ADVERTISEMENT

ಎಸ್‌ಸಿ, ಎಸ್‌ಟಿ ಹಣ ದೋಚುತ್ತಿರುವ ಸರ್ಕಾರ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 15:46 IST
Last Updated 10 ಮಾರ್ಚ್ 2025, 15:46 IST

ಚಿತ್ರದುರ್ಗ: ‘ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳಿಗೆ ಮೀಸಲಿಟ್ಟಿರುವ ಸಾವಿರಾರು ಕೋಟಿ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ. ದಲಿತರಿಗೆ ವಂಚಿಸುತ್ತಿರುವ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ’ ಎಂದು ಭಾರತ್ ಏಕತಾ ಮಿಷನ್ ಭೀಮ್ ಆರ್ಮಿ ರಾಜ್ಯ ಘಟಕದ ಅಧ್ಯಕ್ಷ ರಾಜಗೋಪಾಲ್ ಆರೋಪಿಸಿದರು.

‘ಎಸ್‌ಸಿ, ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಅವರಿಗೆ ಮೀಸಲಿಟ್ಟ ಹಣವನ್ನು ದೋಚುತ್ತಿದ್ದಾರೆ. 2023-24ನೇ ಸಾಲಿನಲ್ಲಿ ₹ 11,144 ಕೋಟಿ, 2024-25ನೇ ಸಾಲಿನಲ್ಲಿ ₹ 14,282 ಕೋಟಿಯನ್ನು ಬೇರೆ ಉದ್ದೇಶಗಳಿಗೆ ಖರ್ಚು ಮಾಡಿರುವುದು ಮಹಾ ವಂಚನೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಅನ್ಯ ಮಾರ್ಗದಲ್ಲಿ ದಲಿತರ ಹಣ ದೋಚುತ್ತಿರುವುದನ್ನು ನಿಲ್ಲಿಸುವವರೆಗೂ ನಮ್ಮ ಹೋರಾಟ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿಗಳಿಗೆ ಹಣ ಬಳಸುವುದನ್ನು ಕೂಡಲೇ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮೂರು ತಿಂಗಳ ಹಿಂದೆ ಸೆಕ್ಷನ್ 70 ರದ್ದುಪಡಿಸಿರುವ ರಾಜ್ಯ ಸರ್ಕಾರ ದಲಿತರ ಹಣಕ್ಕೆ ಕೈಹಾಕಿದೆ. ದಲಿತರ ಪರವಾಗಿದ್ದೇವೆಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬದ್ಧತೆ ಸಾಬೀತುಪಡಿಸಲಿ. ನಾಲ್ಕೈದು ಜಿಲ್ಲೆಗಳಲ್ಲಿ ನಮ್ಮ ಹೋರಾಟ ಸಮಿತಿಯಿದೆ. ಈಗಾಗಲೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಮಾಡಿದ್ದೇವೆ’ ಎಂದು ದಲಿತ ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್.ಜಗನ್ನಾಥ್ ಹೇಳಿದರು.

ಏಕತಾ ಮಿಷನ್‌ನ ರಾಜ್ಯ ಘಟಕದ ಉಪಾಧ್ಯಕ್ಷ ಅವಿನಾಶ್, ದಲಿತ ಸೇನೆ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜು ಗೋಳೂರು, ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.