ADVERTISEMENT

ಬ್ಯಾಂಕ್‌ಗಳು ಹೆಚ್ಚು ಶೈಕ್ಷಣಿಕ ಸಾಲ ವಿತರಿಸಲಿ: ಸಂಸದ ಗೋವಿಂದ ಕಾರಜೋಳ

ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 5:13 IST
Last Updated 25 ಸೆಪ್ಟೆಂಬರ್ 2025, 5:13 IST
ಚಿತ್ರದುರ್ಗದಲ್ಲಿ ಲೀಡ್‌ ಬ್ಯಾಂಕ್‌ ವತಿಯಿಂದ ಸಂಸದ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ ಸಭೆ ಬುಧವಾರ ನಡೆಯಿತು
ಚಿತ್ರದುರ್ಗದಲ್ಲಿ ಲೀಡ್‌ ಬ್ಯಾಂಕ್‌ ವತಿಯಿಂದ ಸಂಸದ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ ಸಭೆ ಬುಧವಾರ ನಡೆಯಿತು   

ಚಿತ್ರದುರ್ಗ: ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಹೆಚ್ಚಿರುವ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಬ್ಯಾಂಕ್‌ಗಳು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಹೆಚ್ಚು ಶೈಕ್ಷಣಿಕ ಸಾಲ ನೀಡಬೇಕು’ ಎಂದು ಸಂಸದ ಗೋವಿಂದ ಕಾರಜೋಳ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ನಡೆದ 2025-26ನೇ ಸಾಲಿನ ಡಿ.ಎಲ್.ಆರ್.ಸಿ (ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ) ಹಾಗೂ ಡಿಸಿಸಿ (ಜಿಲ್ಲಾ ಸಲಹಾ ಸಮಿತಿ) ಎರಡನೇ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ 2025-26ನೇ ಸಾಲಿಗೆ ₹ 33.71 ಕೋಟಿ ಶೈಕ್ಷಣಿಕ ಸಾಲ ನೀಡುವ ಗುರಿಯನ್ನು ಬ್ಯಾಂಕ್‍ಗಳಿಗೆ ನೀಡಲಾಗಿದೆ. ಆದರೆ ಬ್ಯಾಂಕ್‌ಗಳು ಕೇವಲ ₹ 3.21 ಕೋಟಿ ಸಾಲ ವಿತರಣೆ ಮಾಡಿವೆ. ಇದೇ ಮಾದರಿಯಲ್ಲಿ ಗೃಹಸಾಲಕ್ಕೆ ನಿಗದಿ ಪಡಿಸಿದ ₹ 163.32 ಕೋಟಿ ಪೈಕಿ ಕೇವಲ ₹ 19.98 ಕೋಟಿ ಸಾಲ ವಿತರಿಸಲಾಗಿದೆ. ಬ್ಯಾಂಕ್‌ಗಳು ಶಿಕ್ಷಣ ಹಾಗೂ ಗೃಹ ನಿರ್ಮಾಣಕ್ಕೆ ಉತ್ತೇಜನ ನೀಡುವ ಮೂಲಕ ಜಿಲ್ಲೆಯ ಪ್ರಗತಿಗೆ ಸಹಕಾರಿಯಾಗಬೇಕು’ ಎಂದು ಸೂಚಿಸಿದರು.

ADVERTISEMENT

ಜಿ.ಪಂ. ಸಿಇಒ ಡಾ.ಎಸ್‌. ಆಕಾಶ್ ಮಾತನಾಡಿ ‘ಬ್ಯಾಂಕ್‌ಗಳು ಜಿಲ್ಲೆಯ ನಾಗರಿಕರಿಂದ ಸಂಗ್ರಹಿಸಿದ ಠೇವಣಿಗೆ ಸಂವಾದಿಯಾಗಿ ಶೇ 60ರಷ್ಟು ಸಾಲವನ್ನು ಸ್ಥಳೀಯರಿಗೆ ನೀಡಬೇಕು. ಕೆಲ ಬ್ಯಾಂಕ್‌ಗಳು ಸಾಲ ಮಂಜೂರಾತಿ ಅನುಪಾತವನ್ನು ಪಾಲಿಸುತ್ತಿಲ್ಲ. ಬ್ಯಾಂಕ್‌ಗಳ ಈ ಪ್ರವೃತ್ತಿ ಬದಲಾಗಬೇಕು. ಈಗಾಗಲೇ ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಬ್ಯಾಂಕ್‍ಗಳೊಂದಿಗೆ ಸಮನ್ವಯ ಸಾಧಿಸಲು ಬ್ಯಾಂಕ್ ಸಖಿಯರನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದರು.

‘2025-26ನೇ ಸಾಲಿಗೆ 6,766 ಎಸ್.ಎಚ್.ಜಿಗಳಿಗೆ ಸಾಲ ಸೌಲಭ್ಯದ ಗುರಿ ನಿಗದಿ ಪಡಿಸಲಾಗಿದೆ. 1,294 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 1,115 ಎಸ್.ಎಚ್.ಜಿಗಳಿಗೆ ಈಗಾಗಲೇ ಸಾಲ ಸೌಲಭ್ಯ ನೀಡಲಾಗಿದೆ. 150 ಅರ್ಜಿಗಳು ಬಾಕಿದ್ದು, 29 ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಗಾಯಿತ್ರಿ ಸಭೆಗೆ ಮಾಹಿತಿ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ ‘ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರೀಕರಣ ಯೋಜನೆ ಅಡಿ ಜಿಲ್ಲೆಯಲ್ಲಿ 100 ಘಟಕಗಳಿಗೆ ಸಾಲ ಸೌಲಭ್ಯ ನೀಡಲು ಗುರಿ ನಿಗದಿ ಮಾಡಲಾಗಿದೆ. 40 ಅರ್ಜಿಗಳು ಸ್ವೀಕೃತವಾಗಿವೆ. 5 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದ್ದು, 34 ಅರ್ಜಿಗಳು ಬಾಕಿಯಿವೆ. 1 ಅರ್ಜಿಯನ್ನು ತಿರಸ್ಕರಿಸಲಾಗಿದೆ. ಯೋಜನೆಗೆ ರಾಜ್ಯ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ’ ಎಂದರು.

‘ಬ್ಯಾಂಕ್‌ಗಳು ಕೃಷಿ, ಶಿಕ್ಷಣ, ವಸತಿ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆ ಹಾಗೂ ಇತರೆ ಸರ್ಕಾರದ ಯೋಜನೆಗಳಡಿ ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯ ನೀಡಲು ವಿಳಂಬ ಮಾಡಬಾರದು. ಈ ಅರ್ಜಿಗಳನ್ನು ಸಿಬಿಲ್ ಸ್ಕೋರ್ ಕಾರಣ ಹೇಳಿ ತಿರಸ್ಕರಿಸಬಾರದು’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ ಎಂ. ಹೇಳಿದರು.

ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿ ಅತೀಕ್‌, ಆರ್‌ಬಿಐ ಪ್ರಬಂಧಕ ಅರುಣ್ ಕುಮಾರ್, ಕೆನರಾ ಬ್ಯಾಂಕ್ ವಲಯ ಪ್ರಬಂಧಕಿ ಅನಿತಾ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿನಂತ್ ಕೆ., ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಪ್ರಬಂಧಕ ಜನಾರ್ಧನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.