ADVERTISEMENT

ಹುಸಿ ಭರವಸೆಗೆ ರೋಸಿ ಹೋದ ಜನ

ಮೊಳಕಾಲ್ಮುರು: ಕ್ರೀಡಾಂಗಣ ನಿರ್ಮಿಸಲು ಭೂಮಿ ಸಿಗುತ್ತಿಲ್ಲ

ಕೊಂಡ್ಲಹಳ್ಳಿ ಜಯಪ್ರಕಾಶ
Published 1 ಜುಲೈ 2022, 2:19 IST
Last Updated 1 ಜುಲೈ 2022, 2:19 IST
ಮೊಳಕಾಲ್ಮುರು ತಾಲ್ಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಕಿಷ್ಕಿಂಧೆಯಂಥ ಸ್ಥಳದಲ್ಲಿ ಕಬಡ್ಡಿ ಆಡುತ್ತಿರುವ ವಿದ್ಯಾರ್ಥಿಗಳು.
ಮೊಳಕಾಲ್ಮುರು ತಾಲ್ಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಕಿಷ್ಕಿಂಧೆಯಂಥ ಸ್ಥಳದಲ್ಲಿ ಕಬಡ್ಡಿ ಆಡುತ್ತಿರುವ ವಿದ್ಯಾರ್ಥಿಗಳು.   

ಮೊಳಕಾಲ್ಮುರು: ಪಟ್ಟಣದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಿಸಲಾಗುವುದು ಎಂಬ ಮಾತುಗಳು ಎರಡು ದಶಕಗಳಿಂದಲೂ ಕೇಳಿ ಬರುತ್ತಿವೆಯೇ ವಿನಾ ಈ ಕುರಿತ ಬೆಳವಣಿಗೆಗಳು ಮಾತ್ರ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಅತ್ಯಂತ ಹಿಂದುಳಿದ ಹಾಗು ಆಂಧ್ರದ ಗಡಿಗೆ ಅಂಟಿಕೊಂಡಿರುವ ಮೊಳಕಾಲ್ಮುರಿನಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿವೆ. ತಾಲ್ಲೂಕು ಕೇಂದ್ರ ಸೇರಿದಂತೆ ಹೋಬಳಿ ಸ್ಥಳಗಳಾದ ರಾಂಪುರ, ನಾಗಸಮುದ್ರ, ಬಿ.ಜಿ. ಕೆರೆ, ಕೊಂಡ್ಲಹಳ್ಳಿಯಲ್ಲೂ ಕ್ರೀಡಾಪಟುಗಳ ಅಭ್ಯಾಸಕ್ಕೆ ಸ್ಥಳವಿಲ್ಲವಾಗಿದೆ. ಪಟ್ಟಣದಲ್ಲಿ ಹೊರಾಂಗಣ ಮತ್ತು ಒಳಾಂಗಣ ಕ್ರೀಡೆಗಳಿಗೆ ಕಿಂಚತ್ತೂ ಸೌಲಭ್ಯವಿಲ್ಲ. ಆಡಲೇಬೇಕು ಎನ್ನುವವರು ಶಾಲೆ– ಕಾಲೇಜುಗಳ ಕಿರಿದಾದ ಮೈದಾನ ಅಥವಾ ಪಾಳು ಜಮೀನುಗಳನ್ನೇ ಅವಲಂಬಿಸಬೇಕು ಎಂಬ ಸ್ಥಿತಿ ಇದೆ.

ಕ್ರೀಡಾಂಗಣ ನಿರ್ಮಿಸುವುದಾಗಿ ಜನಪ್ರತಿನಿಧಿಗಳು ನೀಡುತ್ತಿರುವ ಹುಸಿ ಭರವಸೆಯಿಂದಾಗಿ ಜನ ರೋಸಿ ಹೋಗಿದ್ದಾರೆ.

ADVERTISEMENT

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ವ್ಯಾಪ್ತಿಯಲ್ಲಿ 3-4 ಎಕರೆಗಳಷ್ಟು ಭೂಮಿ ಇದೆ. ಇಲ್ಲಿ ಸರ್ಕಾರಿ, ಖಾಸಗಿ ಶಾಲೆಗಳ ಕ್ರೀಡಾಕೂಟಗಳನ್ನು ನಡೆಸಲಾಗುತ್ತದೆ. ಕೆಲ ವರ್ಷಗಳ ಹಿಂದೆ ಇಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಂಗಣ ನಿರ್ಮಿಸಲಾಗುವುದು ಎಂಬ ಮಾತು ಕೇಳಿ ಬಂದವು. ಅನುದಾನ ಮಂಜೂರಾಗಿದೆ
ಎಂದು ಪ್ರಚಾರವನ್ನೂ ಮಾಡಲಾಯಿತು. ಆದರೆ, ಇದುವರೆಗೆ ಇದಕ್ಕೆ ಸಂಬಂಧಪಟ್ಟಂತೆ ಸಣ್ಣ ಪ್ರಗತಿಯಾಗಿಲ್ಲ. ಪಟ್ಟಣದ ಕ್ರೀಡಾಪಟುಗಳು ಕ್ರಿಕೆಟ್ ಆಡಲೂ ಹರಸಾಹಸ ಪಡಬೇಕಾಗಿದೆ ಎಂದು ಕ್ರೀಡಾಪ್ರೇಮಿಗಳಾದ ಆದರ್ಶ, ಸಂತೋಷ್ ಹೇಳಿದರು.

ಕೇಂದ್ರ ಸರ್ಕಾರದ ನೂತನ ಆದೇಶದಂತೆ ‘ಖೇಲೋ ಇಂಡಿಯಾ ಯೋಜನೆ’ ಅಡಿ ಕ್ರೀಡಾಂಗಣ ಮಂಜೂರಿಗೆ ₹ 6 ಕೋಟಿ ಅನುದಾನ ನೀಡಲಾಗುತ್ತಿದೆ. ಆದರೆ, ಕನಿಷ್ಠ 6 ಎಕರೆಯಷ್ಟು ಸ್ಥಳವಿರಬೇಕು ಎಂಬ ನಿಯಮವಿದೆ. ಇದರಿಂದಾಗಿ ಸರ್ಕಾರಿ ಜೂನಿಯರ್ ಕಾಲೇಜು ಹಿಂಭಾಗದಲ್ಲಿರುವ ಜಾಗೆಯಲ್ಲಿ ಕ್ರೀಡಾಂಗಣ ನಿರ್ಮಿಸಲು ಸಾಧ್ಯವಾಗಲಿಲ್ಲ. ಪಟ್ಟಣದ
ಸುತ್ತಮುತ್ತ ಸರ್ಕಾರಿ ಮತ್ತು ಖಾಸಗಿ ಜಮೀನು ಹುಡುಕಲಾಗುತ್ತಿದ್ದು, ರಾಯಾಪುರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಖಾಸಗಿ ಜಮೀನು ಸಿಕ್ಕಲ್ಲಿ ಖರೀದಿಸಿ ಕ್ರೀಡಾಂಗಣ ನಿರ್ಮಿಸಲು ಸಚಿವ ಶ್ರೀರಾಮುಲು ಸೂಚಿಸಿದ್ದಾರೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ್ ಮಾಹಿತಿ ನೀಡಿದರು.

ರಾಜ್ಯ ಸರ್ಕಾರವು ಈಚೆಗೆ ಪಟ್ಟಣದಲ್ಲಿ ಷಟಲ್ ಬ್ಯಾಡ್ಮಿಂಟನ್ ಮತ್ತು ಜಿಮ್‌ಗಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು
₹ 1.60 ಕೋಟಿ ಮಂಜೂರು ಮಾಡಿದೆ. ಇದರಲ್ಲಿ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ತೋಟಗಾರಿಕೆ ಕಚೇರಿ ಪಕ್ಕದಲ್ಲಿರುವ ಯುವಕರ ಸಂಘಕ್ಕೆ ಸೇರಿದ ಸ್ಥಳದಲ್ಲಿ ಇದನ್ನು ನಿರ್ಮಿಸಲಾಗುವುದು. ಜುಲೈ 2ರಂದು ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

...........

ಕ್ರೀಡಾಂಗಣ ನಿರ್ಮಾಣಕ್ಕೆ ಸಾಕಷ್ಟು ಸ್ಥಳಗಳ ಹುಡುಕಾಟ ನಡೆಸಲಾಗಿದೆ. ಲಭ್ಯವಾಗದ ಕಾರಣ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಿರ್ಮಿಸುವುದು ಅಂತಿಮವಾಗುವ ಸಾಧ್ಯತೆಯಿದೆ.
- ಪಿ. ಲಕ್ಷ್ಮಣ್, ಅಧ್ಯಕ್ಷರು, ಪಟ್ಟಣ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.