
ಹೊಸದುರ್ಗದ ನಾಗತಿಹಳ್ಳಿಯಲ್ಲಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆರತಿ ಭಾನೋತ್ಸವ ನಡೆಯಿತು
ಹೊಸದುರ್ಗ: ತಾಲ್ಲೂಕಿನ ಮಾಡಿದಕೆರೆ ಹೋಬಳಿಯ ನಾಗತಿಹಳ್ಳಿ ಗ್ರಾಮದಲ್ಲಿ ಈಶ್ವರಸ್ವಾಮಿ, ನಂದಿ ಬಸವೇಶ್ವರ ಸ್ವಾಮಿ ಹಾಗೂ ದೇವಪುರದ ಕೆರೆಯಾಗಳಮ್ಮ ದೇವಿಯ ಆರತಿ ಭಾನೋತ್ಸವ ಮಂಗಳವಾರ ನಸುಕಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಆರತಿ ಭಾನೋತ್ಸವದ ಅಂಗವಾಗಿ ಗ್ರಾಮದ ಪಂಚಲಿಂಗೇಶ್ವರ ಸ್ವಾಮಿ ಹಾಗೂ ಬಸವೇಶ್ವರ ಸ್ವಾಮಿ ದೇವರುಗಳಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಲಾಯಿತು. ಸೋಮವಾರ ರಾತ್ರಿ 10.30ರ ಸುಮಾರಿಗೆ ದೇವಪುರದ ಕೆರೆಯಾಗಳಮ್ಮ ದೇವಿ ನಾಗತಿಹಳ್ಳಿ ಗ್ರಾಮಕ್ಕೆ ಆಗಮಿಸಿತು. ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಮಹಿಳೆಯರು ಮೀಸಲು ನವಣಕ್ಕಿಯಿಂದ ತಂಬಿಟ್ಟಿನ ಆರತಿ ತಯಾರಿಸಿ, ಅದಕ್ಕೆ ಅಲಂಕಾರ ಮಾಡಿ, ತಲೆಮೇಲೆ ಹೊತ್ತು ದೇವರ ಹಿಂದೆ ಸಾಗಿದರು. ಮಂಗಳವಾರ ನಸುಕಿನಲ್ಲಿ ಆರಂಭವಾದ ಆರತಿ ಭಾನೋತ್ಸವ ಸೂರ್ಯ ಉದಯಿಸುವವರೆಗೂ ನಡೆಯಿತು. ಭಕ್ತರು ದೇವರ ದರ್ಶನ ಪಡೆದು, ಸೋಮನ ಕುಣಿತವನ್ನು ಕಣ್ತುಂಬಿಕೊಂಡರು.
ಗ್ರಾಮದ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.