶಿಕುಮಾರ್‌ ದೂರಿದರು.

ಭಕ್ತರು ಮುಖ್ಯವಾಗಿ ದೇವಿ ಸನ್ನಿಧಿಯಲ್ಲಿ ರಾತ್ರಿ ನಿದ್ದೆ ಮಾಡುವ ಹರಕೆ ತೀರಿಸುತ್ತಾರೆ. ಆದರೆ ಭಕ್ತರು ತಂಗಲು ಯಾವುದೇ ಕೊಠಡಿಗಳ ವ್ಯವಸ್ಥೆ ಇಲ್ಲ, ಯಾತ್ರಿನಿವಾಸ ನಿರ್ಮಿಸಲಾಗುವುದು ಎಂದು ಹಲವು ವರ್ಷಗಳಿಂದ ಜನಪ್ರತಿನಿಧಿಗಳು ಮತ್ತು ಮುಜರಾಯಿ ಇಲಾಖೆ ಭರವಸೆ ನೀಡುತ್ತಾ ಬಂದಿದೆ. ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಚರ್ಚೆ ಆಗುತ್ತದೆ, ಆದರೆ ಕ್ರಮ ಮಾತ್ರ ಶೂನ್ಯ. ಜಿಲ್ಲಾಡಳಿತ ಗಮನಹರಿಸಿ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವ ಮೂಲಕ ಭಕ್ತರ ನೆರವಿಗೆ ಬರಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

‘ಶ್ರಾವಣ ಮಾಸದಿಂದ ಭಕ್ತರ ಸಂಖ್ಯೆ ಹೆಚ್ಚುತ್ತದೆ. ಅಂಗಡಿ, ಮನೆಗಳ ಮುಂದೆ ಕುಳಿತು ಬಸ್‌ಗಾಗಿ ಕಾಯುವ ಭಕ್ತರನ್ನು ಆಚೆ ಹೋಗಿ ಎಂದು ಬೈಯುತ್ತಾರೆ. ನಿಲ್ದಾಣದ ಅವಶ್ಯಕತೆ ತುಂಬಾ ಇದೆ’ ಎಂದು ಗ್ರಾಮಸ್ಥ ಮಾರಣ್ಣ ಹೇಳಿದರು. 

‘ಗ್ರಾಮದ ತಾಜ್ಯ ನೀರು ಹರಿದು ಹೋಗಲು ಇದ್ದ  ಕಾಲುವೆ ಒತ್ತುವರಿಯಾಗಿದೆ. ಪರಿಣಾಮ ತ್ಯಾಜ್ಯ ನೀರು ಬೇಕಾಬಿಟ್ಟಿ ನಿಲ್ಲುವುದರಿಂದ  ಗ್ರಾಮದ ನೈರ್ಮಲ್ಯ ಕ್ಷೀಣಿಸಿದೆ. ಹಿರಿಯ ಅಧಿಕಾರಿಗಳು ಕಾಲುವೆ ದುರಸ್ತಿ ಮೂಲಕ ಸರಾಗವಾಗಿ ನೀರು ಹರಿದು ಹೋಗಲು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾ.ಪಂ ಸದಸ್ಯ ಒತ್ತಾಯಿಸಿದರು.

ಬಸ್‌ ನಿಲ್ದಾಣ ನಿರ್ಮಿಸಲು ಕಾಯ್ದಿರಿಸಿರುವ ಹಳೆ ಗ್ರಾಮ ಪಂಚಾಯಿತಿ ಕಟ್ಟಡ

ಜಾತ್ರೆ ಮತ್ತು ಹಬ್ಬಗಳ ಸಮಯದಲ್ಲಿ ಭಕ್ತರ ಪಾಡು ಹೇಳತೀರದು ಮರಗಳ ಕೆಳಗಡೆ ಕುಳಿತು ಬಸ್‌ಗಾಗಿ ಕಾಯಬೇಕಿದೆ ಭಕ್ತರು ತಂಗಲು ಯಾವುದೇ ಕೊಠಡಿಗಳ ವ್ಯವಸ್ಥೆ ಇಲ್ಲ

ಆಂಧ್ರ ಗಡಿಯ ಈ ಪುಣ್ಯಕ್ಷೇತ್ರವನ್ನು ಸರ್ಕಾರ ತೀವ್ರವಾಗಿ ನಿರ್ಲಕ್ಷ್ಯ ಮಾಡಿದೆ. ದೇವಸ್ಥಾನದ ಲಕ್ಷಾಂತರ ಆದಾಯ ಬೇಕು ವ್ಯವಸ್ಥೆ ಕಲ್ಪಿಸುವುದು ಬೇಡ. ಈ ಧೋರಣೆ ಸರಿಯಲ್ಲ

-ತಿಪ್ಪೇಸ್ವಾಮಿ ಗ್ರಾಮಸ್ಥ ಗೌರಸಮುದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.