ADVERTISEMENT

ಸದಸ್ಯರಿಗೆ ಪ್ರವಾಸ ಭಾಗ್ಯ; ಆಕಾಂಕ್ಷಿಗಳಿಗೆ ಹೊರೆ

ಪ್ರಜಾವಾಣಿ ವಿಶೇಷ; ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇನ್ನೂ ನಿಗದಿಯಾಗದ ದಿನಾಂಕ; ಆಕಾಂಕ್ಷಿಗಳಗೆ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಸವಾಲು

ಕೊಂಡ್ಲಹಳ್ಳಿ ಜಯಪ್ರಕಾಶ
Published 1 ಜುಲೈ 2023, 7:35 IST
Last Updated 1 ಜುಲೈ 2023, 7:35 IST
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿ ಗ್ರಾಮಪಂಚಾಯಿತಿ ಸದಸ್ಯರು ಈಚೆಗೆ ಧರ್ಮಸ್ಥಳ ಪ್ರವಾಸಕ್ಕೆ ತೆರಳಿದ್ದಾಗ ತೆಗೆಸಿಕೊಂಡಿರುವ ಚಿತ್ರ
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿ ಗ್ರಾಮಪಂಚಾಯಿತಿ ಸದಸ್ಯರು ಈಚೆಗೆ ಧರ್ಮಸ್ಥಳ ಪ್ರವಾಸಕ್ಕೆ ತೆರಳಿದ್ದಾಗ ತೆಗೆಸಿಕೊಂಡಿರುವ ಚಿತ್ರ   

ಮೊಳಕಾಲ್ಮುರು: ಗ್ರಾಮ ಪಂಚಾಯಿಗಳ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಈಚೆಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ನಿರೀಕ್ಷೆ ಗರಿಗೆದರಿದ್ದು, ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯಿಂದ ಸದಸ್ಯರ ಮನವೊಲಿಕೆಯಲ್ಲಿ ತೊಡಗಿದ್ದಾರೆ. ಕೆಲವು ಆಕಾಂಕ್ಷಿಗಳು ಸದಸ್ಯರಿಗೆ ಪ್ರವಾಸ ಭಾಗ್ಯ ಕಲ್ಪಿಸಿದ್ದಾರೆ.

ತಾಲ್ಲೂಕಿನಲ್ಲಿ 16 ಗ್ರಾಮ ಪಂಚಾಯಿತಿಗಳಿದ್ದು, ಈ ಪೈಕಿ 12 ಪಂಚಾಯಿತಿಗಳು ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾಗಿವೆ. 4 ಪಂಚಾಯಿತಿಗಳು ಸಾಮಾನ್ಯಕ್ಕೆ ಮೀಸಲಾಗಿವೆ.ಜೂ.19ರಂದು ಇಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಮೀಸಲಾತಿಯನ್ನು ಪ್ರಕಟಿಸಿದ್ದರು. ಇದರ ಮರುದಿನವೇ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಆಕಾಂಕ್ಷಿಗಳು ಪ್ರವಾಸ ಕರೆದುಕೊಂಡು ಹೋಗಲು ಆರಂಭಿಸಿದ್ದಾರೆ.

ಕೆಲ ಪಂಚಾಯಿತಿಗಳ ಸದಸ್ಯರು ಪ್ರವಾಸಿ ತಾಣಗಳಲ್ಲಿ ಹಾಗೂ ದೇವಸ್ಥಾನಗಳ ಬಳಿ ನಿಂತು ಒಗ್ಗಟ್ಟು ಪ್ರದರ್ಶಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ADVERTISEMENT

‘ಪಕ್ಷಕ್ಕೆ ಸದಸ್ಯರು ನಿಷ್ಠರಾಗಿರಬೇಕು. ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡಬಾರದು ಎಂಬ ಕಾರಣಕ್ಕೆ ಅವರಲ್ಲಿ ಒಗ್ಗಟ್ಟು ಮೂಡಿಸಲು ಈಚೆಗೆ ಧರ್ಮಸ್ಥಳ ಭಾಗಕ್ಕೆ 2 ದಿನ ಪ್ರವಾಸ ಕರೆದುಕೊಂಡು ಹೋಗಲಾಗಿತ್ತು. ಚುನಾವಣೆ ದಿನಾಂಕ ನಿಗದಿಯಾದ ನಂತರವೂ ಮತ್ತೆ ಮೂರ್ನಾಲ್ಕು ದಿನ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕಾಗುತ್ತದೆ. ದೇವಸ್ಥಾನಗಳಿಗೆ ತೆರಳಿದರೆ, ದಿನಕ್ಕೆ ₹30ರಿಂದ ₹40 ಸಾವಿರ ಖರ್ಚು ತಗಲುತ್ತದೆ. ಪ್ರವಾಸಿ ತಾಣಗಳಿಗೆ ಹೋದಲ್ಲಿ ಇದರ ದುಪ್ಪಟ್ಟು ಖರ್ಚಾಗುತ್ತದೆ’ ಎಂದು ಈಚೆಗೆ ಪ್ರವಾಸ ಮುಗಿಸಿಕೊಂಡು ಬಂದಿರುವ ಕೊಂಡ್ಲಹಳ್ಳಿ ಪಂಚಾಯಿತಿ ಸದಸ್ಯ ಬಿ.ಟಿ. ಹನುಮಾರೆಡ್ಡಿ ಹೇಳಿದರು.

ಗ್ರಾಮ ಪಂಚಾಯಿತಿ ಚುಕ್ಕಾಣಿ ಹಿಡಿಯುವ ಆಕಾಂಕ್ಷೆಯಿದೆ. ಚುನಾವಣಾ ದಿನಾಂಕ ನಿಗದಿಯಾಗುವುದನ್ನೇ ಎದುರು ನೋಡುತ್ತಿದ್ದೇವೆ. ಚುನಾವಣೆ ತಡೆವಾದಷ್ಟೂ ನಿತ್ಯದ ಖರ್ಚು ಸುಧಾರಿಸಿಕೊಳ್ಳುವುದು ಕಷ್ಟವಾಗುತ್ತದೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ಚುನಾವಣೆಯಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶವ ಹೆಚ್ಚು ಪರಿಣಾಮ ಬೀರಲಿದೆ. ಕೆಲ ಪಂಚಾಯಿತಿಗಳಲ್ಲಿ ಸದಸ್ಯರ ಪಕ್ಷಾಂತರ ನಡೆಯುವ ಸೂಚನೆಗಳಿವೆ.
ದಾನಸೂರನಾಯಕ ಮಾಜಿ ಸದಸ್ಯ ಮರ್ಲಹಳ್ಳಿ
ಚುನಾವಣಾ ದಿನಾಂಕ ಯಾವಾಗ?
ಜಿಲ್ಲಾಧಿಕಾರಿಗಳು ಮೀಸಲಾತಿಯನ್ನು ಪ್ರಕಟಿಸಿದ್ದು ಚುನಾವಣೆಗೆ ಸಂಬಂಧಪಟ್ಟಂತೆ ಯಾವ ಪೂರಕ ಚಟುವಟಿಕೆಗಳ ಮಾಹಿತಿಯನ್ನೂ ಈವರೆಗೆ ನೀಡಿಲ್ಲ ಎಂದು ತಹಶೀಲ್ದಾರ್ ಎಂ.ವಿ. ರೂಪಾ ಗುರುವಾರ ತಿಳಿಸಿದ್ದಾರೆ. ಮೀಸಲಾತಿ ಪ್ರಕಟವಾದ ನಂತರ ಚುನಾವಣಾಧಿಕಾರಿಗಳ ಪಟ್ಟಿಯನ್ನು ಅಂತಿಮ ಮಾಡಲಾಗುವುದು. ನಂತರ ಅವರಿಗೆ ಇಂತಿಷ್ಟು ಪಂಚಾಯಿತಿಗಳ ಜವಾಬ್ದಾರಿ ನೀಡಲಾಗುವುದು. ಚುನಾವಣಾಧಿಕಾರಿಗಳು ಪಂಚಾಯಿತಿವಾರು ಆಯ್ಕೆ ದಿನಾಂಕ ಪ್ರಕಟಿಸುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.  ಸದ್ಯದ ಪ್ರಕಾರ ಚುನಾವಣೆಗೆ ಇನ್ನೂ 15 ದಿನ ಕಾಲಾವಕಾಶ ಬೇಕಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಕೆ.ಇ. ಜಾನಕೀರಾಮ್ ತಿಳಿಸಿದ್ದಾರೆ. ‘2021 ಜ.8ರಂದು ನನ್ನ ಆಯ್ಕೆ ನಡೆದಿದ್ದು 30 ತಿಂಗಳ ಅಧಿಕಾರದಂತೆ 2023 ಆ.8ಕ್ಕೆ ಅವಧಿ ಪೂರ್ಣವಾಗುತ್ತದೆ. ಅಲ್ಲಿಯವರೆಗೆ ಹೊಸ ಅಧ್ಯಕ್ಷರ ಆಯ್ಕೆ ಮಾಡಲು ಬರುವುದಿಲ್ಲ. ಮಾಡಿದರೂ ಆ ದಿನಾಂಕದ ಬಳಿಕವೇ ಅಧಿಕಾರ ಹಸ್ತಾಂತರ ಮಾಡಬೇಕಾಗುತ್ತದೆ ಎಂದು ರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ವರಪ್ಪ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.