ADVERTISEMENT

ಹೊಸದುರ್ಗ: ಹದ ಮಳೆ, ಗರಿಗೆದರಿದ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 6:15 IST
Last Updated 11 ಆಗಸ್ಟ್ 2025, 6:15 IST
ಹೊ‌ಸದುರ್ಗದ ಚಿನ್ನಾಪುರ ಗ್ರಾಮದಲ್ಲಿನ ಪವನ್ ಕುಮಾರ್ ಅವರ ಜಮೀನಿನಲ್ಲಿ ಅಂತರ ಬೇಸಾಯ ನಡೆಯುತ್ತಿರುವುದು
ಹೊ‌ಸದುರ್ಗದ ಚಿನ್ನಾಪುರ ಗ್ರಾಮದಲ್ಲಿನ ಪವನ್ ಕುಮಾರ್ ಅವರ ಜಮೀನಿನಲ್ಲಿ ಅಂತರ ಬೇಸಾಯ ನಡೆಯುತ್ತಿರುವುದು   

ಹೊಸದುರ್ಗ : ಕಳೆದ 15 ದಿನಗಳಿಂದ ಸುರಿದ ಹದ ಮಳೆಯಾಗಿದೆ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ. ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗಳಿಗೆ ಈಗ ಜೀವ ಬಂದಂತಾಗಿದೆ.

ಈಗಾಗಲೇ ಬಿತ್ತನೆಯಾಗಿರುವ ಮೆಕ್ಕೆಜೋಳ, ರಾಗಿ, ಸಾವೆ, ಅವರೆ, ಅಲಸಂದೆ ಸೇರಿದಂತೆ ಹಲವು ಬೆಳೆಗಳಿಗೆ ರೈತರು ಅಂತರ ಬೇಸಾಯ (ಎಡೆಕುಂಟೆ) ಮಾಡುತ್ತಿದ್ದಾರೆ. ಇನ್ನೂ ಭೂಮಿ ಸಿದ್ಧತೆ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದ ರೈತರು ರಾಗಿ ಬಿತ್ತನೆಯಲ್ಲಿ ತೊಡಗಿದ್ದಾರೆ.

ಎರಡು ತಿಂಗಳ ನಂತರ ಮಳೆ ಬಿದ್ದಿರುವುದರಿಂದ ಈಗಷ್ಟೇ ಬಿತ್ತನೆ ಆರಂಭವಾಗಿದೆ. ಮುಂದೆ ಇದೇ ರೀತಿ ಮಳೆಯಾದರೆ. ಇಲ್ಲಿ ಬೆಳೆ ಕಾಣಬಹುದು. ಇಲ್ಲವಾದರೆ ಜಾನುವಾರುಗಳಿಗೆ ಮೇವು ದೊರಕುವುದು ಕಷ್ಟಕರವಾಗಲಿದೆ ಎನ್ನುತ್ತಾರೆ ಈ ಭಾಗದ ರೈತರು.

ADVERTISEMENT

ಮಳೆ ಕೈಕೊಟ್ಟಿದ್ದರಿಂದ ರೈತರು ಜಮೀನುಗಳಲ್ಲಿ ಉಳುಮೆ ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ 15 ದಿನಗಳಿಂದಾದ ಮಳೆಯಿಂದಾಗಿ ಉಳಿಮೆ, ಬಿತ್ತನೆ ಬೀಜ, ಗೊಬ್ಬರ ಟ್ರ್ಯಾಕ್ಟರ್ ಮತ್ತು ಕೂಲಿಯಾಳುಗಳಿಗೆ ಬೇಡಿಕೆ ಹೆಚ್ಚಾಗಿದೆ.

ತಾಲ್ಲೂಕಿನ ಕೆಲವೆಡೆ ರಾಗಿ ಬಿತ್ತನೆ ಕಾರ್ಯ ನಡೆಯುತ್ತಿದೆ. ಬಿತ್ತನೆಯಾಗಿರುವ ಬೆಳೆಗಳಿಗೆ ಅಂತರ ಬೇಸಾಯ ಮೇಲುಗೊಬ್ಬರ, ಕಳೆ ತೆಗೆಯುವ ಕಾರ್ಯ ನಡೆಯುತ್ತಿದೆ. ಮುನ್ನ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ಸಾವೆ ಕಟಾವು ನಡೆಯುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ ಎಸ್ ಈಶ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.