ADVERTISEMENT

ಕಾಡುಗೊಲ್ಲರನ್ನು ಎಸ್‌ಟಿಗೆ ಸೇರಿಸಲು ಒಗ್ಗೂಡೋಣ: ಬಂಜಗೆರೆ ಜಯಪ್ರಕಾಶ್

ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 15:47 IST
Last Updated 11 ಅಕ್ಟೋಬರ್ 2020, 15:47 IST
ಚಿತ್ರದುರ್ಗದಲ್ಲಿ ಕಾಡುಗೊಲ್ಲರ ಸಂಘದಿಂದ ಭಾನುವಾರ ಆಯೋಜಿಸಿದ್ದ ಗೊಲ್ಲ ಸಮುದಾಯದ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಜಿ ಸಂಸದ ಪಿ.ಕೋದಂಡರಾಮಯ್ಯ ಮಾತನಾಡಿದರು. ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಕವಿಯತ್ರಿ ಡಾ.ಎಚ್‌.ಎಲ್.ಪುಷ್ಪಾ ಇದ್ದರು.
ಚಿತ್ರದುರ್ಗದಲ್ಲಿ ಕಾಡುಗೊಲ್ಲರ ಸಂಘದಿಂದ ಭಾನುವಾರ ಆಯೋಜಿಸಿದ್ದ ಗೊಲ್ಲ ಸಮುದಾಯದ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಜಿ ಸಂಸದ ಪಿ.ಕೋದಂಡರಾಮಯ್ಯ ಮಾತನಾಡಿದರು. ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಕವಿಯತ್ರಿ ಡಾ.ಎಚ್‌.ಎಲ್.ಪುಷ್ಪಾ ಇದ್ದರು.   

ಚಿತ್ರದುರ್ಗ:ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಎಲ್ಲ ಗೊಲ್ಲ ಸಮುದಾಯಗಳು ಇದನ್ನು ಬೆಂಬಲಿಸುವ ಅಗತ್ಯವಿದೆ ಎಂದು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಸಲಹೆ ನೀಡಿದರು.

ಪತ್ರಕರ್ತರ ಭವನದಲ್ಲಿ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ಗೊಲ್ಲ ಸಮುದಾಯದ ನಿವೃತ್ತ ನೌಕರರಿಗೆ ಭಾನುವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಲ ಹಾಗೂ ಜಾತಿ ಬೇರೆ. ನಾವೆಲ್ಲರೂ ಕುಲವಾಗಿ ಗೊಲ್ಲರಾಗೋಣ. ಉಪ ಜಾತಿಗಳಲ್ಲಿ ಯಾವ ಸಮುದಾಯ ಹಿಂದುಳಿದಿದೆಯೋ ಅದರ ಅಭಿವೃದ್ಧಿಗೆ ಕೈಜೋಡಿಸೋಣ. ನ್ಯಾಯಯುತವಾಗಿ ಸಿಗಬೇಕಾದ ಸಂವಿಧಾನಿಕ ಹಕ್ಕುಗಳನ್ನು ಕೊಡಿಸಲು ಒಂದು ಕುಲವಾಗಿ ಒಗ್ಗಟ್ಟಿನಿಂದ ಹೋರಾಡುವುದನ್ನು ಬಿಟ್ಟರೆ ಯಾವ ಮಾರ್ಗವೂ ಇಲ್ಲ’ ಎಂದರು.

ADVERTISEMENT

‘ಕುರುಬರು, ನಾಯಕರು ಸೇರಿ ಹಿಂದುಳಿದ ಸಮುದಾಯದವರು ನಮ್ಮವರೇ ಆಗಿದ್ದಾರೆ. ಅವರ ಬೆಂಬಲ ಇಲ್ಲದೆಯೇ ರಾಜಕೀಯವಾಗಿ ಬೆಳೆಯಲು ಖಂಡಿತ ಸಾಧ್ಯವಿಲ್ಲ. ಕುಲ ಸಂಯೋಜನೆ ಅಗತ್ಯವಾಗಿದ್ದು, ಜಾಣ್ಮೆಯಿಂದ ಯೋಚಿಸಿದರೆ ಅಭಿವೃದ್ಧಿ ಸಾಧ್ಯವಿದೆ’ ಎಂದು ಹೇಳಿದರು.

ಒಟ್ಟಾಗಿ ಗೋಕುಲ ನಿರ್ಮಿಸಿ: ‘ಗೊಲ್ಲರು ಬಲಿಷ್ಟರಾಗಲು ಕುಲ ಸಮೀಕರಣ ಮಾಡಬೇಕಿದೆ. ಈ ವಿಚಾರದಲ್ಲಿ ನಮ್ಮೆಲ್ಲರ ಆಲೋಚನೆ ಸ್ಪಷ್ಟವಾಗಿರಬೇಕು. ಗುರುತಿಸುವಿಕೆ, ಹಂಚುವಿಕೆ, ಹೊಂದಾಣಿಕೆ ಮಾಡಿಕೊಂಡು ಮುಂದೆ ಸಾಗಬೇಕಿದೆ. ಗೊಲ್ಲರೆಲ್ಲರೂ ಒಟ್ಟಾಗಿ ಸೇರಿ ಗೋಕುಲ ನಿರ್ಮಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಜಾತಿಯ ಪಾಲನ್ನು ಪಡೆಯಲು ಕುಲದ ಹೆಸರನ್ನು ಬಳಸಿಕೊಳ್ಳಬಾರದು. ಎಲ್ಲಿ ಕಾಡುಗೊಲ್ಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಅಲ್ಲಿ ಅವರೇ ಬೆಳೆಯಲು ಅವಕಾಶ ಮಾಡಿಕೊಡಿ’ ಎಂದು ಗೊಲ್ಲರಿಗೆ ಮನವಿ ಮಾಡಿದರು.

‘ಶ್ರೀಕೃಷ್ಣ, ಬಸವಣ್ಣ, ವಾಲ್ಮೀಕಿ, ಅಂಬೇಡ್ಕರ್ ಗೊಲ್ಲರ ಲಾಂಛನವಾಗಬೇಕು. ಜಾತಿಗಾಗಿ ಯಾವ ಸಂಘವನ್ನಾದರೂ ಮಾಡಿಕೊಳ್ಳಿ. ಆದರೆ, ಕುಲವಾಗಿ ಒಂದೇ ಸಂಘವಿರಲಿ. ಅಲ್ಲಿ ಎಲ್ಲರೂ ಸೇರಿ ಚರ್ಚಿಸಲು ಅವಕಾಶವಿರಲಿ’ ಎಂದು ಸಲಹೆ ನೀಡಿದರು.

ಕಾಡುಗೊಲ್ಲರು ಎಸ್‌ಟಿಗೆ ಅರ್ಹರು: ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಮಾಜಿ ಸಂಸದ ಕೋದಂಡರಾಮಯ್ಯ, ‘ಕಾಡುಗೊಲ್ಲರು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳ್ಳಲು ಅರ್ಹತೆ ಹೊಂದಿದ್ದಾರೆ. ಇದನ್ನು ಅರಿತು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ’ ಎಂದು ತಿಳಿಸಿದರು.

‘ಯಾವ ಸಮುದಾಯ ಸ್ತ್ರೀಯನ್ನು ಗೌರವಿಸುವುದಿಲ್ಲವೋ ಅದು ಮುಂದುವರೆಯಲು ಎಂದಿಗೂ ಸಾಧ್ಯವಿಲ್ಲ. ಹಾಥರಸ್ ಪ್ರಕರಣದಲ್ಲಿ ಅಲ್ಲಿನ ವಾಲ್ಮೀಕಿ ಸಮುದಾಯ ಸಂತ್ರಸ್ತೆಯ ಪರವಾಗಿ ನಿಂತಿದೆ. ಮಹಿಳೆಯರ ವಿಚಾರದಲ್ಲಿನ ಕೆಲ ಪದ್ಧತಿಗಳನ್ನು ಗೊಲ್ಲರು ಕೈಬಿಡಬೇಕಿದೆ’ ಎಂದರು.

‘ರಾಜಕೀಯ ಮುಖಂಡರನ್ನು ನಿಂದಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಸರ್ಕಾರಿ ಸೌಲಭ್ಯಗಳ ಜತೆಗೆ ಆರ್ಥಿಕವಾಗಿ ಮುಂದುವರೆಯಲು ಸ್ವ ಉದ್ಯೋಗ ಸೃಷ್ಟಿಸಿಕೊಳ್ಳಲು ಯುವಸಮೂಹ ಪ್ರಯತ್ನಿಸಬೇಕಿದೆ. ರಾಜಕೀಯವಾಗಿ ಬೆಳೆದು ನಾಯಕತ್ವ ಬೆಳೆಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಬೇಲಿ ತೆಗೆದು ಮುನ್ನುಗ್ಗಿ’:

‘ಗೋವುಗಳನ್ನು ಕಾಪಾಡಿಕೊಂಡು ಬಂದಿರುವ ದೇಶದಲ್ಲೇ ವಿಶಿಷ್ಟ ಸಮುದಾಯವಾದ ಗೊಲ್ಲರು ಸೌಲಭ್ಯಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ್ದರೂ ಮೌಢ್ಯಾಚರಣೆಗಳಿಂದ ದೌರ್ಬಲ್ಯಕ್ಕೆ ಒಳಗಾಗಿದೆ’ ಎಂದು ಕವಿಯತ್ರಿ ಡಾ.ಎಚ್‌.ಎಲ್.ಪುಷ್ಪಾ ಅಭಿಪ್ರಾಯಪಟ್ಟರು.

‘ಎಲ್ಲ ಸಮುದಾಯಗಳು ಬೇರೆ ಸಮುದಾಯಗಳೊಂದಿಗೆ ಬೆರೆತು ಅಭಿವೃದ್ಧಿ ಹೊಂದುತ್ತಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕಟ್ಟುಪಾಡು ಇಟ್ಟುಕೊಂಡು ನಮ್ಮ ಸುತ್ತ ನಾವೇ ಬೇಲಿ ಹಾಕಿಕೊಂಡರೆ ಪ್ರಗತಿ ಹೊಂದಲು ಸಾಧ್ಯವೇ? ಬೇಲಿ ತೆಗೆದು ಮುನ್ನುಗ್ಗಿ’ ಎಂದು ಸಲಹೆ ನೀಡಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಶಿವು ಯಾದವ್, ವಿರೋಧಪಕ್ಷದ ನಾಯಕರ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ನೆಲ್ಲಕುಂಟೆ, ಮುಖಂಡರಾದ ಡಾ.ಸತೀಶ್, ಡಾ.ದೊಡ್ಡಮಲ್ಲಯ್ಯ, ಎನ್‌.ಆರ್.ಲಕ್ಷ್ಮಿಕಾಂತ್, ಜಯರಾಮ್, ಜಯಲಕ್ಷ್ಮಿ ಇದ್ದರು.

ಊರು ಗೊಲ್ಲರು, ಕಾಡುಗೊಲ್ಲರ ಮಧ್ಯೆ ದೊಡ್ಡ ಬಿರುಕು ಇದೆ. ಅದನ್ನು ಹೋಗಲಾಡಿಸಿದರೆ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಗೊಲ್ಲ ಸಮುದಾಯ ಬೆಳೆಯಬಹುದು.

ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಸಮುದಾಯದ ಚಿಂತಕ

ಯಾವುದೇ ಸರ್ಕಾರವಿರಲಿ. ಮುಸ್ಲಿಂ, ನಾಯಕರು, ಕುರುಬರು, ಮಾದಿಗರು, ಗೊಲ್ಲರು ಸೇರಿ ಹಿಂದುಳಿದ ಸಮುದಾಯ ಒಗ್ಗೂಡಿ ಹಕ್ಕು ಕೇಳಬೇಕು. ಆಗ ಮಾತ್ರ ನ್ಯಾಯ ಪಡೆಯಲು ಸಾಧ್ಯ.

ಡಾ.ಸಿ.ಜಿ.ಲಕ್ಷ್ಮಿಪತಿ, ಸಮಾಜ ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.